ಆಡ್ತಾ ಆಡ್ತಾನೇ ಸಾಯೋ ಬ್ಲೂವೇಲ್‌ ಆಟಕ್ಕೆ ಬಾಲಕ ಬಲಿ

ಮುಂಬೈ : ರಷ್ಯಾ ಮೂಲದ ಬ್ಲೂ ವೇಲ್‌ ಆಟಕ್ಕೆ ಮುಂಬೈನ 14 ವರ್ಷದ ಬಾಲಕ ಬಲಿಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಏಳಂತಸ್ತಿನ ಕಟ್ಟಡದ ಮೇಲೆ ಕುಳಿತಿದ್ದ ಬಾಲಕ ತನ್ನ ಕಾಲಿನ ಫೋಟೊವನ್ನು ತೆಗೆದು ಇನ್ನು ಮುಂದೆ ನನ್ನ ಇದೊಂದೇ ಫೋಟೊ ನೋಡಬೇಕಾಗಿರುವುದು ಎಂದು ಶೀರ್ಷಿಕೆ ನೀಡಿದ್ದಾನೆ. ಸಾವನ್ನಪ್ಪಿರುವ ಬಾಲಕ ಮನ್‌ಪ್ರೀತ್‌ ಸಹಾನ್ಸ್‌, ಶನಿವಾರ ತನ್ನ ಸ್ನೇಹಿತರ ಬಳಿ ನಾನು ಬ್ಲೂ ವೇಲ್ ಗೇಮ್ ಆಡಬೇಕು. ಸೋಮವಾರ ಶಾಲೆಗೆ ಬರುವುದಿಲ್ಲ ಎಂದಿದ್ದ. ಅಲ್ಲದೆ ಕಳೆದ ಒಂದು ವಾರದಿಂದ ಆತನ ವರ್ತನೆ ವಿಚಿತ್ರವಾಗಿರುವುದು ಪೋಷಕರ ಗಮನಕ್ಕೂ ಬಂದಿತ್ತು. ಆದರೆ ಆತ ಬ್ಲೂವೇಲ್‌ ಆಟದ ಚಟಕ್ಕೆ ಬಿದ್ದಿದುದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಎರಡು ದಿನಗಳ ಹಿಂದೆ ಮನ್‌ಪ್ರೀತ್‌ ಇಂಟರ್‌ನೆಟ್‌ನಲ್ಲಿ ಮಹಡಿಯಿಂದ ಜಿಗಿಯುವ ಬಗೆ ಹೇಗೆ ಎಂಬುದನ್ನು ಹುಡುಕಿದ್ದ ಎಂದು ಪೊಲೀಸರು ಹೇಳಿದ್ದಾರೆ.  ಇನ್ನು ಘಟನೆ ಕುರಿತು ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸಿಎಂ ಫಡ್ನವೀಸ್‌, ಬ್ಲೂವೇಲ್‌ ಆಟ ಅಪಾಯಕಾರಿಯಾಗಿದ್ದು, ಎಲ್ಲರೂ ಇದರಿಂದ ಭೀತಿಗೊಳಗಾಗಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.

ಏನಿದು ಬ್ಲೂವೇಲ್ ಗೇಮ್‌

ಮೂಲತಃ ರಷ್ಯಾದಲ್ಲಿ ಹುಟ್ಟಿಕೊಂಡಿರುವ ಬ್ಲೂ ವೇಲ್‌ ಸೂಸೈಡ್‌ ಚಾಲೆಂಗ್‌ ಗೇಮ್‌ ಆನ್‌ಲೈನ್‌ ಆಟವಾಗಿದ್ದು, ರಷ್ಯಾ ಸೇರಿದಂತೆ ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸುಮಾರು 180ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಆಟದಲ್ಲಿ ಆಟಗಾರನಿಗೆ 50 ಸರಣಿಯ ಟಾಸ್ಕ್‌ ನೀಡಲಾಗುತ್ತದೆ. ನಂತರ 50ನೇ ಟಾಸ್ಕ್‌ಗೆ ಬಂದಾಗ ಮಹಡಿಯಿಂದ ಜಿಗಿಯುವಂತೆ ಆಟದಲ್ಲಿ ಸೂಚನೆ ನೀಡಲಾಗುತ್ತದೆ. ಅಲ್ಲದೆ ಸಾಯುವುದಕ್ಕೂ ಮುನ್ನ ತಾವು ಆಟವನ್ನು ಕೊನೆಗೊಳಿಸಿದ್ದೇವೆ ಎನ್ನಲು ತಮ್ಮ ಫೋಟೊವನ್ನು ತೆಗೆದು ಸಾಕ್ಷಿ ನೀಡುವಂತೆ ಕೇಳುತ್ತದೆ. ಅಲ್ಲದೆ ಈ ಆಟದಲ್ಲಿ ಹಾರರ್‌ ಸಿನಿಮಾಗಳನ್ನು ನೋಡುವ ಟಾಸ್ಕ್‌, ಆಟದಲ್ಲಿ ಸೂಚಿಸುವಂತೆ ಗಂಟೆ ಗಟ್ಟಲೆ ನಡೆಯುತ್ತಲೇ ಇರುವುದು.  ತಮಗೆ ತಾವೇ ಹಾನಿ ಮಾಡಿಕೊಳ್ಳುವುದು, ಈ ರೀತಿಯ ಸೂಚನೆಗಳನ್ನು ನೀಡುತ್ತದೆ. ಏನೂ ಅರಿವಿಲ್ಲದ ಮಕ್ಕಳು ಈ ಆಟದ ಚಟಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

 

Comments are closed.

Social Media Auto Publish Powered By : XYZScripts.com