ನನ್ನ ಋತುಚಕ್ರದ ಮೇಲೆ ತೆರಿಗೆ ವಿಧಿಸಬೇಡಿ : ಮೋದಿಗೆ ಮಹಿಳೆಯರ ಪಾಠ

ದೆಹಲಿ: ಮಹಿಳೆಯರಿಗೆ ಅತೀ ಅಗತ್ಯವಾದ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ 12 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.

‘ನನ್ನ ಋತುಚಕ್ರದ ಮೇಲೆ ತೆರಿಗೆ ವಿಧಿಸಬೇಡಿ’ ಎಂಬ ಅಡಿಬರಹದಲ್ಲಿ  ವಾಟ್‌ ಶಿ ಲೈಕ್ಸ್‌ ಡಾಟ್‌ ಇನ್‌ ಎಂಬ ಹೆಸರಿನ ಗ್ರೂಪ್‌ನಲ್ಲಿ ಅಭಿಯಾನ ನಡೆಯುತ್ತಿದ್ದು, ಮಹಿಳೆಯರಿಗೆ ಅನ್ಯಾಯ ಮಾಡಬೇಡಿ. ಕುಂಕುಮ, ಬಳೆಗಳನ್ನು ತೆರಿಗೆ ಮುಕ್ತಗೊಳಿಸಿದ್ದೀರಿ. ಆದರೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ವಿಧಿಸಿರುವುದು ಯಾಕೆ ? ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

‘ಲೈಂಗಿಕ ಕ್ರಿಯೆ ಅವರವರ ಆಯ್ಕೆ. ಆದರೆ ಋತುಚಕ್ರವಲ್ಲ. ಕಾಂಡೋಮನ್ನು ತೆರಿಗೆ ಮುಕ್ತಗೊಳಿಸಿರುವ ಸರ್ಕಾರ ನ್ಯಾಪ್‌ಕಿನ್‌ಗಳ ಮೇಲೆ ತೆರಿಗೆ ಹೇರಿರುವುದೇಕೆ?’ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನ ಖ್ಯಾತ ಸ್ತ್ರೀರೋಗ ತಜ್ಞರಾದ ಪದ್ಮಿನಿ ಪ್ರಸಾದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇಂದಿಗೂ ಸಹ ಗ್ರಾಮೀಣ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಂಡುಕೊಳ್ಳುವುದಿಲ್ಲ. ನಾನು ಈ ಅಭಿಯಾನಕ್ಕೆ ಸಂಪೂರ್ಣವಾಗಿ ಬೆಂಬಲ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಇದರ ಬಗ್ಗೆ ಟ್ವೀಟ್ ಮಾಡಿದ ಮಹಿಳೆಯೊಬ್ಬರು, ‘ಜಿಎಸ್‌ಟಿ ಸಮಿತಿಯಲ್ಲಿ ಕೇವಲ ಪುರುಷರು ಮಾತ್ರ ಇದ್ದಾರೆಯೇ? ಪುರುಷರು ಋತುಚಕ್ರದ ಪ್ರಕ್ರಿಯೆಗೆ ಒಳಪಡುವುದಿಲ್ಲ’ ಹಾಗೆಂದು ಮಹಿಳೆಯರ ಋತುಚಕ್ರದ ಬಗ್ಗೆ ತಿಳಿದಿದ್ದೂ ತೆರಿಗೆ ವಿಧಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಸಿಂಧೂರ, ಬಳೆಗಳು ಜಿಎಸ್‌ಟಿ ಮುಕ್ತವಾಗಿವೆ. ಆದರೆ ಮಹಿಳೆಯರಿಗೆ ಅತೀ ಮುಖ್ಯವಾಗಿರುವ ಸ್ಯಾನಿಟರಿ ನ್ಯಾಪ್‌ಗಳ ಮೇಲೆ ತೆರಿಗೆ ವಿಧಿಸಿರುವುದು ಯಾಕೆ ಎಂದು ಕೇಳಬಹುದೇ ಅರುಣ್ ಜೇಟ್ಲಿ ಅವರೇ?’ ಎಂದು ಮತ್ತೊಬ್ಬ ಮಹಿಳೆ ಟ್ವೀಟ್ ಮಾಡಿದ್ದಾರೆ.

Social Media Auto Publish Powered By : XYZScripts.com