ಶಿವಗಾಮಿ ಪಾತ್ರ ಶ್ರೀದೇವಿ ಕೈ ತಪ್ಪಿದ್ದೇಕೆ? ಶ್ರೀದೇವಿ ಬಗ್ಗೆ ರಾಜಮೌಳಿ ಹೇಳಿದ್ದೇನು?

ದೆಹಲಿ: ಬಾಕ್ಸ್‌ ಆಫೀಸ್‌ ಲೂಟಿ ಹೊಡೆದಿದ್ದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರ ಮಾಡಲು ಶ್ರೀದೇವಿ ಒಪ್ಪದಿರುವುದರ ಬಗ್ಗೆ ಸ್ಪಷ್ಟನೆ ನೀಡಿರುವುದು ತಿಳಿದೇ ಇದೆ. ಆದರೆ ಈಗ ಶ್ರೀದೇವಿ ಅವರ ಬಗ್ಗೆ ಬಾಹುಬಲಿ ನಿರ್ದೇಶಕ ರಾಜಮೌಳಿ ಆಡಿರುವ ಮಾತು ಶ್ರೀದೇವಿ ಅವರಿಗೆ ಆಶ್ಚರ್ಯ ಹಾಗೂ ನೋವುಂಟು ಮಾಡಿದೆಯಂತೆ. ಬಾಹುಬಲಿ ಸಿನಿಮಾದ ಎರಡು ಭಾಗಗಳಲ್ಲಿ ನಟಿಸಲು ಶ್ರೀದೇವಿ ಅವರು ಸಾಕಷ್ಟು ಬೇಡಿಕೆ ಇಟ್ಟಿದ್ದರು. ಶಿವಗಾಮಿ ಪಾತ್ರಕ್ಕೆ ಆರು ಕೋಟಿ ಸಂಭಾವನೆ ಕೇಳಿದ್ದರು. ಅಲ್ಲದೆ ತಾವು ಉಳಿದುಕೊಳ್ಳಲು ಫೈವ್‌ ಸ್ಟಾರ್‌ ಹೋಟೆಲ್‌ನ ಮಹಡಿಯನ್ನು ಬಿಟ್ಟುಕೊಡುವಂತೆ ಕೇಳಿದ್ದರು. ನಮ್ಮ ಬಜೆಟ್‌ಗೆ ಅವರು ಸರಿ ಹೊಂದುವುದಿಲ್ಲ ಎನಿಸಿ ನಾವು ರಮ್ಯಾಕೃಷ್ಣ ಅವರನ್ನು ಕೇಳಿದೆವು. ರಮ್ಯಾಕೃಷ್ಣ ಅದ್ಭುತ ಅಭಿನಯದ ಮೂಲಕ ತಾವೇನೆಂಬುದನ್ನು ಸಾಬೀತು ಪಡಿಸಿದ್ದಾರೆ. ಈಗ ಶ್ರೀದೇವಿಯವರನ್ನು ಕೈಬಿಟ್ಟು ರಮ್ಯಾಕೃಷ್ಣ ಅವರನ್ನು ಸೇರಿಸಿಕೊಂಡಿದ್ದು ಒಳ್ಳೆಯ ನಿರ್ಧಾರ ಎನಿಸುತ್ತಿದೆ ಎಂದು ಟಿ.ವಿ ಕಾರ್ಯಕ್ರಮವೊಂದರಲ್ಲಿ ರಾಜಮೌಳಿ ಹೇಳಿದ್ದಾರೆ.

 

ಇದರಿಂದ ಶ್ರೀದೇವಿಯವರು ಆಶ್ಚರ್ಯಚಕಿತರಾಗಿದ್ದು, ನಾನು ಆ ರೀತಿ ಮಾಡಿದ್ದರೆ, ಗಂಟು ಮೂಟೆ ಕಟ್ಟಿಕೊಂಡು ಹೊರಡು ಎಂದು ಜನರೇ ಹೇಳುತ್ತಿದ್ದರು. ರಾಜಮೌಳಿಯಂತಹವರ ಜೊತೆ ಕೆಲಸ ಮಾಡಲು ಎಂತಹವರಿಗಾದರೂ ಸಂತೋಷವೆನಿಸುತ್ತದೆ. ನಿರ್ಮಾಪಕರು ನನ್ನ ಬಗ್ಗೆ ರಾಜಮೌಳಿಯವರಲ್ಲಿ ತಪ್ಪಾಗಿ ಹೇಳಿದ್ದಾರೆ ಎಂದೆನಿಸುತ್ತದೆ. ಆದರೆ ನಾನು ಆ ರೀತಿ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ. ನನ್ನ ಪ್ರಕಾರ ರಾಜಮೌಳಿ ಗೌರವಾನ್ವಿತ ವ್ಯಕ್ತಿ. ಅಂತಹ ವ್ಯಕ್ತಿ ನನ್ನ ಬಗ್ಗೆ ಈ ರೀತಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ನಿರ್ಮಾಪಕರು ನನ್ನ ಬಗ್ಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಶ್ರೀದೇವಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಾಹುಬಲಿ ಸಿನಿಮಾದಲ್ಲಿ ಶ್ರೀದೇವಿ, ಶಿವಗಾಮಿ ಪಾತ್ರವನ್ನು ನಿರಾಕರಿಸಿದ್ದರಿಂದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿರುತ್ತದೆ. ಅಲ್ಲದೆ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಾಗಿರುತ್ತದೆ. ಬಾಹುಬಲಿ ಭಾಗ-2 ರಲ್ಲಿ ಶ್ರೀದೇವಿ ನಟಿಸಿದ್ದರೆ, ಪ್ರಭಾಸ್‌ ಅವರಿಗಿಂತ ಶ್ರೀದೇವಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿತ್ತು ಎಂದು ರಾಮ್ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿದ್ದರು.

 

 

Comments are closed.