ಬೇಡಿಕೆ ಈಡೇರಿಸಲು ಒಪ್ಪಿಗೆ ಹಿನ್ನೆಲೆ : ಪ್ರತಿಭಟನೆ ಹಿಂಪಡೆದ ಮೆಟ್ರೋ ಸಿಬ್ಬಂದಿ

ಬೆಂಗಳೂರು: ಮೆಟ್ರೋ ಸಿಬ್ಬಂದಿ ಮೇಲೆ ಭದ್ರತಾ ಪಡೆ ಸಿಬ್ಬಂದಿ ಹಲ್ಲೆ ನಡೆಸಿದ್ದನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಬೈಯಪ್ಪನಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿಪಿ ಹರ್ಷ, ಅಜಯ್‌ ಹಿಲೋರಿ, ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಆಗಮಿಸಿ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದರು. ಪ್ರತಿಭಟನೆ ಹಿಂಪಡೆಯದಿದ್ದರೆ ಎಸ್ಮಾ ಜಾರಿ ಮಾಡುವುದಾಗಿಯೂ ಹೇಳಿದ್ದರು. ಅಲ್ಲದೆ ಒಂದು ವಾರದಲ್ಲಿ ಸಭೆ ನಡೆಸಿ ಮೆಟ್ರೋ ಸಿಬ್ಬಂದಿ ಬೇಡಿಕೆ ಕುರಿತು ಚರ್ಚೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೆಟ್ರೋ ಸಿಬ್ಬಂದಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಗುರುವಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಸೆಂಟ್ರಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವಿಚಾರಕ್ಕೆ ಮೆಟ್ರೋ ಸಿಬ್ಬಂದಿ ಹಾಗೂ ರಾಜ್ಯ ಭದ್ರತಾ ಪಡೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ರಾಕೇಶ್‌ ಮತ್ತು ಹರೀಶ್‌ ಸೇರಿದಂತೆ ಒಟ್ಟು ಆರು ಮಂದಿ ಮೆಟ್ರೋ ಸಿಬ್ಬಂದಿಯನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದರು.ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಬಹುತೇಕ ಮೆಟ್ರೋ ನಿಲ್ದಾಣವನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದಾಗಿ ಮೆಟ್ರೋ ಅವಲಂಬಿಸಿ ಪ್ರಯಾಣಿಸುತ್ತಿದ್ದ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆ ಪಡುವಂತಾಗಿತ್ತು. ಮೆಟ್ರೋ ಇಲ್ಲದ ಕಾರಣ ನಗರದ ಬಹುತೇಕ ಕಡೆ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

 

Comments are closed.