ನಾಳೆ ರಾಷ್ಟ್ರಪತಿ ಚುನಾವಣೆ : ಎನ್‌ಡಿಎ ಅಭ್ಯರ್ಥಿ ಕೋವಿಂದ್ ಗೆಲುವು ಸಾಧ್ಯತೆ

ದೆಹಲಿ : ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿ ಸ್ಥಾನ. ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ನಾಳೆ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ರಾಜ್ಯಗಳ ಶಾಸಕರುಗಳು, ಲೋಕಸಭೆ ಹಾಗೂ ರಾಜ್ಯ ಸಭಾ ಸಂಸದರು ಮತ ಚಲಾಯಿಸಲಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ನೇರವಾಗಿ ಜನಪ್ರತಿನಿಧಿಗಳ ಮತವನ್ನ ಲೆಕ್ಕ ಹಾಕದೇ ಅವರ ಮತ ಮೌಲ್ಯದ ಮೂಲಕ ಸಾಂವಿಧಾನಿಕವಾಗಿ ರಾಷ್ಟ್ರಪತಿಯನ್ನ ಆಯ್ಕೆ ಮಾಡಲಾಗುತ್ತೆ. ರಾಷ್ಟ್ರಪತಿ ಚುನಾವಣೆಯ ಒಟ್ಟು ಮತದಾರರು –  4896ಲೋಕಸಭೆ + ರಾಜ್ಯಸಭೆ ಸಂಸದರು ಮತ ಚಲಾಯಿಸಲಿದ್ದಾರೆ. ಜೊತೆಗೆ ಎಲ್ಲ ರಾಜ್ಯಗಳ ಶಾಸಕರು ಮತ ಚಲಾಯಿಸಲಿದ್ದಾರೆ. 2017ರ ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 4896. ಅದರಲ್ಲಿ ಲೋಕಸಭೆಯ ಒಟ್ಟು ಸಂಸದರು 543, ಹಾಗೂ ರಾಜ್ಯಸಭೆಯ 233 ಸಂಸದರು ಸೇರಿ ಒಟ್ಟು  776ಮತದಾರರಿದ್ದಾರೆ. ಇನ್ನು ಎಲ್ಲ ರಾಜ್ಯಗಳ ಒಟ್ಟು ಶಾಸಕರ ಸಂಖ್ಯೆ 4120 ಇದೆ.

1971ರ ಜನಗಣತಿ ಆಧರಿಸಿ ಶಾಸಕರು, ಸಂಸದರ ಮತ ಮೌಲ್ಯ ನಿರ್ಣಯವಾಗಲಿದೆ.  ರಾಷ್ಟ್ರಪತಿ ಚುನಾವಣೆಯಲ್ಲಿ ಈ ಬಾರಿ, ಎನ್‌ಡಿಎಯ ಮತಮೌಲ್ಯ 5,27,371 ಅದರಲ್ಲಿ ಲೋಕಸಭೆಯಲ್ಲಿ 2,37,888 ಮತಗಳಿದ್ದರೆ, ರಾಜ್ಯಸಭೆಯಲ್ಲಿ ಒಟ್ಟು 49,560 ಮತಗಳಿವೆ. ವಿಧಾನಸಭೆಯಲ್ಲಿ 2,39,923 ಮತಗಳಿದ್ದು, ಶೇಕಡಾವಾರು ಮತಗಳ ಸಂಖ್ಯೆ 48.10 ಇದೆ.

ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಮಿತ್ರ ಪಕ್ಷಗಳು, ಇನ್ನಿತರ ವಿರೋಧ ಪಕ್ಷಗಳ ಒಟ್ಟು ಮತಮೌಲ್ಯ 3,94,299 ಇದೆ. ಅಂದರೆ ಶೇಕಡಾ 36ರಷ್ಟು ಇನ್ನಿತರೆ ಪಕ್ಷಗಳ ಮತಗಳಿವೆ. ರಾಷ್ಟ್ರಪತಿ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ 5,49,452.  ಈ ಎಲ್ಲ ಅಂಕಿ ಅಂಶಗಳನ್ನ ಗಮನಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಮತಮೌಲ್ಯಗಳು ಹೆಚ್ಚಿವೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರೇ ವಿಜಯ ಸಾಧಿಸೋದು ಬಹುತೇಕ ನಿಶ್ಚಯವಾಗಿದೆ.

ಇನ್ನು ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಸಕಲ ತಯಾರಿ ನಡೆದಿದೆ. ರಾಜ್ಯದ ವಿಧಾನಸೌಧದಲ್ಲೂ ಇದಕ್ಕಾಗಿ ಭರ್ಜರಿ ತಯಾರಿ ನಡೆದಿದೆ. ಕರ್ನಾಟಕ ವಿಧಾನಸೌಧದ 106ನೇ ಕೊಠಡಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ದೇಶದಲ್ಲಿ ಇದೇ ರೀತಿ ಒಟ್ಟು 32 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 33 ಚುನಾವಣಾ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಇನ್ನು ಈ ಬಾರಿಯ ವಿಶೇಷ ಅಂದ್ರೆ, ಮತದಾರರು ಚುನಾವಣಾ ಆಯೋಗ ನೀಡುವ ಪೆನ್ ಅನ್ನೇ ಬಳಸಬೇಕಿದೆ. ಇನ್ನು ಜುಲೈ 20ರಂದು ರಾಷ್ಟ್ರಪತಿ ಚುನಾವಣಾ ಫಲಿತಾಂಶ ಹೊರಬೀಳಲಿದೆ.

Comments are closed.

Social Media Auto Publish Powered By : XYZScripts.com