ಪಾಕಿಸ್ತಾನ : ಆಯಿಲ್ ಟ್ಯಾಂಕರ್ ಸ್ಫೋಟಗೊಂಡು 123 ಜನರ ಸಾವು, ಹಲವರ ಸ್ಥಿತಿ ಗಂಭೀರ..

ಪಂಜಾಬ್ : ಆಯಿಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ 123 ಜನ ಸಾವಿಗೀಡಾದ ಘಟನೆ ಪಾಕಿಸ್ತಾನದ ಪಂಜಾಬ್ ನಲ್ಲಿ ನಡೆದಿದೆ. ಅಲ್ಲದೇ 100 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂಜಾಬ್ ನ ಬಹಾವಲ್ಪುರ್ ನಗರದ ಹೊರವಲಯದಲ್ಲಿರುವ ಅಹ್ಮದ್ ಪುರ್ ಶರ್ಕಿಯಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಆಯಿಲ್ ಟ್ಯಾಂಕರ್ ಹೈವೇಯಿಂದ ಪಕ್ಕಕ್ಕೆ ಉರುಳಿ ಬಿದ್ದಿದ್ದು,  ಅದರಿಂದ ಸೋರಿ ಹೋಗುತ್ತಿದ್ದ ಎಣ್ಣೆಯನ್ನು ತುಂಬಿಕೊಳ್ಳಲು ವಾಹನದ ಸುತ್ತ ಜನ ಸೇರಿದ್ದರು. ಆಗಲೇ ಸ್ಫೋಟ ಸಂಭವಿಸಿದ್ದರಿಂದ 123 ಜನ ಸಾವನ್ನಪ್ಪಿದ್ದಾರೆ. ಹಲವಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನೆಲ್ಲ ಬಹಾವಲ್ಪುರ್ ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸ್ಥಳದಲ್ಲೇ ಇದ್ದ ಕಾರು, ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Comments are closed.