ಕ್ಲಾಸ್ ರೂಮಲ್ಲೇ ಶಿಕ್ಷಕನ ನಿದ್ದೆ, ಫೋಟೊ ತೆಗೆದ ವಿದ್ಯಾರ್ಥಿಗೆ ಪೋಲೀಸರಿಂದ ಒದೆ..

ಮೆಹಬೂಬ್ ನಗರ : ಶಿಕ್ಷಕನ ಕೆಲಸ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು, ಆದರೆ ಇಲ್ಲೊಬ್ಬ ಶಿಕ್ಷಕ ಕ್ಲಾಸ್ ರೂಮ್ ನಲ್ಲೇ, ವಿದ್ಯಾರ್ಥಿಗಳ ಎದುರಲ್ಲೇ ನಿದ್ದೆಗೆ ಮೊರೆ ಹೋಗಿದ್ದಾನೆ. ಆಗ ವಿದ್ಯಾರ್ಥಿಯೊಬ್ಬ ಕ್ಲಾಸ್ ರೂಮ್ ನಲ್ಲಿ ನಿದ್ದೆ ಮಾಡುತ್ತಿದ್ದ ಶಿಕ್ಷಕನ ಫೋಟೊ ಕ್ಲಿಕ್ಕಿಸಿದ್ದಾನೆ. ಹೌದು, ತೆಲಂಗಾಣಾದ ಮೆಹಬೂಬ್ ನಗರದ ಶಾಲೆಯೊಂದರಲ್ಲಿ 10 ನೇ ತರಗತಿ ವಿದ್ಯಾರ್ಥಿ, ಗುರುವಾರ ತನ್ನ ಗಣಿತದ ಶಿಕ್ಷಕ ನಿದ್ದೆ ಮಾಡ್ತಿರೋ ಫೋಟೊ ತೆಗೆದಿದ್ದಾನೆ. ಅಷ್ಟು ಮಾತ್ರವಲ್ಲದೇ ಅದನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ವಾಟ್ಸ್ಯಾಪ್ ಮೂಲಕ ಕಳುಹಿಸಿದ್ದಾನೆ. ಆ ಬಳಿಕ ಕ್ರಮ ತೆಗೆದುಕೊಂಡ ಅಧಿಕಾರಿಗಳು ಶಿಕ್ಷಕನನ್ನು ಅಮಾನತು ಮಾಡಿದ್ದಾರೆ. ಇದು  ಶಾಲೆಯ ಶಿಕ್ಷಕ ಸಿಬ್ಬಂದಿಯವರನ್ನು ಕೆರಳಿಸಿತ್ತು.

ಆದರೆ ಶನಿವಾರ ಅದೇ ಹುಡುಗ ಪೋಲೀಸರಿಂದ ಪೆಟ್ಟು ತಿಂದಿದ್ದಾನೆ. ಪೋಲೀಸರಿಂದ ಪೆಟ್ಟು ತಿಂದದ್ದು, ನಿದ್ದೆ ಮಾಡ್ತಿರೊ ಶಿಕ್ಷಕನ ಫೋಟೊ ತೆಗೆದಿದ್ದಕ್ಕಲ್ಲ.. ಶನಿವಾರ ಈ ವಿದ್ಯಾರ್ಥಿ ಶಾಲೆಯ ಆವರಣದಲ್ಲೇ ಸ್ನೇಹಿತರೊಂದಿಗೆ ಕುಳಿತು ಸಾಫ್ಟ್ ಡ್ರಿಂಕ್ ಕುಡಿದು ಸಿಕ್ಕಿಬಿದ್ದಿದ್ದಾನೆ. ಇವನ ಉಳಿದ ಸ್ನೇಹಿತರೆಲ್ಲ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಯ ಶಿಕ್ಷಕ ಸಿಬ್ಬಂದಿ ಸ್ಥಳೀಯ ಪೋಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ವಿದ್ಯಾರ್ಥಿಯನ್ನು ಪೋಲೀಸರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ವರದಿಯಾಗಿದೆ.  ಆ ಹುಡುಗನ ಮೈ ತುಂಬಾ ಗಾಯದ ಕಲೆಗಳಾಗಿದ್ದು, ಪೋಲೀಸರು ತಾವು ವಿದ್ಯಾರ್ಥಿಯನ್ನು ಥಳಿಸಿಲ್ಲ ಎಂದು ಹೇಳಿದ್ದಾರೆ.

Comments are closed.