ಸಾವಿನ ಅಂಚಿನಲ್ಲಿದ್ದರೂ ಸಿಗದ ಆಂಬ್ಯುಲೆನ್ಸ್‌ ಸೇವೆ : ಬೈಕ್‌ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ರವಾನೆ

ಮೈಸೂರು: ಹೃದಯಾಘಾತವಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಆಂಬ್ಯುಲೆನ್ಸ್‌ ಸಿಗದೆ ಬೈಕ್‌ನಲ್ಲಿ ಕೂರಿಸಿಕೊಂಡು ಹೋದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಬೈಕ್‌ನಲ್ಲಿ ತೆರಳುವ ವೇಳೆ ಮಾರ್ಗಮಧ್ಯೆಯೇ ವ್ಯಕ್ತಿ ಮೃತಪಟ್ಟಿದ್ದಾನೆ. ಆಂಧ್ರ ಪ್ರದೇಶದ ನಿವಾಸಿಯಾಗಿರುವ ಕೂಲಿ ಕಾರ್ಮಿಕ ಗಾಂಧಿ (55), ತಂಬಾಕು ಕೆಲಸಕ್ಕಾಗಿ ಬಂದಿದ್ದರು. ಪಿರಿಯಾಪಟ್ಟಣ ತಾಲ್ಲೂಕಿನ ಸಂಗರಶೆಟ್ಟಿಹಳ್ಳಿ ಗ್ರಾಮದ ಚಂದ್ರು ಅವರ ಬಳಿ ತಂಬಾಕು ಎಲೆಗಳನ್ನು ಮುರಿದು ಕ್ಯೂರಿಂಗ್‌ ಮಾಡುವ ಕೆಲಸ ಮಾಡುತ್ತಿದ್ದರು. ಮುಂಜಾನೆ ಎಲೆಗಳನ್ನು ಮುರಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆತನನ್ನು ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಬೆಟ್ಟದಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚನೆ ನೀಡಿದ್ದಾರೆ. ತಕ್ಷಣವೇ ಚಂದ್ರು ಆ್ಯಂಬುಲೆನ್ಸ್ ಸಿಬ್ಬಂದಿ ಸಂಪರ್ಕಿಸಿದರೂ ವಾಹನ ಸಿಗದ ಕಾರಣ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಪಟ್ಟಣದ ಕ್ರೀಡಾಂಗಣ ಬಳಿ ಮತ್ತೊಮ್ಮೆ ತೀವ್ರ ಹೃದಯಾಘಾತ ಸಂಭವಿಸಿ ರಸ್ತೆಯಲ್ಲೇ ಕೂಲಿ ಕಾರ್ಮಿಕ ಗಾಂಧಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 

 

 

Comments are closed.