ರಾಗಿಗುಡ್ಡದಿಂದ ಸಿಲ್ಕ್‌ ಬೋರ್ಡ್‌ವರೆಗೆ ಮೇಲ್ಸೇತುವೆ, ಮೆಟ್ರೋ ನಿರ್ಮಾಣಕ್ಕೆ ನಿರ್ಧಾರ

ಬೆಂಗಳೂರು: ನಗರದ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಎರಡು ಹಂತದಲ್ಲಿ ಮೇಲ್ಸೇತುವೆ, ಮೆಟ್ರೊ ಮಾರ್ಗವನ್ನು ಬಿಎಂಆರ್ ಸಿಎಲ್ ,  ಬಿಬಿಎಂಪಿಯ ಜಂಟಿ ಸಹಯೋಗದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದೆ. 2016-17ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ತಿಳಿಸಲಾಗಿತ್ತು. ಅದರಂತೆ ಪೀಕ್ ಅವರ್ ನಲ್ಲಿ ಅತಿ ವಾಹನ ದಟ್ಟಣೆ ಹೊಂದಿರುವ ರಾಗಿ ಗುಡ್ಡ ಜಂಕ್ಷನ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಮೇಲ್ಸೇತುವೆ ಕಾಮಗಾರಿ ಕೆಲವೇ ತಿಂಗಳಲ್ಲಿ ಆರಂಭವಾಗಿ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ನಮ್ಮ ಮೆಟ್ರೊ ಉದ್ದೇಶಿಸಿದೆ.

ಈ ಯೋಜನೆಗೆ ಒಟ್ಟು 330 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಆ ಪೈಕಿ ಪಾಲಿಕೆಯು 100 ಕೋಟಿ ರೂಪಾಯಿ ಭರಿಸಲಿದೆ. ನೆಲ ಮಟ್ಟದಿಂದ 8 ಮೀಟರ್ ಎತ್ತರದಲ್ಲಿ 4 ಲೇನ್ ಎಲಿವೇಟೆಡ್ ರಸ್ತೆ ನಿರ್ಮಾಣವಾಗಲಿದೆ. ಅದೇ ರೀತಿ ಅದರ ಮೇಲ್ಭಾಗದಲ್ಲಿ ನೆಲದಿಂದ 18 ಮೀಟರ್ ಎತ್ತರದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 4 ಮೆಟ್ರೊ ನಿಲ್ದಾಣ ಬರಲಿದ್ದು, 127 ಬೃಹತ್ ಪಿಲ್ಲರ್ ಗಳ ಮೇಲೆ ಫ್ಲೈಓವರ್ ರಚನೆಯಾಗಲಿದೆ.
ಈ ಹಿಂದೆ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೇಲ್ಸೇತುವೆ ನಿರ್ಮಾಣಕ್ಕೆ ಜಯದೇವ ಮೇಲ್ಸೇತುವೆಯನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ಇದೀಗ ಈ ಮೇಲ್ಸೇತುವೆಯನ್ನು ಉಳಿಸಿಕೊಂಡು ಹೊಸದಾಗಿ ನಿರ್ಮಿಸುತ್ತಿರುವ ಎಲಿವೇಟೆಡ್ ರೋಡ್ ಮತ್ತು ಮೆಟ್ರೋ ಲೈನ್ ನಿರ್ಮಾಣ ಮಾಡಲು ಮೆಟ್ರೊ ನಿಗಮ ನಿರ್ಧರಿಸಿದೆ.

Comments are closed.

Social Media Auto Publish Powered By : XYZScripts.com