ಗೋವಾ: 20 ವರ್ಷದಿಂದ ನಗ್ನಳಾಗಿ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆಯ ಬಿಡುಗಡೆ

ಗೋವಾ: ಪೋಷಕರಿಗೆ ಸೇರಿದ್ದ ಮನೆಯಲ್ಲಿ ಮಹಿಳೆಯ ಅಣ್ಣಂದಿರೇ ಆಕೆಯನ್ನು 20 ವರ್ಷದಿಂದ ಕೂಡಿ ಹಾಕಿದ್ದು, ಈಗ ಆ ಮಹಿಳೆಯನ್ನು ಪೊಲೀಸರು ಬಚಾವ್‌ ಮಾಡಿದ್ದಾರೆ. ಮಹಿಳೆಗೆ 20 ವರ್ಷಗಳ ಹಿಂದೆ ಮುಂಬೈ ಮೂಲದ ಯುವಕನೊಂದಿಗೆ ಮದುವೆಯಾಗಿತ್ತು. ಆದರೆ ಅವನಿಗೆ ಮೊದಲೇ ಒಂದು ಮದುವೆಯಾಗಿರುವ ವಿಷಯ ತಿಳಿದ ಈಕೆ ಕೂಡಲೆ ತವರು ಮನೆಗೆ ಬಂದಿದ್ದಾಳೆ. ನಂತರ ಆಕೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ವರ್ತಿಸುತ್ತಿದ್ದಾಳೆ ಎಂದು ಸಹೋದರರ ಕುಟುಂಬಸ್ಥರೇ ಆಕೆಯನ್ನು ನಗ್ನಗೊಳಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಕಳೆದ 20 ವರ್ಷಗಳಿಂದಲೂ ಆಕೆಗೆ ಕೋಣೆಯ ಕಿಟಿಕಿಯಿಂದಲೇ ಊಟ ಹಾಗೂ ನೀರು ಸರಬರಾಜು ಮಾಡುತ್ತಿದ್ದರು. ಕೋಣೆ ಸಂಪೂರ್ಣ ವಾಸನೆಯಿಂದ ತುಂಬಿದ್ದು, ಆಕೆಗೆ ಬಟ್ಟೆಯನ್ನು ನೀಡದ ಕಾರಣ ಆಕೆ ನಗ್ನವಾಗಿಯೇ ಇದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಬೈಲಾಂಚೋ ಸಾದ್‌  ಎಂಬ ಮಹಿಳಾ ಸಂಘಟನೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮಾಹಿತಿಯನ್ನಾಧರಿಸಿ ಪೊಲೀಸರು ಮನೆಯ ಶೋಧ ನಡೆಸಿ ಮಹಿಳೆಯನ್ನು ಪಾರು ಮಾಡಿದ್ದಾರೆ.

ಅಕ್ರಮವಾಗಿ ಕೋಣೆಯಲ್ಲಿ ಬಂಧಿಸಿದ್ದ ಅಪರಾಧಕ್ಕಾಗಿ ಆಕೆಯ ಸಹೋದರರು ಹಾಗೂ ಅವರ ಮನೆಯವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.