ಮೈಸೂರಿನಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ..? ಮಗಳನ್ನೇ ಕೊಂದು ಹಾಕಿದ್ನಾ ತಂದೆ..?

ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಪಾರ್ವತಿಪುರದಲ್ಲಿ ಮರ್ಯಾದಾ ಹತ್ಯೆಯೊಂದು ನಡೆದಿದೆ ಎನ್ನಲಾಗುತ್ತಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತನಗಿಷ್ಟವಿಲ್ಲದ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ತಾನೇ ಜನ್ಮಕೊಟ್ಟ ಮಗಳನ್ನೇ ತಂದೆಯೊಬ್ಬ ಕೊಂದು ಹಾಕಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ. ತಂದೆಯಿಂದಲೇ ಹತ್ಯೆಯಾಗಿದ್ದಾಳೆ ಎನ್ನಲಾಗುತ್ತಿರುವ ಯುವತಿಯ ಹೆಸರು ಶೋಭಾ ಎಂದಾಗಿದ್ದು, ಹತ್ಯೆಯ ಆರೋಪಿ ಗುರುಸಿದ್ದೇಗೌಡ.  ಶೋಭಾಳನ್ನ ಪ್ರೀತಿಸುತ್ತಿದ್ದ ಯುವಕ  ಕೃಷ್ಣ ಎಚ್.ಡಿ. ಕೋಟೆ ತಾಲೂಕು ಸರಗೂರು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ತಾನು ಮತ್ತು ಶೋಭಾ ಪರಸ್ಪರ ಒಪ್ಪಿ ಮದುವೆಯಾಗಲು ಓಡಿಹೋಗಲು ಯತ್ನಿಸಿದಾಗ ಅಡ್ಡಗಟ್ಟಿದ್ದ ಶೋಭಾ ತಂದೆ ಗುರುಸಿದ್ದೇಗೌಡ. ತಮ್ಮ ಮೇಲೆ ಐವರು ದಾಂಡಿಗರಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾನೆ. ಆದರೆ ಹಲ್ಲೆಯಿಂದ ತಪ್ಪಿಸಿಕೊಳ್ಳಲು ತಾನು ಸ್ಥಳದಿಂದ ಓಡಿ ಹೋಗಿದ್ದು,  ಅದೇ ವೇಳೆ ಶೋಭಾ ಮೇಲೂ ಮಾರಣಾಂತಿಕ ಹಲ್ಲೆ ನಡೆದಿತ್ತು. ಅದೇ ಸ್ಥಳದಲ್ಲಿ ಶೋಭಾ ಸಾವನ್ನಪ್ಪಿರಬಹುದು ಎಂದು ಕೃಷ್ಣ ಶಂಕೆ ವ್ಯಕ್ತಪಡಿಸಿದ್ದಾನೆ.
ಘಟನೆ ನಡೆದು 3 ತಿಂಗಳುಗಳು ಕಳೆದರೂ ಇನ್ನೂ ಸಂಪರ್ಕಕ್ಕೆ ಶೋಭಾ ಸಿಕ್ಕುತ್ತಿಲ್ಲ, ಅವಳಿಗಾಗಿ ಹುಡುಕಾಡಿದ್ದೇನೆ ಎಲ್ಲಿಯೂ ಅವಳ ಸುಳಿವಿಲ್ಲ ಎಂದು ಕೃಷ್ಣ ಆರೋಪಿಸಿದ್ದಾನೆ.  ಊರಿನಲ್ಲಿಯೂ ಕೂಡ ಶೋಭಾಳನ್ನ ಗುರುಸಿದ್ದೇಗೌಡನೇ ಕೊಂದು ಸುಟ್ಟು ಹಾಕಿದ್ದಾನೆ ಎಂದು ವದಂತಿ ಹಬ್ಬಿದೆ ಎನ್ನಲಾಗುತ್ತಿದೆ. 3 ತಿಂಗಳ ಹಿಂದೆಯೇ ಸರಗೂರು ಠಾಣೆ ಪೊಲೀಸರಿಗೆ ದೂರು ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.⁠⁠⁠⁠

Comments are closed.

Social Media Auto Publish Powered By : XYZScripts.com