ಮಾನಸಿಕ ಅಸ್ವಸ್ಥೆಗೆ ಹಿಗ್ಗಾಮುಗ್ಗಾ ಥಳಿತ: ಮುರ್ಷಿದಾಬಾದ್‌ನಲ್ಲೊಂದು ದಾರುಣ ಘಟನೆ

ಮುರ್ಷಿದಾಬಾದ್‌: ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದಾಳೆಂಬ ಶಂಕೆಯಿಂದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹಿಗ್ಗಾಮುಗ್ಗಾ ಥಳಿಸಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. ಅಸ್ವಸ್ಥ ಮಹಿಳೆಯನ್ನು ಮಿಥಿಪುರದ ನಿವಾಸಿ ಒಟಿರಾ ಬೀಬಿ (45) ಎಂದು ಗುರುತಿಸಲಾಗಿದೆ. ಈಕೆ ಕೆಲವೊಮ್ಮೆ ರಾತ್ರಿ ಮನೆ ಬಿಟ್ಟು ಹೋಗುತ್ತಿದ್ದು, ಬೆಳಗ್ಗೆ ಮನೆಗೆ ಬರುತ್ತಿದ್ದಳು. ಆದರೆ ಕಳೆದ ಸೋಮವಾರ ಈಕೆ ಮನೆ ಬಿಟ್ಟ ನಂತರ ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. ಮರಳಿ ಮನೆಗೆ ಬರುತ್ತಾಳೆ ಎಂದುಕೊಂಡು ಮನೆಯವರೂ ಆಕೆಯನ್ನು ಹುಡುಕಿರಲಿಲ್ಲ ಎಂದು ಮೂಲಗಳು ಮಾಹಿತಿ ತಿಳಿಸಿವೆ.

ಈಕೆ ಇದ್ದಕ್ಕಿದ್ದಂತೆ ಮುರ್ಷಿದಾಬಾದ್‌ನ ದಿಲೀಪ್‌ ಘೋಷ್‌ ಎಂಬುವವರ ಮನೆಗೆ ನುಗ್ಗಿದ್ದಾಳೆ. ಇದರಿಂದ ಈಕೆ ತನ್ನ ಮಗಳನ್ನು ಅಪಹರಣ ಮಾಡಲು ಬಂದಿದ್ದಾಳೆ ಎಂಬ ಶಂಕೆಯಿಂದ ದಿಲೀಪ್ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸುತ್ತಮುತ್ತಲಿನವರೆಲ್ಲ ಸೇರಿಕೊಂಡು ಆಕೆಯನ್ನು ಗಾಡಿಗೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ, ಕಲ್ಲಿನಿಂದ ಹೊಡೆದಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ವಿಚಾರಣೆ ನಡೆಸಿ ನಂತರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Comments are closed.