ಜೆಡಿಎಸ್ ನಲ್ಲಿ ಭಿನ್ನಮತ ಸ್ಫೋಟ.? ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಪ್ರಜ್ವಲ್ ರೇವಣ್ಣ..

ಮೈಸೂರು: ರಾಜ್ಯ ಜೆಡಿಎಸ್ ನಲ್ಲಿ ದಿಢೀರ್ ಭಿನ್ನಮತ ಸ್ಟೋಟಗೊಂಡಿದೆ. ತಮ್ಮ ಕುಟುಂಬದ ವಿರುದ್ದವೇ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರ ಮುಂದೆ ಬಹಿರಂಗವಾಗಿಯೇ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಹುಣಸೂರು ಕ್ಷೇತ್ರಕ್ಕೆ ಆಸೆ ಪಟ್ಟಿದ್ದು ನಿಜ.  ಇಲ್ಲಿ ಬಂದು ಸಂಘಟನೆ ಮಾಡಿದ್ದು ನಿಜ. ಆದರೆ ನನಗೆ ಇಂದು ನನಗೆ ನೋವಾಗಿದೆ. ನಮ್ಮ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಬೆಲೆ ಇಲ್ಲ.  ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಹಿಂದಿನ ಸೀಟು.  ಸೂಟ್ ಕೇಸ್ ತೆಗೆದುಕೊಂಡು ಬಂದವರಿಗೆ ಮುಂದಿನ ಸೀಟು ‘ ಎಂದು ಹೇಳುವ ಮೂಲಕ ಮೈಸೂರಿನ ಹುಣಸೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಕುಟುಂಬದ ಕುಡಿ ವಿವಾದದ ಬಾಂಬ್ ಸಿಡಿಸಿದ್ದಾರೆ.

‘ದೇವೆಗೌಡರು ರೈತರಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ಅವರನ್ನು ಯುವ ಪೀಳಿಗೆ ಅನುಸರಿಸಬೇಕು. ಅದಕ್ಕೆ ಜೆಡಿಎಸ್ ನ ಯುವ ಮುಖಂಡರು ಎದ್ದು ನಿಲ್ಲಬೇಕು. ನಿಮಗೆಲ್ಲರಿಗೂ ನಾನು ಬೆಂಬಲ ನೀಡುತ್ತೇನೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿಯೇ ತೀರೋಣ. ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜ್ಯದ ರೈತರು ಕಾಯುತ್ತಿದ್ದಾರೆ.  ರೈತರಿಗಾಗಿ ನಾನು ರಾಜಕಾರಣವನ್ನೇ ಬಿಡುತ್ತೇನೆ.  ಆದರೆ ರೈತರಿಗೆ ನೋವಾಗುವುದನ್ನು ಸಹಿಸುವುದಿಲ್ಲ ‘

‘ ನನಗೆ ಹುಣಸೂರಿನಲ್ಲಿ ಅನ್ನದ ಋಣ ಇದೆ. ಇಲ್ಲಿನ ಸುಮಾರು 50 ಕಾರ್ಯಕರ್ತರ ಮನೆಯಲ್ಲಿ ಊಟ ಮಾಡಿದ್ದೇನೆ. ನಾನು ಬೇಲೂರಿನಲ್ಲಿ ಕೇವಲ 5 ಜನರ ಮನೆಯಲ್ಲಿ ಊಟ ಮಾಡಿದ್ದೆ.  ಹುಣಸೂರಿನ ಅನ್ನದ ಋಣ ತೀರಿಸಬೇಕಿದೆ.
ಈ ಕ್ಷೇತ್ರಕ್ಕೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷದ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ಮನೆ ಮಗನಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ‘

‘ ದೇವೆಗೌಡರ ಕುಟುಂಬದವನಾಗಿರೊ ನನಗೆ ಇಷ್ಟು ಕಷ್ಟ ಆದ್ರೆ, ಸಾಮಾನ್ಯ ಕಾರ್ಯಕರ್ತರಿಗೆ ಇನ್ನೆಷ್ಟು ಕಷ್ಟ ಆಗೋಲ್ಲ.  ನಮ್ಮ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಆಗಬೇಕಿದೆ ‘ ಎಂದರು.

‘ ನಾನು ಮೈಸೂರಿನಲ್ಲಿ ಜಿಲ್ಲಾ ನಾಯಕರನ್ನು ಭೇಟಿ ಮಾಡಲಿಲ್ಲ. ಕಾರಣ ನಾನು ಜನರ ಬಳಿ ಹೋಗುವ ಅರ್ಹತೆ ಇದೆಯಾ ಅಂತ ಪರೀಕ್ಷೆ ಮಾಡಿಕೊಳ್ಳಬೇಕಿತ್ತು. ಅದಕ್ಕೆ ನೇರವಾಗಿ ಹುಣಸೂರಿನ ಜನರ ಬಳಿ ಹೋದೆ.  ನಾನೇನು ಇಲ್ಲಿನ ನಾಯಕರನ್ನು ಕಡೆಗಣಿಸಿಲ್ಲ.  ಜನರ ಕಷ್ಟ ಸುಖ ಕೇಳಿ ಎಲ್ಲರನ್ನು ಭೇಟಿ ಮಾಡುತ್ತಿದ್ದೆ. ಸುಮ್ಮನೆ ನನ್ನ ಮೇಲೆ ಇಲ್ಲ ಸಲ್ಲದ್ದನ್ನು ಹಬ್ಬಿಸುತ್ತಿದ್ದಾರೆ ‘

‘ ಸೋತು ಮನೆಯಲ್ಲಿ ಕುಳಿತಿದ್ದವರನ್ನು ಕರೆದುಕೊಂಡು ಅಧಿಕಾರ ನೀಡದ್ದ ಪಕ್ಷ ಜೆಡಿಎಸ್. ಆದರೆ ಇಂದು ಅವರೇ ಪಕ್ಷದಲ್ಲಿ ಕೆಲವು ಸಂಗತಿಗಳಿಗೆ ವಿರೋಧ ಮಾಡುತ್ತಾರೆ. ಅವರು ಎಲ್ಲಿದ್ದರು, ಏನಾಗಿದ್ದರು ಅನ್ನೋದನ್ನು ಒಮ್ಮೆ ನೆನೆದುಕೊಳ್ಳಲಿ. ಪರೋಕ್ಷದವಾಗಿ ತಮ್ಮನ್ನು ವಿರೋಧಿಸಿದವರಿಗೆ ಪ್ರಜ್ವಲ್ ರೇವಣ್ಣ ಟಾಂಗ್ ನೀಡಿದರು.

‘ ಪಕ್ಷದ ಒಳಿತಿಗಾಗಿ ದೇವೆಗೌಡರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ದ. ಅವರು ಹೇಳಿದಂತೆ ಮುಂದಿನ ಚುನಾವಣೆಯಲ್ಲಿ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನನಗೆ ಜಾತಿ ಎಂದರೆ ಗೊತ್ತಿಲ್ಲ.
ಜಾತ್ಯಾತೀತ ಸಿದ್ದಾಂತಗಳನ್ನು ಇಟ್ಟುಕೊಂಡೆ ಬೆಳೆಯುತ್ತಿದ್ದೇನೆ. ಕುಮಾರಸ್ವಾಮಿಯರನ್ನು ಮುಖ್ಯಮಂತ್ರಿ ಮಾಡೋಕೆ ನಾನು ಶ್ರಮ ವಹಿಸಿ ದುಡಿಯುತ್ತೇನೆ ‘ ಎಂದರು.

‘ ನನಗೆ ನೋವಾಗಿದೆ. ನನ್ನ ನೋವನ್ನ ನಿಮ್ಮ ಮುಂದೆ ಹೇಳಿಕೊಂಡಿದ್ದೇನೆ. ಈ ಸಭೆ ಯಾರ ವಿರುದ್ದವು ಅಲ್ಲ. ದೇವೆಗೌಡರ ವಿರುದ್ದ ನಾನು ತೊಡೆ ತಟ್ಟಿಲ್ಲ.  ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ. ನಿಮ್ಮ ಕಷ್ಟ ಸುಖಕ್ಕೆ ನಾನು ಜೊತೆಯಲ್ಲಿ ಇರ್ತೆನೆ.  ನಿಮಗೆ ಸಮಸ್ಯೆ ಇದ್ದರೆ ನನ್ನ ಬಳಿ ಬನ್ನಿ. ನಾನು ಮುಂದೆ ಈ ಕ್ಷೇತ್ರದ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಎಲ್ಲರು ಪಕ್ಷದ ನಿರ್ಧಾರಕ್ಕೆ ಬೆಂಬಲ ನೀಡಿ. ನನ್ನ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಜೊತೆ ನಾನು ಇರ್ತೇನೆ ‘ ಎಂದು ಹುಣಸೂರಿನ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

 

 

Comments are closed.

Social Media Auto Publish Powered By : XYZScripts.com