ಮೈಸೂರು : ಚಾಣಕ್ಯ ಫೈನಾನ್ಸ್ ನಲ್ಲಿ ಮೋಸ ಹೋದವರಿಗೆ ಸಿಹಿ ಸುದ್ದಿ..!

ಮೈಸೂರು: ಮೈಸೂರಿನ ಚಾಣಕ್ಯ ಫೈನಾನ್ಸ್ ನ ಠೇವಣಿದಾರರಿಗೆ ಹಣ ಹಿಂತಿರುಗಿಸದ ಹಿನ್ನೆಲೆ. ಚಾಣಕ್ಯ ಕಲ್ಯಾಣ ಮಂಟಪ ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಚಾಣಕ್ಯ ಫೈನಾನ್ಸ್ ಕಾರ್ಪೊರೇಷನ್ ನಲ್ಲಿ ಹಣ ತೊಡಗಿಸಿ ಮೋಸ ಹೋಗಿದ್ದ ಠೇವಣಿದಾರರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಸದರಿ ಫೈನಾನ್ಸ್ ಗೆ ಸಂಬಂಧಿಸಿದ ಆಸ್ತಿ ಹರಾಜಿಗೆ ಬಂದಿದ್ದು ಠೇವಣಿ ಹಣ ವಾಪಸ್ ಬರುವ ಕ್ಷಣ ಎದುರಾಗಿದೆ. ಜೂನ್ ೩೦ ರಂದು ಅಂದರೆ ನಾಳೆ ವಿಶ್ವೇಶ್ವರನಗರದಲ್ಲಿರುವ ಚಾಣಕ್ಯ ಕಲ್ಯಾಣ ಮಂಟಪವನ್ನು ಬಹಿರಂಗ ಹರಾಜು ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ. ಇದರಿಂದ ಠೇವಣಿದಾರರಲ್ಲಿ ಸಂತಸದ ಕ್ಷಣ ಆವರಿಸಿದೆ. ಮೈಸೂರಿನ ಬೆಂಕಿನವಾಬ ರಸ್ತೆಯಲ್ಲಿ ಚಾಣಕ್ಯ ಫೈನಾನ್ಸ್ ಕಾರ್ಪೊರೇಷನ್ ತಲೆ ಎತ್ತಿತ್ತು. ಕಳೆದ ೨೦೦೮ ರ ವೇಳೆಯಲ್ಲಿ ನೂರಾರು ಗ್ರಾಹಕರನ್ನು ತನ್ನತ್ತ ಸೆಳೆದು ಕೋಟ್ಯಾಂತರ ರೂಪಾಯಿಗಳನ್ನು ಠೇವಣಿಯಾಗಿ ಸಂಗ್ರಹಿಸಿತ್ತು. ಕ್ರಮೇಣ ತನ್ನ ಗ್ರಾಹಕರಿಗೆ ಠೇವಣಿ ಹಣವನ್ನು ನಿಗಧಿತ ಸಮಯಕ್ಕೆ ಹಿಂದಿರುಗಿಸುವಲ್ಲಿ ವಿಫಲವಾಯಿತು. ಅಲ್ಲದೆ ಬಹುತೇಕ ಗ್ರಾಹಕರಿಗೆ ಠೇವಣಿ ಹಣ ವಂಚಿಸಿ ಸಂಸ್ಥೆಯ ವಹಿವಾಟನ್ನು ಸ್ಥಗಿತಗೊಳಿಸಿತು. ಆ ವೇಳೆ ಠೇವಣಿದಾರರು ತಮ್ಮ ಹಣಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು. ಬಳಿಕ ಸಂಸ್ಥೆಯ ಮುಖ್ಯಸ್ಥನನ್ನೂ ಸಹ ಬಂಧಿಸಿ ಜೈಲಿಗಟ್ಟಲಾಯಿತು. ಹೀಗಿದ್ದರೂ ಠೇವಣಿದಾರರಿಗೆ ಹಣ ವಾಪಸ್ ಬಂದಿರಲಿಲ್ಲ. ಸುಮಾರು ೯ ವರ್ಷಗಳ ಕಾಲ ನಡೆದ ವಾದ ವಿವಾದದ ನಂತರ ಗ್ರಾಹಕ ವೇದಿಕೆ ಇದೀಗ ಠೇವಣಿದಾರರ ಪರವಾಗಿ ತೀರ್ಪು ಹೊರಡಿಸಿದೆ ಹಾಗೂ ಜಿಲ್ಲಾಡಳಿತ ಸಹ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಠೇವಣಿದಾರರಿಗೆ ಹಿಂದಿರುಗಿಸಲು ಮುಂದಾಗಿದೆ. ಕರ್ನಾಟಕ ಭೂಕಂದಾಯ ಕಾಯ್ದೆ೧೯೬೪ ಕಲಂ ೧೯೦ಸಿ ಹಾಗೂ ಕರ್ನಾಟಕ ಪಬ್ಲಿಕ್ ಮನಿ (recovery of dues)ಕಾಯ್ದೆ ೧೯೭೯ ಕಲಂ೩(೨) ಅನ್ವಯದಂತೆ ನಾಳೆ ಬಹಿರಂಗ ಹರಾಜು ನಡೆಯಲಿದೆ. ನೂರಾರು ಠೇವಣಿದಾರರಿಗೆ ಕೋಟ್ಯಾಂತರ ರೂಪಾಯಿ ಹಣ ಪಂಗನಾಮ ಹಾಕಿದ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳಲು ಮುಂದಾದ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ. ಆದರೆ ಹರಾಜು ಮೂಲಕ ಬಂದ ಹಣ ಠೇವಣಿದಾರರ ಕೈಸೇರಿದಲ್ಲಿ ಮಾತ್ರ ಅವರ ಹೋರಾಟಕ್ಕೆ ಯಶಸ್ಸು ದೊರೆತಂತಾಗಲಿದೆ.

Comments are closed.

Social Media Auto Publish Powered By : XYZScripts.com