ಅಧಿಕಾರಿಗಳಿಗೆ ಹೇಳೋರು ಕೇಳೋರು ಇಲ್ಲ, ಸರಕಾರ ಸಂಪೂರ್ಣ ದಿವಾಳಿಯಾಗಿದೆ : ಎಚ್. ಡಿ. ಕೆ

ಜೆಡಿಎಸ್ ಶಾಸಕಾಂಗ ಸಭೆ ಬಳಿಕ ಎಚ್. ಡಿ ಕುಮಾರಸ್ವಾಮಿ ಮಾತನಾಡಿ, ‘ ನುಡಿದಂತೆ ನಡೆದಿದ್ದೇವೆ ಎಂದು ಸರಕಾರ ಹೇಳುತ್ತಿದೆ. ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ ಮೊದಲ ಪುಟದಲ್ಲೇ ಎಡವಿದ್ದಾರೆ. ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಎನ್ನುವುದರ ಮೂಲಕ ಎಡವಿದ್ದಾರೆ. ಆಡಳಿತ ನಡೆಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಪರಪ್ಪನ‌ ಅಗ್ರಹಾರ ಕಾರಾಗೃಹದಲ್ಲಿ ಒಂದೊಂದು ಅಧಿಕಾರಿ ಒಂದೊಂದು ಸೂಚನೆ ಕೊಡ್ತಿದ್ದಾರೆ. ಕೆಂಪಯ್ಯರಿಂದಾಗಿ ಈ ಸ್ಥಿತಿ ಉದ್ಬವಿಸಿದೆ. ಕೇಂದ್ರ ಕಾರಾಗೃಹದಿಂದ 30-35 ಖೈದಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಇಲ್ಲ. ಗೃಹ ಇಲಾಖೆಯಲ್ಲಿ ಹಿಡಿತ ತಪ್ಪಿದೆ. ಅಧಿಕಾರಿಗಳನ್ನು ಹೇಳುವವರು ಕೇಳುವವರು ಯಾರೂ ಇಲ್ಲವಾಗಿದೆ. ಸರ್ಕಾರ ಸಂಪೂರ್ಣ ದೀವಾಳಿಯಾಗಿದೆ ‘ ಎಂದರು.

‘ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಗೆ ಮತ ಚಲಾಯಿಸಲು ನಿರ್ದರಿಸಲಾಗಿದೆ. ಜೆಡಿಎಸ್ ಎನ್ ಡಿ ಎ ಅಭ್ಯರ್ಥಿಗೆ ಮತ ಚಲಾಯಿಸ್ತಾರೆ ಎಂದು ಸಿ ಟಿ ರವಿ ಹೇಳಿದ್ದಾರೆ. ಆದರೆ ಜೆಡಿಎಸ್ ನ ಎಲ್ಲಾ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ. ಯಾರೂ ಕೂಡಾ ಅಡ್ಡ ಮತದಾನ ಮಾಡುವುದಿಲ್ಲ. ವೈ ಎಸ್ ವಿ ದತ್ತಾ ಮತದಾನಕ್ಕೆ ಹಾಜರಾಗುವುದಿಲ್ಲ ಎಂದು ಪೂರ್ವಾನುಮತಿ ಪಡೆದಿದ್ದಾರೆ ‘ ಎಂದು ಹೇಳಿದ್ದಾರೆ.

ಪೋಲಿಸ್ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿದ  ಎಚ್ ಡಿ ಕುಮಾರಸ್ವಾಮಿ ‘ ಪ್ರಕರಣ ಬೆಳಕಿಗೆ ಬಂದಾಗಲೇ ಇದು ಹಳ್ಳ ಹಿಡಿಯುತ್ತದೆ ಎಂದು ಹೇಳಿದ್ದೆ. ಪ್ರಕರಣ ಬೆಳಕಿಗೆ ತಂದವರನ್ನೇ ವರ್ಗಾವಣೆ ಮಾಡುವ ಮೂಲಕ ಈ ಪ್ರಕರಣವನ್ನು ಹಳ್ಳ ಹಿಡಿಸುತ್ತೇವೆ ಎಂಬ ಸಂದೇಶ ನೀಡಿದ್ದಾರೆ. ಎಂ.ಎನ್.ರೆಡ್ಡಿಯವರು ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ಸೋತಿದ್ದಾರೆ. ಇನ್ನೂ ಎಸಿಬಿ ಮುಖ್ಯಸ್ಥರಾಗಿ ಏನು ಕೆಲಸ ಮಾಡುತ್ತಾರೆ ನೋಡಬೇಕಿದೆ. ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ‘ ಎಂದು ಹೇಳಿದರು.

 

Comments are closed.

Social Media Auto Publish Powered By : XYZScripts.com