ಜುಲೈ 4 ರಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದೇನೆ : ಎಚ್. ವಿಶ್ವನಾಥ್

ಮೈಸೂರು: ಜುಲೈ 4 ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದೇನೆ  ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.  ಇತ್ತೀಚೆಗೆ ತಾನೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ಮಾಜಿ ಸಂಸದ ಎಚ್. ವಿಶ್ವನಾಥ್ ‘ ನಾನು ಜೆಡಿಎಸ್ ಸೇರುವ ಮೂಲಕ ಅಜೆಂಡಾವನ್ನಷ್ಟೇ ಬದಲಾಯಿಸುತ್ತಿದ್ದೇನೆ, ಆದರೆ ನನ್ನ ಅಜೆಂಡಾವನ್ನು ಬದಲಿಸುವುದಿಲ್ಲ ಎಂದು ವಿಶ್ವನಾಥ್ ಹೇಳಿದರು. ಜೆಡಿಎಸ್ ಸೇರ್ಪಡೆ ನಂತರ ಆ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತೇನೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ. ನನ್ನ ಜಾತ್ಯಾತೀತವಾದ ಸಿದ್ದಾಂತಗಳಿಗೆ ಬದ್ದವಾದ ಅಜೆಂಡಾ ಬದಲಾಗುವುದಿಲ್ಲ. ರಾಜಕೀಯ ಧ್ರುವೀಕರಣ ಹೊಸದೇನಲ್ಲ. ನಾನು ಕಾಂಗ್ರೆಸ್‌ನ ನೆರಳು ಮಾತ್ರ ಬಿಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಋಣಿಯಾಗಿರುತ್ತೇನೆ. ಬೇರೆ ಪಕ್ಷದ ನೆರಳು ಅವಲಂಬಿಸುವ ಅನಿವಾರ್ಯತೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದೇನೆ ‘ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ ಕಳೆದ ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿದ್ದೆ. ನಾನು ತುಳಸಿದಾಸಪ್ಪ, ಎಸ್.ಎಂ. ಕೃಷ್ಣ ಅವರ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡಿದ್ದೆ.
ಶಾಸಕ, ಸಂಸದನಾಗುವ ಮುನ್ನವೇ ಸ್ಟಾರ್ ಆಗಿದ್ದೆ ‘ ಎಂದರು. ವಿದ್ಯಾರ್ಥಿ ಹೋರಾಟ, ವಕೀಲಿಕೆ, ರಾಜಕೀಯ ಪ್ರವೇಶದ ದಿನಗಳ ಬಗ್ಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರನ್ನು ಹಾಡಿ ಹೊಗಳಿದ, ಅವರ ಸಾಧನೆ ಕುರಿತು ಪ್ರಶಂಸೆ ಮಾಡಿದರು. ‘ ದೇವೆಗೌಡರು ಭಾರತದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದ್ದಾರೆ. ಹಳ್ಳಿಯಿಂದ ಬಂದು ದೇಶವೇ ತಿರುಗಿ‌ ನೋಡುವ ಸಾಧನೆ ಮಾಡಿದ್ದಾರೆ ‘ ಎಂದಿದ್ಧಾರೆ.

‘ ರಾಜಕೀಯವನ್ನ ನಾನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರಲಿಲ್ಲ. ನನ್ನ ಬದುಕಿನ ಎರಡನೇ ಪ್ರಮುಖ ಘಟ್ಟಕ್ಕೆ ಕಾಲಿಡುತ್ತಿದ್ದೇನೆ. ನನ್ನ ಮನಸ್ಸು ಪ್ರಾದೇಶಿಕ ಪಕ್ಷದತ್ತ ಒಲವು ಮಾಡಿದೆ. ಜೆಡಿಎಸ್‌ನಲ್ಲಿ ನನಗೆ ಯಾರು ಹೊಸಬರು ಇಲ್ಲ. ಅಲ್ಲಿರುವ ಎಲ್ಲರು ನನ್ನ ಪರಿಚಿತರೆ. ಹೀಗಾಗಿ ಎಲ್ಲರ ಜೊತೆ ಸೇರಿಕೊಂಡು ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ ನನ್ನ ಸಮಾಜದ ಜನರು ಸಹ ಜೆಡಿಎಸ್‌ಗೆ ಸೇರಿ ಎಂದಿದ್ದಾರೆ. ಎಲ್ಲರ ಸಲಹೆ ಪಡೆದು ಅಧಿಕೃತವಾಗಿ ಜೆಡಿಎಸ್ ಸೇರುತ್ತಿದ್ದೇನೆ. ನನ್ನ ಬೆಂಬಲಿಗರೆಲ್ಲ ರಾಜೀನಾಮೆ ನೀಡಿ ನನ್ನ ಜೊತೆ ಬರಬೇಕು ಎನ್ನುವ ಒತ್ತಾಯ ಇಲ್ಲ ‘ ಎಂದಿದ್ದಾರೆ.

ನನ್ನ ಕ್ರೀಡಾಂಗಣ ಮಾತ್ರ ಬದಲಾಗುತ್ತಿದೆ. ನನ್ನ ಆಟ ಬದಲಾವಣೆ ಆಗುವುದಿಲ್ಲ. ನನ್ನ ರಾಜಕೀಯ, ನನ್ನ ರಾಜಕಾರಣ ಎರಡು ಸಹ ಹಾಗೆಯೇ ಇರುತ್ತದೆ. ಹೊಸ ಪಕ್ಷ, ಹೊಸ ವಿಷಯ, ಹೊಸ ಸಂದೇಶದೊಂದಿಗೆ ಜೆಡಿಎಸ್‌ಗೆ ಹೋಗುತ್ತಿದ್ದೇನೆ.  ನಾನೇನು ಕಮಂಡಲ ಹಿಡಿದುಕೊಂಡು ಜೆಡಿಎಸ್‌ಗೆ ಹೋಗುತ್ತಿಲ್ಲ. ಒಬ್ಬ ರಾಜಕಾರಣಿಗೆ ಇರಬೇಕಾದ ಕನಿಷ್ಠ ಆಸೆಗಳು ನನಗೂ ಇವೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣಾ ಟಿಕೇಟ್‌ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಎಚ್.ವಿಶ್ವನಾಥ್ ಹೇಳಿದ್ದಾರೆ.

 

 

 

 

 

 

 

3 thoughts on “ಜುಲೈ 4 ರಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದೇನೆ : ಎಚ್. ವಿಶ್ವನಾಥ್

Comments are closed.

Social Media Auto Publish Powered By : XYZScripts.com