ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದರೆ ಸಸ್ಪೆಂಡ್‍ ಮಾಡ್ತೀನಿ: ಸಿದ್ದರಾಮಯ್ಯ

ಮೈಸೂರು:  ಕೆರೆಗಳ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ ನಡೆದರೆ ಸಂಬಂಧಪಟ್ಟ ಎಂಜಿನಿಯರನ್ನು ಸಸ್ಪೆಂಡ್ ಮಾಡುತ್ತೇನೆ. ಈ ಬಗ್ಗೆ ಜನರ ಗಮನಕ್ಕೆ ಬಂದರೆ ದೂರು ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ನಡೆದ ಸರ್ಕಾರಿ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳೆದ 2006 ರ ಉಪ ಚುನಾವಣೆ ವೇಳೆ ಮತ ಕೇಳಲು ಬಂದಿದ್ದೆ. ಹತ್ತು ವರ್ಷಗಳ ಬಳಿಕ ಮತ್ತೆ ಇಲ್ಲಿಗೆ ಬಂದಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ಜನತೆಗೆ ಮನವಿ ಮಾಡಿದರು. ನಾನು ಒಮ್ಮೆ ಚುನಾವಣೆಯಲ್ಲಿ ಸೋತಾಗಲೂ ಇಲವಾಲ ಹೋಬಳಿ ಮುನ್ನಡೆ ನೀಡಿದೆ. ಅದಕ್ಕಾಗಿ ಇಲ್ಲಿಯ ಜನರ ಋಣವನ್ನು ತೀರಿಸುತ್ತೇನೆ ಎಂದು ಹೇಳಿದರು.

 ಸರ್ಕಾರಿ ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ,  ಸಚಿವ ಡಾ. ಎಚ್.ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕೂಡ ಮೊದಲ ಸಾಲಿನಲ್ಲೇ ಆಸೀನರಾಗಿದ್ದರು. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ. ಶಿಖಾಗೆ ಧಮಕಿ ಹಾಕಿದ ಆರೋಪಕ್ಕೆ ಗುರಿಯಾಗಿ ಜೈಲುವಾಸ ಅನುಭವಿಸಿ ಹೊರ ಬಂದಿರುವ ಸಿ.ಎಂ ಸಿದ್ದರಾಮಯ್ಯ ಆಪ್ತ ಕೆ. ಮರೀಗೌಡ ಕೂಡ ವೇದಿಕೆಯಲ್ಲಿ ಇದ್ದರು.

Comments are closed.

Social Media Auto Publish Powered By : XYZScripts.com