ಮುಗುಳುನಗೆ ಚಿತ್ರದ ‘ ನಿನ್ನಾ ಸ್ನೇಹದಿಂದ ‘ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ ಭಟ್ ಮೂರನೇ ಬಾರಿ ಜೊತೆಯಾಗಿರುವ ಚಿತ್ರ ‘ಮುಗುಳುನಗೆ’. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಈಗಾಗ್ಲೇ ಶುರುವಾಗಿವೆ.
ಸದ್ಯ ಮುಗುಳುನಗೆಯ ಸುಂದರ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದು ವಿಡಿಯೋ ಸಾಂಗ್ ಅಲ್ಲ, ಆದ್ರೂ ಇದ್ರಲ್ಲಿ ಕುತೂಹಲಕಾರಿ ವಿಡಿಯೋ ಇದೆ… ಪಕ್ಕಾ ಭಟ್ರ ಸ್ಟೈಲ್ ನಲ್ಲಿ. ಅಂದ್ರೆ ‘ನಿನ್ನಾ ಸ್ನೇಹದಿಂದ’ ಎನ್ನುವ ಹಾಡಿನ ಜೊತೆಗೆ ಒಂದಷ್ಟು ಮೇಕಿಂಗ್ ಶಾಟ್ಸ್ ಸೇರಿಸಿ ಬಿಡುಗಡೆ ಮಾಡಲಾಗಿದೆ.
ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡಿನ ಸಾಹಿತ್ಯವನ್ನು ಖುದ್ದು ಭಟ್ರೇ ಬರೆದಿದ್ದಾರೆ. ವಿ ಹರಿಕೃಷ್ಣ ಸಂಗೀತ ಕೇಳುಗರಿಗೆ ಇಂಪಾಗಿದೆ. ಸಾಮಾನ್ಯವಾಗಿ ಪ್ರೀತಿ, ವೇದಾಂತ, ವಿರಹದ ಹಾಡುಗಳನ್ನೇ ಹೆಚ್ಚಾಗಿ ಬರೆಯೋ ಯೋಗರಾಜ ಭಟ್ ಸ್ನೇಹದ ಹಾಡನ್ನು ಬರೆದು ಅದರಲ್ಲೇ ಒಂಚೂರು ಪ್ರೀತಿ ಇಣುಕುವಂತೆ ಮಾಡಿದ್ದಾರೆ.
ಸಯ್ಯದ್ ಸಲಾಮ್ ನಿರ್ಮಾಣದ ಮುಗುಳುನಗೆ ಚಿತ್ರದಲ್ಲಿ ಗಣೇಶ್, ಅಮೂಲ್ಯ, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಅರೋರಾ, ಜಗ್ಗೇಶ್, ಅಚ್ಯುತ ರಾವ್, ರಂಗಾಯಣ ರಘು ಮುಂತಾದವರ ದೊಡ್ಡ ತಾರಾಗಣವೇ ಇದೆ. ಮುಂಗಾರು ಮಳೆ ಮತ್ತು ಗಾಳಿಪಟದಂಥಹಾ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಗಣೇಶ್ ಮತ್ತು ಯೋಗರಾಜ ಭಟ್ ಕಾಂಬಿನೇಶನ್ ಮುಗುಳುನಗೆಯ ಮೂಲಕ ಯಶಸ್ಸಿನ ಮ್ಯಾಜಿಕ್ ಮುಂದುವರೆಸುತ್ತಾ ಎನ್ನುವ ಕುತೂಹಲ ಜೋರಾಗೇ ಇದೆ.

 

Comments are closed.