ಮಹಿಳಾ ಕ್ರಿಕೆಟ್ ವಿಶ್ವಕಪ್ : ಲಂಕಾ ವಿರುದ್ಧ ಭಾರತಕ್ಕೆ 16 ರನ್ ಜಯ, ದೀಪ್ತಿ ಶರ್ಮಾ ಪಂದ್ಯ ಶ್ರೇಷ್ಠ

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಮೆಂಟ್ ನ ಪಂದ್ಯದಲ್ಲಿ ಭಾರತದ ವನಿತೆಯರು ಶ್ರೀಲಂಕಾ ವಿರುದ್ಧ 16 ರನ್ ಗೆಲುವು ಸಾಧಿಸಿದ್ದಾರೆ. ಬುಧವಾರ ಡರ್ಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆರಿಸಿಕೊಂಡಿತು. ದೀಪ್ತಿ ಶರ್ಮಾ (78) ಹಾಗೂ ಮಿಥಾಲಿ ರಾಜ್ (53) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 232 ರನ್ ಮೊತ್ತ ದಾಖಲಿಸಿತು.

  

ಲಂಕಾ ಪರ ಶ್ರೀಪಾಲಿ ವೀರಕ್ಕೋಡಿ 3 ವಿಕೆಟ್ ಪಡೆದರು. ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಲಂಕಾ 50 ಓವರ್ ಗಳಲ್ಲಿ 216 ರನ್ ಸೇರಿಸಲಷ್ಟೇ ಶಕ್ತವಾಯಿತು. ದಿಲಾನಿ ಮನೋದರಾ (61) ಹಾಗೂ ಶಶಿಕಲಾ ಸಿರಿವರ್ದನೆ (37) ರನ್ ಗಳಿಸದರು. ಭಾರತದ ಪರ ಪೂನಮ್ ಯಾದವ್ 10 ಓವರ್ ಎಸೆದು 23 ರನ್ ನೀಡಿ 2 ವಿಕೆಟ್ ಕಬಳಿಸಿದರು. 78 ರನ್ ಗಳಿಸಿದ ದೀಪ್ತಿ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ಸಂಪೂರ್ಣ ವಿಶ್ವಾಸದಲ್ಲಿದ್ದು ಸೆಮಿಫೈನಲ್ ಗೆ ಮತ್ತಷ್ಟು ಹತ್ತಿರವಾಗಿದೆ.

Comments are closed.

Social Media Auto Publish Powered By : XYZScripts.com