ಅಶಾಂತಿ ಸೃಷ್ಠಿಸುವವರ ಜೊತೆ ಶಾಂತಿ ಸಭೆಯಲ್ಲಿ ಭಾಗಿಯಾಗಲ್ಲ : ಯಡಿಯೂರಪ್ಪ ಹೇಳಿಕೆ

ಮಂಗಳೂರು : ಮಂಗಳೂರಿನಲ್ಲಿ ನಡೆಯುತ್ತಿರುವ ಶಾಂತಿ ಸಭೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಕೋಮುಗಲಭೆ ಹುಟ್ಟಿಹಾಕಿದವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಯಾರು ಬಲಿಯಾಗಿದ್ದಾರೋ ಆ ಸಂಘಟನೆಗೆ ಆಹ್ವಾನ ಇಲ್ಲ. ಯಾಕೆ ಹಿಂದೂ ಸಂಘಟನೆಗಳಿಗೆ ಆಹ್ವಾನ ನೀಡಿಲ್ಲ? ಎಂದು ಪ್ರಶ್ನಿಸಿದ್ದಾರೆ.  ಇದು ಕೇವಲ ರಮಾನಾಥ ರೈ ಬೆಂಬಲಿಗರು ಹಾಗೂ ಕಾಂಗ್ರೆಸ್ ಸಭೆಯಾ? ಅದಕ್ಕೆ ನಾವು ಹೋಗಬೇಕಾ?  ಜಿಲ್ಲೆಯಲ್ಲಿ ಸ್ಪರ್ಧಿಸುವ ರಮಾನಾಥ್ ರೈ ಅವರ ಸವಾಲನ್ನು ಸ್ವೀಕರಿಸಿದ್ದೇನೆ.  ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಅದಕ್ಕೆ ಇಂದಿನಿಂದ ಮೂರು ದಿನ ವಿಸ್ತಾರಕನಾಗಿ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ರಮಾನಾಥ ರೈ ಅವರಿಗೆ ಸವಾಲು ಹಾಕಿದ್ದಾರೆ. ಶರತ್ ಹತ್ಯೆ ನಡೆದು ಒಂಬತ್ತು ದಿನ ಆದ ಮೇಲೆ ಯಾರಿಗೂ ಹೇಳದೇ ರಮಾನಾಥ ರೈ ಶರತ್ ಮನೆಗೆ ಹೋಗಿದ್ದಾರೆ ಎಂದಿದ್ದಾರೆ.

ಕೊಲೆಯಾದ ಶರತ್ ಮನೆಗೆ ಭೇಟಿ ಕೊಡುವ ಉದ್ದೇಶದಿಂದ ನಾನು ಮಂಗಳೂರಿಗೆ ಬಂದಿದ್ದೇನೆ ಎಂದ ಯಡಿಯೂರಪ್ಪ, ಶರತ್‌ ಅವರದ್ದು ವ್ಯವಸ್ಥಿತ ಕೊಲೆ ಸಂಚು. ಸಿಎಂ ಕಾರ್ಯಕ್ರಮಕ್ಕಾಗಿ ಸಾವನ್ನು ಮುಚ್ಚಿಟ್ಟಿದ್ದು ಅಕ್ಷಮ್ಯ ಅಪರಾಧ. ಇದುವರೆಗೆ ಈ ರೀತಿ 24 ಕೊಲೆ ಆಗಿದೆ. ಎಲ್ಲೂ ಕೂಡಾ ನಿಜವಾದ ಅಪರಾಧಿಗಳನ್ನು ಶಿಕ್ಷಿಸಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸಿಎಂಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆ, ಶಕ್ತಿ, ಆಸಕ್ತಿ ಯಾವುದೂ ಇಲ್ಲ ಎಂದಿರುವ ಯಡಿಯೂರಪ್ಪ, ರಾಜಕೀಯ ಲಾಭ ಪಡೆದು ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಶಾಂತಿ ಸಭೆಗೆ ಹೋಗುವ ಅವಶ್ಯಕತೆ ನನಗಿಲ್ಲ. ಅಶಾಂತಿ ಸೃಷ್ಟಿ ಮಾಡುವವರ ಜೊತೆ ಚರ್ಚೆ ಮಾಡುವುದರಿಂದ ಶಾಂತಿ ನೆಲೆಸುವುದಿಲ್ಲ . ಅವರು ಬರುತ್ತಿರೋದು ಶಾಂತಿ ಕದಡಲು ಹೊರತು ಶಾಂತಿ ಕಾಪಾಡಲು ಅಲ್ಲ. ಪರಿಸ್ಥಿತಿ ನೋಡಿಕೊಂಡು ಹೋರಾಟದ ರೂಪು ರೇಷೆ ನಿರ್ಧಾರ ಮಾಡುತ್ತೇವೆ. ರಮಾನಾಥ ರೈ ಮತ್ತು ಯು.ಟಿ. ಖಾದರ್ ವಿರುದ್ದ ಸಾಮಾನ್ಯ ಕಾರ್ಯಕರ್ತ ರನ್ನು ನಿಲ್ಲಿಸಿ ಗೆಲ್ಲಿಸಿ ತೊರಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

One thought on “ಅಶಾಂತಿ ಸೃಷ್ಠಿಸುವವರ ಜೊತೆ ಶಾಂತಿ ಸಭೆಯಲ್ಲಿ ಭಾಗಿಯಾಗಲ್ಲ : ಯಡಿಯೂರಪ್ಪ ಹೇಳಿಕೆ

Comments are closed.

Social Media Auto Publish Powered By : XYZScripts.com