ಜಿಜೆಎಂ ಕಾರ್ಯಕರ್ತರಿಂದ ಗುಂಡಿನ ದಾಳಿ: ಐದು ಜನ ಭದ್ರತಾ ಸಿಬ್ಬಂದಿಗೆ ಗಾಯ

ಡಾರ್ಜಿಲಿಂಗ್ : ಇಲ್ಲಿನ ಬೆಟ್ಟದ ಮೇಲೆ ಜಿಜೆಎಂ ಕಾರ್ಯಕರ್ತರು ನಡೆಸಿದ ಗುಂಡಿನ ದಾಳಿಯಲ್ಲಿ ಐದು ಜನ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, 20 ವರ್ಷದ ಓರ್ವ ಟ್ರಕ್‍ ಚಾಲಕ ದಾಳಿಯಲ್ಲಿ ಮೃತಪಟ್ಟಿದ್ದಾನೆ.

ಗೋರ್ಖಾ ಜನಮುಖಿಮೋರ್ಚಾ (ಜಿಜೆಎಂ) ಕಾರ್ಯಕರ್ತರು ಪ್ರತ್ಯೇಕ ರಾಜ್ಯದ ಉದ್ದೇಶವನ್ನಿಟ್ಟುಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ  ಬೆಟ್ಟದ ಮೇಲಿನ ಸಾಕಷ್ಟು ಮನೆಗಳು ನಾಶಗೊಂಡಿವೆ. ಈ ಹಿನ್ನೆಲೆಯಲ್ಲಿ ಡಾರ್ಜಲಿಂಗ್‍ನಲ್ಲಿ ನೆಟ್‍ವರ್ಕ್‍ನ್ನು ಸ್ಥಗಿತಗೊಳಿಸಲಾಗಿದೆ. ದಾಳಿ ತೀವ್ರಗೊಂಡಿರುವ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಜನರನ್ನು ತಹಬದಿಗೆ ತರುವ ಪ್ರಯತ್ನ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಡಾರ್ಜಿಲಿಂಗ್ ನಗರದಿಂದ 40 ಕಿ.ಮೀ ದೂರದಲ್ಲಿರುವ ತೀಸ್ತಾ ವ್ಯಾಲಿಗೆ ಶೋಧ ಕಾರ್ಯಾಚರಣೆಗೆಂದು  ತೆರಳಿತ್ತು. ಈ ವೇಳೆ ದಾಳಿ ನಡೆಸಲಾಗಿದ್ದು, ಕಲ್ಲುಗಳಿಂದ ಜನರನ್ನು ಹೊಡೆಯಲಾಗಿದೆ. “ಕುಕ್ರಿ” ( ಸಾಂಪ್ರದಾಯಿಕ ನೇಪಾಳಿ ಬಾಕು) ಗಳಿಂದ ದಾಳಿ ಮಾಡಿದೆ. ದಾಳಿಯಲ್ಲಿ ಪೊಲೀಸ್‍ ಮತ್ತು ಸಿಆರ್‍ಪಿಎಫ್‍ನ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಮಿರಿಕ್‍ ಪುರಸಭೆಯ ಉಪಾಧ್ಯಕ್ಷ ಎಂ ಜಿಂಬಾ ಅವರ ಮನೆಯ ಬಳಿ ನಡೆದ ಪ್ರತಿಭಟನೆಯಲ್ಲಿ, ಉದ್ರಿಕ್ತರು ನಡೆಸಿದ ಕಲ್ಲು ತೂರಾಟದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಅಲ್ಲದೇ ರಾಂಗ್ಲಿ ರಂಗ್ಲಿಯಾಟ್‍ ಪೊಲೀಸ್‍ ಹೊರ ಠಾಣೆಯ ಮೇಲೂ ದಾಳಿ ನಡೆಸಿ, ಪಿಸ್ತೂಲ್‍ ಮತ್ತು ರೈಫಲ್‍ಗಳನ್ನು ಕಿತ್ತು ಹಾಕಿದ್ದಾರೆ. ಪೊಲೀಸ್‍ ವಾಹನಗಳಿಗೆ ಗುಂಡು ಹಾರಿಸಿ ಸುಟ್ಟಿದ್ದಾರೆ. ತುಂಗ್‍ ಗ್ರಾಮದ ಗ್ರಾಪಂ ಕಟ್ಟಡಕ್ಕೆ ಬೆಂಕಿ ಹಚ್ಚಿರುವುದು ವರದಿಯಾಗಿದೆ.

ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಬಂಗಾಳ ಪ್ರಾಂತ್ಯವನ್ನು ಇಬ್ಬಾಗ ಮಾಡಲು ನಾವು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಿಜೆಎಂ ಕಾರ್ಯಕರ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಘರ್ಷಣೆ ವೇಳೆ ಓರ್ವ ವ್ಯಕ್ತಿ  ಜೂನ್‍ 17ರಂದು ಮೃತಪಟ್ಟಿದ್ದ. ಅಲ್ಲದೇ ಅದೇ ದಿನ ಜಿಜೆಎಂನ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದರು. ಪ್ರತಿಭಟನೆ ಹಿಂಸಾಚಾರಕ್ಕಿಳಿದಿದ್ದು, ಪಶ್ಚಿಮ ಬಂಗಾಳ ಸರಕಾರವು ಸಿಆರ್‍ಪಿಎಫ್‍ನ 10 ಕಂಪೆನಿಗಳಿಗೆ ಬೆಟ್ಟದ ಮೇಲಿನ ಪರಿಸ್ಥಿತಿಯನ್ನು ನಿಭಾಯಿಸುವಂತೆ ತಿಳಿಸಿದೆ. ರಾಜ್ಯದ ಸೂಚನೆ ಮೇರೆಗೆ ಹಿಂಸಾಚಾರವನ್ನು ಹತ್ತಿಕ್ಕಲಾಗಿದೆ. ಆದರೆ ನಾಲ್ಕು ಮಹಿಳಾ ಪೊಲೀಸ್‍ ಪಡೆ ಮತ್ತು ಮೂರು ಸಶಸ್ತ್ರ ಸೀಮಾ ಬಲ್‍ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸುರಾಜಿತ್‍ ಕರ್‍ ಪುರ್ಕಾಯಸ್ಥ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಟ್ಟದಲ್ಲಿ ಕೆಲವು ಉಗ್ರಗಾಮಿಗಳಿಂದ ವಿನಾಶಕಾರಿ ಚಟುವಟಿಕೆಗಳು ನಡೆಯುತ್ತಿದೆ. ಇದನ್ನು ಸರಕಾರ ಸಹಿಸುವುದಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಾರ್ಜಿಲಿಂಗ್ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪರಿಸ್ಥಿತಿ ನಿಭಾಯಿಸಲು ತುರ್ತಾಗಿ ಹೆಚ್ಚುವರಿ ಕೇಂದ್ರೀಯ ಸಶಸ್ತ್ರ ಪೊಲೀಸ್‍ ಪಡೆಯ ಅವಶ್ಯಕತೆಯಿದೆ ಎಂದು ರಾಜ್ಯ ಸರಕಾರ ಕಲ್ಕತ್ತಾ ಹೈಕೋರ್ಟ್‍ಗೆ ತಿಳಿಸಿದೆ. ಈ ಸಂಬಂಧ ಕೇಂದ್ರದ ಸೂಚನೆಗಳನ್ನು ಪಡೆಯುವಂತೆ ಕೇಂದ್ರ ಸರಕಾವನ್ನು ಪ್ರತಿನಿಧಿಸುತ್ತಿರುವ ನ್ಯಾಯಾಲಯವು ಹೆಚ್ಚುವರಿ ಸಾಲಿಸಿಟರ್‍ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.

Comments are closed.

Social Media Auto Publish Powered By : XYZScripts.com