ಸಖೀಗೀತ-16 : ನೆಲದೊಡಲ ಅಂತಃಸತ್ವ: ಎಚ್.ಎಸ್.ಶಿವಪ್ರಕಾಶರ ‘ಸಮಗಾರ ಭಿಮವ್ವ’…

ಅನುಭಾವದ ಬೆಳಕನ್ನು ಹುಡುಕುತ್ತ ಇಹ-ಪರಗಳ ದ್ವಂದ್ವದಲ್ಲಿ ತೊಲಲುತ್ತ, ಕೊನೆಗೆ ಆ ಬೆಳಕು ಇರುವುದು ನಮ್ಮೊಳಗೇ ಎಂದು ಅರಿವಾದಾಗ ಅಲ್ಲಿ ತುಂಬಿಕೊಳ್ಳುವುದು ವಿಸ್ಮಯ ಭರಿತ ಆನಂದ. ನಮ್ಮ ಹಂಬಲದ ತೀವ್ರತೆಗೆ ತಕ್ಕಂತೆ ಹಲವು ಬಗೆಯಲ್ಲಿ ಮೈದಾಳುವ ಈ ಬೆಳಕಿನಿಂದ ಅಂತಿಮವಾಗಿ ನಾವು ಬಯಸುವುದು ವರ್ತಮಾನದ ಕಂಗೆಟ್ಟ ಸ್ಥಿತಿಗೆ ಸಿಗಬಹುದಾದ ಸಾಂತ್ವನವನ್ನೇ. ಆದ್ದರಿಂದ ಎಲ್ಲ ಅನುಭಾವವೂ ಈ ನೆಲದೆದೆಯಲ್ಲೇ ನಿಜವಾಗಬೇಕು. ಅಂಥ ನೆಲದಪಡಲ ಅಂತಃಸತ್ವಕ್ಕೆ ಸಮಗಾರ ಭೀಮವ್ವ ಪ್ರತಿಮೆಯಾಗುತ್ತಾಳೆ.

ಮಧುರಚೆನ್ನರ ದ್ಯಾವಾಪೃಥ್ವಿಯಲ್ಲಿ ಬರುವಂತೆ ಈ ಕವಿತೆಯಲ್ಲೂ ಭೂಮಿ ಬರುತ್ತದೆ. ಆದರೆ ಇದು ಬರದಿಂದ ಕಂಗೆಟ್ಟು ಬಾಯ್ದೆರೆದ ಭೂಮಿ. ಆ ಬರ ಮನುಷ್ಯರ ಅಂತರಂಗದ್ದೂ ಹೌದು. ಅವರ ಸಾಂಸ್ಕøತಿಕ ಸಂದರ್ಭದ್ದೂ ಹೌದು. ಇಂಥ ಬರದ ಜ್ವರದಿಂದ ತ್ರಸ್ಥವಾದ ಬದುಕಿಗೆ ಮದ್ದಿರುವುದು ನೆಲದ ಅಂತಃಸತ್ವದಲ್ಲಿಯೇ. ಈ ಬರ ಮೇಲ್ತೋರಿಕೆಯದಷ್ಟೆ! ಅಂತರಂಗದ ಸಮೃದ್ಧಿಯನ್ನು ಶೋಧಿಸಿಕೊಳ್ಳುವ ಹಂಬಲದಿಂದ ಕವಿತೆ ಹೊರಡುತ್ತದೆ. ದ್ಯಾವಾಪೃಥ್ವಿಯಲ್ಲಿ ಕವಿ ಭೂಮಿಯನ್ನು ಅಮೂರ್ತವಾದ ಮಾತೃಚೈತನ್ಯದ ಪ್ರತೀಕವಾಗಿ ಭಾವಿಸಿದರೆ, ಇಲ್ಲಿ ಆ ಚೈತನ್ಯ ಇದೇ ನೆಲದ ದಲಿತ ಹೆಣ್ಣಾದ ಭೀಮವ್ವಳಲ್ಲಿ ಮೈದೋರಿದೆ.

ಕವಿತೆಯು ನಾಗಲಿಂಗನ ಆಧ್ಯಾತ್ಮಿಕ ತಳಮಳ, ಹಸಿವು-ಜ್ವರಗಳ ಕುರಿತು ಹೇಳುತ್ತ ಅನುಭಾವವನ್ನು ನೆಲದ ಬದುಕಿಗೆ ಒರೆಹಚ್ಚಿ ನೋಡುತ್ತದೆ. ಆಧ್ಯಾತ್ಮ ಸಾಧನೆಯ ಬೆನ್ನು ಹಿಡಿದು ಆ ದಿವ್ಯ ಬೆಳಕನ್ನರಸುತ್ತ ಊರೂರು ಅಲೆದ ನಾಗಲಿಂಗ, ಹುಟ್ಟಿಲ್ಲದ, ಜಾತಿಯಿಲ್ಲದ, ಊರಿಲ್ಲದ, ಸೂರಿಲ್ಲದ ಜಂಗಮ. ಬಿಸಿಲು, ಮಳೆ, ಗಾಳಿ, ಇಬ್ಬನಿಗಳನ್ನೇ ಹೊ

ದ್ದವನ್ನು ಆತ. ಯಾವ ಆವರಣವಿಲ್ಲದೇ ಅನಂತಕ್ಕೆ ತೆರೆದುಕೊಂಡ ಜೋಗಿ. ಆದರೂ ನಾಗಲಿಂಗನ ಮೈ ಇಂದು ಜ್ವರದಿಂದ ಕೆಂಡವಾಗಿದೆ. ಆತ ಹಸಿವಿನಿಂದ ತತ್ತರಿಸಿದ್ದಾನೆ. ಅದನ್ನು ಹಿಂಗಿಸುವ ‘ಎದೆಹಾಲು’ ಅವನಿಗೆ ಬೇಕು. ಆತ ಹುಡುಕಿ ಹೊರಟ ಆಧ್ಯಾತ್ಮದ ಚೈತನ್ಯ ಅವನನ್ನು ಸಂತೈಸಲು ಸೋತಿದೆ ಯಾಕೆ?

ಈ ನಿಟ್ಟಿನಲ್ಲಿ ‘ಎದೆಹಾಲು’ ತನ್ನ ಅರ್ಥವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಅದು ಮೊಲೆಹಾಲಲ್ಲಿ ಅಂತರಂಗದ ಹಸಿವನ್ನು ನೀಗಿಸಿ ಜೀವತುಂಬುವ ಜೀವದಾಯಕ ಸತ್ವ. ಆಧ್ಯಾತ್ಮಿಕ ಸಾಧನೆಯ ಹಾದಿ ನಿರಂತರ ಜೀವದಾಯಕವೇನಲ್ಲ. ಅಲ್ಲಿರುವ ಉದ್ವಿಗ್ನತೆ, ಹಿಡಿಯಲಾಗದ್ದನ್ನು ಹಿಡಿಯಬೇಕೆನ್ನುವ ಚಡಪಡಿಕೆ, ಸಿಗಲಾರದ್ದಕ್ಕೆ ಹತಾಶೆ, ಕಂಡ ಬೆಳಕನ್ನು ದಕ್ಕಿಸಿಕೊಳ್ಳಲಾಗದ, ಅದರ ಪ್ರಖರತೆಗೆ ಕಣ್ತೆರೆಯಲಾಗದ ಅಸಹಾಯಕತೆ, ಕಂಡೂ ಕಾಣದಾದ ಬೆಳಕಿನ ಬಗೆಗೆ ನಿರಂತರ ಹಪಹಪಿಕೆ ಇವೆಲ್ಲ ಅದನ್ನು ಒಂದು ಯಾತನಾಮಯ ಕ್ಷಣವನ್ನಾಗಿಸಿವೆ. ಆ ಆನಂದದ ಹಿಂದೆಮುಂದೆಲ್ಲ ಯಾತನಾಮಯ ಕ್ಷಣಗಳೇ ಹರಡಿವೆ.

ಏನಾಯ್ತು ನಿಟಿಲ ಭ್ರೂಮಧ್ಯ ಸ್ಪಟಿಕವರ್ಣ ದೀಪ್ತಿ

ಮೇರುದಂಡದಿ ಹರಿದ ತಿಳಿಬೆಳಕಿನ ಹಾದಿ

ದಾಟಿ ಕದಳಿ ಶಿಖರ ಮೀರಿ ಹಾರಿ

ಅಂಬರದಲ್ಲಿ ತೇಲಾಡಿ ನನ್ನ ಆತ್ಮದ ಪಕ್ಷಿ

ಯಾಕೆ ನಾಟಿತೋ ಯಾವ ಬಾಣವೋ ಏನೋ……

ಸೀದ ಕಿರುಮರಿ ಹಕ್ಕಿ

ಎದೆಗುಟುಕ ನೀಡವ್ವ ಸಮಗಾರ ಭೀಮವ್ವ

ಸಮಗಾರ ಭೀಮವ್ವ ಎದೆಹಾಲ ನೀಡವ್ವ (ಸಮಗಾರ ಭೀಮವ್ವ, ನಮ್ಮ ಕನ್ನಡ ಕಾವ್ಯ. ಪು.419)

ಆ ಆನಂದದ ಅಂಬರದಲ್ಲಿ ವಿಹರಿಸುತ್ತಿದ್ದ ಆತ್ಮದ ಪಕ್ಷಿಗೆ ಇದ್ದಕ್ಕಿದ್ದಂತೆ ನಾಟಿದ ಬಾಣ ಯಾವುದು? ನಾಟಿದ್ದು ಯಾಕೆ? ಕಾಣದ ಕೈ ನೀಡಿದ ತೀವ್ರ ಯಾತನೆಯಲ್ಲಿ ಬೆಂದು ಆ ಹಕ್ಕಿ ಇಂದು ಜ್ವರ-ಹಸಿವುಗಳ ಮುದ್ದೆಯಾಗಿದೆ. ಆ ಸೀದ ಕಿರುಮರಿ ಹಕ್ಕಿ ಭಿಮವ್ವನ ರೌಂಡಿಗೆ ಬಂದುಬಿದ್ದಿದೆ! ಇದು ಅಂತರಾಳದ ಕಳವಳ. ಅಲ್ಲಿನ ತೀರದ ಜ್ವರ, ಹಿಂಗದ ಹಸಿವು, ಮುಗಿಯದ ಅನಾಥಪ್ರಜ್ಞೆ, ಆಕಾಶದ ಉದ್ದಗಲಕ್ಕೂ ರೆಕ್ಕೆಬಿಚ್ಚಿ ಹಾರಾಡುವ ಹಕ್ಕಿಗೆ ಎಂದೆಂದೂ ಹಾರಾಡುತ್ತಲೇ ಇರಲಾಗದು. ಅದು ನೆಲಕ್ಕಿಳಿಯಲೇ ಬೇಕು ಕೊನೆಗೂ! ಇಳಿದು ಈ ನೆಲದ ನೋವುಗಳಿಗೆ ಮೈಕೊಡಲೇ ಬೇಕು. ಅದಕ್ಕೆ ಮದ್ದೆಂದರೆ ಈ ನೆಲದೆದೆಯ ಹಾಲೇ. ಅದನ್ನು ಕೊಡಲು ಭೀಮವ್ವಳಂಥವಳಿಗೆ ಸಾಧ್ಯ. ಈ ಆತ್ಮದ ತಬ್ಬಲಿ ಹಕ್ಕಿಗೆ ಎದೆಗುಟುಕು ನೀಡು ಬಾ ಎಂಬ ಆರ್ತತೆ, ಮಗುವಿನ ಅಳುದನಿಯಂತೆ ಕವಿತೆಯ ತುಂಬಾ ಗಾಢವಾಗಿ ಹಬ್ಬಿದೆ.

ಭೀಮವ್ವನ ಶಕ್ತಿಯಾದರೂ ಎಂಥದು ಹಾಗಾದರೆ? ಆಕೆ ಮೊಲೆಬರದ ಕೊಡಗೂಸು, ಮದುವೆಯಾದ ತಾಯಿ ‘ಮೊಲೆಹಾಲು ಬೇಡವ್ವ’ ಎಂಬಲ್ಲಿ ಅವಳ ಜೈವಿಕ-ಲೈಂಗಿಕ ಆವರಣಗಳು, ಅದರ ಮಿತಿಗಳು ಕಳಚುತ್ತವೆ. ಮೊಲೆ, ಮದುವೆಗಳ ಹಂಗಿಲ್ಲದ ತಾಯ್ತನದ ಪ್ರತಿನಿಧಿ ಆಕೆ. ಆಕೆಯ ತಾಯ್ತನದ ಸಾಂತ್ವನದ ಸ್ಪರ್ಷ ಬೇಕಾಗಿರುವುದು ಒಬ್ಬ ನಾಗಲಿಂಗನಿಗಲ್ಲ. ಬದಲಿಗೆ ಇಡೀ ಮನುಕುಲಕ್ಕೆ. ಸಾಮಾಜಿಕ, ರಾಜಕೀಯ, ಆರ್ಥಿಕ ಒಟ್ಟಾರೆ ಇಡಿಯ ಸಾಂಸ್ಕøತಿಕ ಸಂದರ್ಭವೇ ಅಂದು ಅನಾಥ ಶಿಶುವಿನಂತಾಗಿತ್ತು.

ಕವಿತೆಯ ಮತ್ತೊಂದು ವೈಶಿಷ್ಟ್ಯವೆಂದರೆ, ಅದು ಇಡೀ ಭೂಮಿಯ ಬಗ್ಗೆ ಹೇಳುತ್ತಲೇ ನವಲಗುಂದದ ಬಿರುಬಿಸಿಲು, ಅಲ್ಲಿನ ಬರಗಳ ಕುರಿತು ಹೇಳುತ್ತ ಪ್ರಾದೇಶಿಕವಾಗುತ್ತದೆ. ಆ ಕಾಲದ ಚರಿತ್ರೆಯನ್ನು ಕಟ್ಟಿಕೊಡುತ್ತ ಸಮಕಾಲೀನವಾಗುತ್ತದೆ. ಆ ಚೌಕಟ್ಟುಗಳೊಳಗೇ ನಿಂತು ಕಾಲ-ದೇಶಗಳಾಚೆ ಕೈಚಾಚುತ್ತದೆ. ಇಡೀ ಭಾರತದ ಸಂದರ್ಭದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಸಾರ್ವಭೌಮತ್ವದಲ್ಲಿ ಮಸುಕಾದ ಈ ನೆಲದ ಆತ್ಮತೇಜ, ವ್ಯಾಪಾರೀ ಮನೋಭಾವದಲ್ಲಿ ಹಿನ್ನೆಲೆಗೆ ನಿಂತ ಆಧ್ಯಾತ್ಮದ ವಿಶಾಲ ಮನೋಭಾವ, ಹಾಗೆಯೇ ಕನ್ನಡದ ಸಂದರ್ಭಕ್ಕೆ ಬಂದರೆ, ಕಿತ್ತೂರು ವಂಶದ ರಾಜಕೀಯ ಹುನ್ನಾರಗಳು ತೆಗೆದುಕೊಂಡ ಬಲಿ, ಆ ಭಾಗವನ್ನು ವ್ಯಾಪಿಸಿ ಹಸುಗೂಸುಗಳನ್ನು ಬಲಿತೆಗೆದುಕೊಂಡ ಕಾಲರಾ, ಹಸಿರುಕ್ಕುವ ಹೊಲದಾಳದಲ್ಲಿ ಬಸಿರ ಮಕ್ಕಳನ್ನು ಹೂತ ಬಡವರ ದುರಂತದ ಬದುಕು, ಇವೆಲ್ಲ ಜ್ವಲಂತವಾದ ವಾಸ್ತವವಾಗಿದ್ದವು. ‘ಹಸಿರು ಜಗ್ಗನೆ ಉರಿವ’ ಎಂಬ ಅಭಿವ್ಯಕ್ತಿಯಲ್ಲಿ ಸಾಮಾಜಿಕ ಅಸಮಾನತೆಯ ವಿಷಬೀಜದ ಸೂಚನೆ ಥಟ್ಟನೆ ಅರಿವಾಗುತ್ತದೆ. ಸಮೃದ್ಧಿಗೆ ಕಾರಣರಾದವರ ಬದುಕು ಮಾತ್ರ ಬಡತನದಲ್ಲಿ ಬೆಂದುಹೋಗಿರುವ ವಿಪರ್ಯಾಸವಿದು. ಈ ಉರಿಯೋ ಸಂಸ್ಕøತಿಯ ದುರಂತ. ತೊನೆದಾಡುವ ಜೋಳವೂ ಕಂಬನಿಯಂತೆ ಕಾಣುವುದು ಆ ದುರಂತದ ತೀಕ್ಷ್ಣ ಅಭಿವ್ಯಕ್ತಿ. ತೀವ್ರವಾದ ನೋವು ಅನುಭವವನ್ನು ಸಮರ್ಥವಾಗಿ ಕಟ್ಟಿಕೊಡುವ ಇಂಥ ಶ್ರೇಷ್ಟ ಅಭಿವ್ಯಕ್ತಿ ಕಾವ್ಯದುದ್ದಕ್ಕೂ ಸ್ಥಾಯಿಯಾಗಿದೆ. ಒಟ್ಟಾರೆ ಸಾವು, ನೋವು, ಯಾತನೆಯನ್ನು ತುಂಬಿದ ಬದುಕು, ಅದನ್ನು ಪೋಷಿಸುವ ಸಾಮಾಜಿಕ, ಆರ್ಥಿಕ, ರಾಜಕೀಯ ಸನ್ನಿವೇಶಗಳು….. ಒಟ್ಟಾರೆ ಸಂಸ್ಕøತಿಗೇ ಕವಿದ ಈ ಸಂಕಷ್ಟಗಳಿಂದ ಪಾರುಮಾಡುವುದು ಆ ಜೀವಧಾರೆಯೇ. ಅದು ಸಮಗಾರ ಭೀಮವ್ವ ನೀಡುವ ಎದೆಹಾಲು.

ಹೆರದ, ಮೊಲೆಯೂಡಿಸಿದ ಭೀಮವ್ವಳ ಎದೆಹಾಲಾದರೂ ಎಂತಹದು? ಆಕೆ ಬಂಜೆ, ಮೊಲೆಬರದ ಕೂಡಗೂಸು. ಅದು ಲೌಕಿಕದ ಫಲವತ್ತತೆಯ ದೃಷ್ಟಿಗೆ. ಆದರೆ, ಆಕೆಯಲ್ಲೊಂದು ಅಲೌಕಿಕ ಫಲವಂತಿಕೆಯಿದೆ. ಅದು ಅವಳ ಎದೆಹಾಲು ಕೊಡುವ ಜೀವಚೈತನ್ಯ. ಕವಿತೆಯಲ್ಲಿ ಸಾಮಾಜಿಕ ಅಸಮಾನತೆಯ ಆವರಣವೊಂದನ್ನು ಸೂಚಿಸಲಾಗಿದೆ. ಅದು ಮನುಷ್ಯ ನಿರ್ಮಿತ ಕೇತಕ ಸಾಮಾಜಿಕ ವ್ಯವಸ್ಥೆಯ ದುರಂತ ಚಿತ್ರಣ. ಅಲ್ಲೀಕೆ ಮುಟ್ಟಬಾರದವಳು. ಸಾಮಾಜಿಕ ಶ್ರೇಣೀಕರಣದಲ್ಲಿ ತೀರ ಕೆಳಗಿರುವಾಕೆ. ಬಡತನವನ್ನೇ ಉಂಡು ಉಟ್ಟು ಹಾಸಿ ಹೊದೆವಾಕೆ. ಆದರೆ ಅವಳೊಳಗಿರುವ ಚೈತನ್ಯ ಈ ಕೃತಕ ವ್ಯವಸ್ಥೆಗಳನ್ನು ಮೀರಿದ್ದು. ಅದು ಆಧ್ಯಾತ್ಮದ ಅಸೀಮತೆಯನ್ನು ಪ್ರತಿನಿಧಿಸುವಂಥದು. ಅಲ್ಲಿ ಶೋಷಕರೂ ಇಲ್ಲ, ಶೋಷಿತರೂ ಇಲ್ಲ. ಅದೊಂದು ಅಖಂಡ ಬೆಳಕಿನ ಸ್ಥಿತಿ. ಅವಳ ಅಂತಃಸತ್ವವನ್ನು ವ್ಯವಸ್ಥೆಯ ಕ್ರೌರ್ಯಕ್ಕೆ ಮುಟ್ಟಲೂ ಸಾಧ್ಯವಿಲ್ಲ. ಈ ಲೌಕಿಕದ ನೋವುಗಳನ್ನುಂಡು ಆಕೆ ನಾಶವಾಗುವುದಿಲ್ಲ. ಬದಲಿಗೆ ಆ ನಫವನ್ನೇ ಗೆಲುವಾಗಿ, ನಲಿವಾಗಿ, ಫಲವಾಗಿ ಪರಿವರ್ತಿಸುವಾಕೆ. ಈ ನೆಲದ ವೈಷಮ್ಯವನ್ನು ಮೆಟ್ಟಿನಿಲ್ಲುವ ಚೈತನ್ಯ ಈ ನೆಲದ್ದೇ ಆದ ಆಧ್ಯಾತ್ಮಿಕತೆಗಿದೆ. ಅದರ ಪ್ರತಿರೂಪ ಈ ಭೀಮವ್ವ. ಆಕೆ ಕಸವನ್ನೇ ಗೊಬ್ಬರ ಮಾಡಿ ಬೀಜ ಬಿತ್ತುವ ಕೈ. ದ್ವೇಷದ ಕಾವು ಕಡಿಯಲಾಗದಂಥ ಮರ ಆಕೆ. ಕಡಿದು ಕಟ್ಟಿಗೆ ಮಾಡಿ ಹೊಲೆಯೆಂಬ ಒಲೆಯಲ್ಲಿ ಸುಟ್ಟರೂ ಆಕೆ ಮಾತ್ರ ರೊಟ್ಟಿಯಾಗಿ ಹಸಿವ ನೀಗಿಸುವಂತ ಪ್ರೇಮಮುಖ. ವ್ಯವಸ್ಥೆಗೆ ಒಡ್ಡುವ ಪ್ರತಿರೋಧ ಇನ್ನೂ ಶಕ್ತಿಶಾಲಿಯಾಗಿರಲು ಹೇಗೆ ಸಾಧ್ಯ? ಏಕೆಂದರೆ, ಈ ಪ್ರತಿರೋಧದಲ್ಲಿ ನಾಶವಿಲ್ಲ. ಬದಲಿಗೆ ಪ್ರತಿಸೃಷ್ಟಿಯ ಜೀವಪರ ಶಕ್ತಿಯಿದೆ. ಪ್ರತಿಸಂಸ್ಕøತಿಯೊಂದನ್ನು ಹುಟ್ಟಿಸಬಲ್ಲ ಚೈತನ್ಯವಿದೆ. ಈ ದೃಷ್ಟಿಯಿಂದಲೂ ಭೀಮವ್ವ ತಾಯಿಯೇ.

ಸ್ವತಃ ಭೀಮವ್ವನಿಗೂ ತನ್ನ ಶಕ್ತಿಯ ಅರಿವಿಲ್ಲ. ಆಕೆ ಲಕ್ಷ ಯೋಜನದಾಚೆ, ಕೋಟಿಯೋಚನೆಯಾಚೆ ಕುಳಿತವಳು. ಅವಳು ಇಲ್ಲೇ ಈ ಕ್ಷಣ ಜೀವಂತವಾಗಿದ್ದರೂ ಕಾಲ-ದೇಶ, ಯೋಚನೆಗಳ ವ್ಯವಸ್ಥೆಗೆ ನಿಲುಕದಂಥವಳು. ಅವಳ ಮೌನವೂ ಕೂಡ ನಿಷ್ಫಲವಲ್ಲ. ಮೌನದೆಳೆಗಳನ್ನೇ ಸುತ್ತಿಸುತ್ತಿ ಬಟ್ಟೆ ನೇಯುವ ಸೃಷ್ಟಿಶೀಲಳು ಆಕೆ. ಆದರೂ, ಆಕೆ ಬಂಜೆಗಂಬನಿ ಮಣಿಯನ್ನು ಪೋಣಿಸುತ್ತಿದ್ದಾಳೆ. ಕಣ್ಣೀರು ಬರಿ ಬಂಜೆ. ಅತವಾ ಬಂಜೆ ಎಂಬ ಲೋಕದೃಷ್ಟಿ ಕೊಟ್ಟ ಕಣ್ಣೀರು ಅದು. ತನ್ನ ಚೈತನ್ಯದ ಅರಿವು ಆಕೆಗಿಲ್ಲ. ಯಾಕೆಂದರೆ ಅವಳಿರುವುದೇ ಚೈತನ್ಯವಾಗಿ. ಆದ್ದರಿಂದ ಅದನ್ನು ಪಡೆಯುವ ಹಸಿವು ಅವಳಿಗಿಲ್ಲ. ಆ ಸಹಜ ಸ್ಥಿತಿ ನಮಗಿಂದು ಬೇಕಾಗಿದೆ. ಅದೇ ಕವಿತೆ ಕಟ್ಟಿಕೊಡುವ ಅನುಭಾವದ ಹೊಸದರ್ಶನವೂ ಹೌದು.

ಮನುಷ್ಯ ಸ್ವಾರ್ಥದೆದುರು ಥಟ್ಟನೇ ಮಗುತನದ ಕಂಪನ್ನು ಇಟ್ಟುಬಿಡುತ್ತದೆ ಕವಿತೆ. ಸಂತೆಯೆಂಬುದು ವ್ಯಾಪಾರೀ ಮನೋಭಾವಕ್ಕೆ ಸಂಕೇತ. ಅಲ್ಲಿ ಲಾಭ-ನಷ್ಟಗಳ ಪ್ರಶ್ನೆ ಮುಖ್ಯವೇ ಹೊರತು ಅಂತರಂಗದ ಪಿಸುದನಿಯಲ್ಲ. ಗದ್ದಲದ ಮಧ್ಯೆ ಮುಚ್ಚಿಹೋದ ನಿಜಭಾವದ ಹುಡುಕಾಟವಿದು. ಬದುಕಿನ ಚಿಂತೆಗಳ ಸಂತೆ ಸಾಕಾಗಿ ಶುದ್ಧ ಅನುಭಾವ ಬೇಕಾಗಿದೆ. ‘ಎಳೆತನ’ವೆಂಬುದು ಸಹಜ ಮಾರ್ದವ, ಸಹಜ ಅಸಹಜತೆಯ ಹಾದಿತೋರು, ಅದಕ್ಕಾಗಿ ಎದೆಹಾಲನ್ನು ಸಿಂಪಡಿಸು ಎಂದು ನಾಗಲಿಂಗ ಮೊರೆಯಿಡುವಲ್ಲಿ ಆಧುನಿಕ ಬದುಕಿನ ಸಂತೆಯಲ್ಲಿ ಸಿಕ್ಕಿಬಿದ್ದ ಎಲ್ಲ ಮನುಷ್ಯರ ಮೊರೆ ಕೇಳುತ್ತದೆ. ಎದೆ ಹಾಲನ್ನು ಸಿಂಪಡಿಸುವುದು ಎಲ್ಲಿ? ನವಲಗುಂದಕ್ಕೆ, ಯಾಂತ್ರೀಕರಣದಿಂದ ಕಿರುಗುಡುವ ಹುಬ್ಬಳ್ಳಿ ನಗರಕ್ಕೆ. ಅಲ್ಲಿಂದ ಮುಂದೆ ಕಾಲ ದೇಶಗಳಾಚೆ ಇರುವ ತಾರಾಮಂಡಲಕ್ಕೆ, ಇಡಿಯ ವ್ಯೋಮಕ್ಕೆ. ಈ ದಾಹ ಬರೀ ವ್ಯಕ್ತಿಯದಲ್ಲ. ಅಖಂಡ ವಿಶ್ವವೇ ಅದಕ್ಕಾಗಿ ತ್ರಸ್ಥವಾಗಿದೆಯೆಂಬ ಭಾವ ಕವಿಯದು.

ರದಿಂದ ಬಿರುಕುಬಿಟ್ಟ ನವಲಗುಂದದ ನೆಲ, ಜ್ವರದಲ್ಲಿ ಬೇಯುವ ನಾಗಲಿಂಗ, ಹೀಗೆ ಒಂದು ಬಗೆಯ ದಾಹ, ಉದ್ವಿಗ್ನತೆಯಿಂದ ಆರಂಭವಾಗುವ ಕವಿತೆ ಈ ಉದ್ವಿಗ್ನತೆ ಶಾಂತಗೊಳ್ಳುವ ಸೂಚನೆಯೊಂದಿಗೆ ಕೊನೆಯಾಗುತ್ತದೆ.


ತಾರವ್ವ ಮಳೆಯ ಎಳೆ ಎಳೆಯ ಎದೆಹಾಲ

ಸಿಂಪಡಿಸು ಗುಡ್ಡಕ್ಕೆ ನವಲಗುಂದಕ್ಕೆ

ಗದಗಕ್ಕೆ ಗಿರಣಿಗಳು ಕಿರುಗುಡುವ ಹುಬ್ಬಳ್ಳಿ ನಗರಕ್ಕೆ

ತಾರೆಮಂಡಲ ಬುಗುರಿ ಕೆದರಿರುವ ವ್ಯೋಮಕ್ಕೆ

ತಾರವ್ವ ಚಂದ್ರವ್ವ ಮುಗಿಲವ್ವ ಭುಗಿ ಭುಗಿಲವ್ವ

ಎದೆಯಲ್ಲಿ ಕರುಳಲ್ಲಿ ನೆಲದಲ್ಲಿ …….

ಏಸು ಕಾವಿತ್ತವ್ವ ಮಳೆಬಿದ್ದ ನೆಲದಲ್ಲಿ ಕಾವು ತಡೆಯದೆ ಹಾವೇಸು ಹುತ್ತವ

ಬಿಟ್ಟು

ನೆಲದುದ್ದ ನೆಲದಗಲ ಹೊರಳಿದುವ್ವವ್ವಾ…..

(ಸಮಗಾರ ಭೀಮವ್ವ, ನಮ್ಮ ಕನ್ನಡ ಕಾವ್ಯ, ಪು.421)

ಎದೆಹಾಲು ಅಲ್ಲಿ ಮಳೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬರ, ಜ್ವರಗಳೆರಡೂ ಹಿಂಗುವ ಸೂಚನೆ ಕಾಣುತ್ತದೆ. ನಾಗಲಿಂಗನಿಗೆ ಎರಗಿದ ದುಃಸ್ವಪ್ನದ ಅಲ್ಲೋಲ ಕಲ್ಲೋಲ ಸ್ಥಿತಿ ಇದೇ ಸಾಮಾಜಿಕ-ಸಾಂಸ್ಕøತಿಕ ಸಂದರ್ಭದ ಸಂಕೇತವಾಗಿ ಕಾಣಿಸುತ್ತದೆ. ಆ ಸ್ಥಿತಿಗೆ ದೇಸೀಯ ಚೈತನ್ಯವೇ ಪರಿಹಾರ ಎಂಬ ನಿಲುವೂ ಇಲ್ಲಿ ವ್ಯಕ್ತವಾಗುತ್ತದೆ. ಅದೇ ಎದೆಹಾಲು. ಇಡೀ ಸಂದರ್ಭದ ಹಸಿವಿಗೆ ಆ ಎದೆಹಾಲು ಬೇಕು. ಹೀಗೆ ಏಕಕಾಲದಲ್ಲಿ ವ್ಯಕ್ತಿಗತ ಆಧ್ಯಾತ್ಮಿಕ ಚೈತನ್ಯದ ಹುಡುಕಾಟ ಹಾಗೂ ಒಟ್ಟಾರೆ ಸಾಮಾಜಿಕ ಸಂದರ್ಭದ ತೊಳಲಾಟಗಳು ಹೆಣೆದುಕೊಂಡು ಕವಿತೆಯಲ್ಲಿ ಧ್ವನಿಸುವ ಪರಿ ಅನನ್ಯವಾದುದು. ನೆಲದೊಡಲ ತಂಪಿಗೆ ಮೈಕೊಟ್ಟು ಹೊರಳುವ ಹಾವುಗಳ ಚಿತ್ರ ಎದೆಹಾಲನ್ನು ಪಡೆದುಕೊಂಡು ಶಾಂತವಾಗುವ ಪರಿಯೇ ಆಗಿದೆ.

ಅನುಭಾವದ ಬೆಳಕು ಕನ್ನಡ ಕಾವ್ಯವನ್ನು ಎಷ್ಟೆಲ್ಲ ಬಗೆಯಲ್ಲಿ ಬೆಳಗಿದೆ. ಅದರ ಅಂತಃಸತ್ವವನ್ನು ಹೆಚ್ಚಿಸಿದೆ. ಆಸತ್ವವನ್ನು, ಬೆಳಕನ್ನು ಹೀರಿ ಬೆಳೆಯುವ ಹಂಬಲ ನಮ್ಮದು. ಕಾಲಕಾಲಕ್ಕೆ ಬೆಳಕಿನ ಬೀಜಗಳು ಮೊಳೆಯುತ್ತಿರುವವರೆಗೆ ಕತ್ತಲೆಯ ಭಯವಿಲ್ಲ.

ಮನುಷ್ಯ ಮೂಲತಃ ಮೃಗವೇ. ತನ್ನ ಉಳಿವಿಗಾಗಿ ಹೋರಾಡುವ ಆತನ ಮೂಲ ಪ್ರವೃತ್ತಿ ಹಿಂಸೆಯೇ ಎಂಬುದು ಒಂದು ವಾದ. ಮನುಷ್ಯ ಅಷ್ಟೇ ಏಕೆ ಸಕಲ ಚರಾಚರಗಳೂ ಪವಿತ್ರವಾದವು, ಅವು ಚೈತನ್ಯದ ಸೃಷ್ಟಿ. ಆದ್ದರಿಂದ ಅವು ಆ ಶುದ್ಧ ಚೈತನ್ಯದ ಭಾಗವೇ ಆಗಿವೆ. ಆದರೆ, ಭವದಲ್ಲಿ ಬೆಳೆದಂತೆ ಭ್ರಷ್ಟಗೊಳ್ಳುವ ಮನಸ್ಸು ತನ್ನ ಚೈತನ್ಯ ಮೂಲವನ್ನು, ಅದರ ಶುದ್ಧತೆಯನ್ನು ಕಳೆದುಕೊಳ್ಳುತ್ತ ಹೋಗುತ್ತದೆ ಎಂಬುದು ಆಧ್ಯಾತ್ಮದ ಅಂತಃದರ್ಶನ. ಮರೆಯಾದ ಶುದ್ಧ ಚೈತನ್ಯವನ್ನು ಮರಳಿ ಸೇರುವ ಹಂಬಲವೇ ಆಧ್ಯಾತ್ಮ ಭಾವ. ಆ ಚೈತನ್ಯ ಭಾವವನ್ನು ಕಾಣುವುದೇ ಅನುಭಾವ.

ಹಿಂಸೃ ಪಶುಗಳಲ್ಲೂ ಸಹ ತಮ್ಮ ಶಿಶುವನ್ನು ಪೋಷಿಸುವಾಗಿನ ಪ್ರೇಮಭಾವ ಇಂದಿಗೂ ಶುದ್ಧವಾಗಿಯೇ ಉಳಿದಿದೆ. ಅದು ಆದಿಮವಾದುದು. ಆದ್ದರಿಂದಲೇ ಮಗು ತಾಯಿಯೆಡೆಗೆ ತುಡಿಯುವ ಪ್ರೇಮಭಾವವೂ ಪರಿಶುದ್ಧವೇ. ಎಲ್ಲ ಸಂಬಂಧಗಳ ಮೂಲವಾದ ಮಾತೃಮೂಲದಲ್ಲಿ, ಚೈತನ್ಯವು ಭ್ರಷ್ಟಗೊಳ್ಳದ ಮಗುತನದಲ್ಲಿ ಆ ಪಾವಿತ್ರ್ಯದ ಕುರುಹು ಕಾಣುತ್ತಿದೆ. ಅದನ್ನು ಮತ್ತೆ ಆವಾಹಿಸಿಕೊಳ್ಳುವುದು ಆಧ್ಯಾತ್ಮದ ದೃಷ್ಟಿ. ಅದು ಕನ್ನಡ ಕಾವ್ಯದಲ್ಲೂ ಸ್ಪಷ್ಟವಾಗಿ ಕಂಡಿದೆ. ಈ ಎರಡು ಭಿನ್ನ ದೃಷ್ಟಿಗಳ ಸತ್ಯಾಸತ್ಯತೆಯೇನೆ ಇರಲಿ, ದ್ವಂದ್ವಗಳಿಂದ, ಘರ್ಷಣೆಯಿಂದ ಕುಬ್ಜಗೊಂಡು ನಾಶವಾಗುವುದಕ್ಕಿಂತ ನಮ್ಮನ್ನು ಅರಳಿಸುವ, ಸುಳುದೆಗೆದು ಬೆಳೆಯುವಂತೆ ಮಾಡುವ ಅನುಭಾವದ ದೃಷ್ಟಿ ಯಾಕೆ ನಮ್ಮದಾಗಬಾರದು?

ಇಂದಿನ ಮೂಲಭೂತವಾದ, ಜನಾಂಗದ್ವೇಷ, ಯುದ್ಧದಾಹ, ವ್ಯಾಪಾರೀಕರಣದಿಂದ ಉಂಟಾದ ಸಾಂಸ್ಕøತಿಕ ಮಾಲಿನ್ಯ, ಇವುಗಳೆಲ್ಲ ದಿಗಿಲು ಹುಟ್ಟಿಸುತ್ತಿವೆ. ಉಪಭೋಗ ಸಂಸ್ಕøತಿ ತಂದೊಡ್ಡಿದ ಆಮಿಷಗಳಲ್ಲಿ ಮನುಷ್ಯತ್ವ ಮರೆಯಾಗಿ ಪಶುತ್ವವೇ ವಿಜ್ರಂಭಿಸುತ್ತಿದೆ. ಆಧುನಿಕ ಮನುಷ್ಯ ತನ್ನೆಲ್ಲ ಹೋರಾಟಗಳ ಮಧ್ಯೆಯೂ ತ್ರಸ್ಥನಾಗಿದ್ದಾನೆ. ಹಾಗೆಂದು ಕೆಲವರಿಗಾದರೂ ಗಂಭೀರವಾಗಿ ಅನಿಸುತ್ತಿದೆ. ಸಾಹಿತ್ಯದಂತಹ ಕಲಾಪ್ರಕಾರಗಳ ಮೂಲಕ ಕಳೆದು ಹೋಗುತ್ತಿರುವ ಮನುಷ್ಯತ್ವವನ್ನು, ಶುದ್ಧ ಚೈತನ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತೂ ಹೌದು. ಬೆಳಕಿನ ಬೀಜಗಳು ಎದೆಯೊಳಗೆ ಮೊಳೆಯುವ ಸೃಷ್ಟಿ ಸಂಭ್ರಮದಲ್ಲಿ ನಾಳೆಗಳ ಮೊಗವೂ ಬೆಳಗಬಹುದು. ಅದಕ್ಕಾಗಿ ನಮ್ಮೆದೆಗಳು ಹದಗೊಳ್ಳಲಿ.

Comments are closed.

Social Media Auto Publish Powered By : XYZScripts.com