ಯಾಕ್ರೀ ಮೋದೀಜಿ ಸುಳ್ಳು ಹೇಳ್ತೀರಿ………..? ಸಿ.ಎಂ ಸಿದ್ದರಾಮಯ್ಯ ಪ್ರಶ್ನೆ

ಬೆಳಗಾವಿ: ಪ್ರಧಾನಿ ಮೋದಿ ಆರು ಕೋಟಿ ಉದ್ಯೋಗ ಸೃಷ್ಠಿಸುವ  ಭರವಸೆ ನೀಡಿದ್ದರು. ಆದರೆ,  ಕೇವಲ ನಾಲ್ಕು ಲಕ್ಷ ಉದ್ಯೋಗ ಸೃಷ್ಠಿಸಿದ್ದಾರೆ. ಮೋದಿ ಅವರೇ ಯಾಕ್ರೀ ಜನರಿಗೆ ಸುಳ್ಳು ಹೇಳ್ತಿರಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  ಬಿಜೆಪಿ ಕೋಮುವಾದಿ ಪಕ್ಷ. ಮುಸಲ್ಮಾನರನ್ನು ಕ್ರಿಶ್ಚಿಯನ್ನರನ್ನು ದೂರವಿಡುವ ಪಕ್ಷ ಬಿಜೆಪಿ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಪ್ರಧಾನಿ ಮೋದಿ ಢೋಂಗಿ ಬಿಡುತ್ತಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಈ ಸಮಾವೇಶ ನಡೆಸಲಾಗುತ್ತಿದ್ದು, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನವನ್ನ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2019ರ ಚುನಾವಣೆಯಲ್ಲಿ ಕೇಂದ್ರದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ. ಕರ್ನಾಟಕದಲ್ಲಿ ನುಡಿದಂತೆ ನಡೆದ ಸರ್ಕಾರವೆಂದರೆ ಅದು ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ. ಇನ್ನು ಇದೇ ವೇಳೆ ಸಾಲ ಮನ್ನಾ ಕುರಿತು ಮಾತನಾಡಿದ ಸಿಎಂ, ಯಡಿಯೂರಪ್ಪನಂತಹ ಎಷ್ಟೇ ಜನ ಬಂದರೂ ಬಗ್ಗುವವನನು ನಾನಲ್ಲ. ಕೇಂದ್ರಕ್ಕೆ ಸಾಲಮನ್ನಾ ಮಾಡುವಂತೆ ಹೇಳಿದರೆ ರಾಜ್ಯ ಬಿಜೆಪಿ ಮುಖಂಡರು ತುಟಿ ಬಿಚ್ಚಲಿಲ್ಲ. ಮೋದಿ ಮುಂದೆ ಮಾತನಾಡದ ನೀವು ಹೇಡಿಗಳು ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ನಮ್ಮ ನಾಲ್ಕು ವರ್ಷದ ಸಾಧನೆ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಸಿದ್ಧ ಎಂದಿರುವ ಸಿದ್ದರಾಮಯ್ಯ, ಆಡಳಿತದಲ್ಲಿದ್ದಾಗ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಭ್ರಷ್ಟಾಚಾರದ ಹಣವನ್ನು ಚೆಕ್‌ ಮೂಲಕ ಪಡೆದಿದ್ದರು ಎಂದು ಕುಟುಕಿದ್ದಾರೆ. ಅಧಿಕಾರಕ್ಕೆ ಬಂದರೆ ಏತ ನೀರಾವರಿ ಯೋಜನೆಯನ್ನು ಜಾರಿ ಮಾಡುವುದಾಗಿ ಯಡಿಯೂರಪ್ಪ ಹೇಳುತ್ತಾರೆ. ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

Comments are closed.