Mysore : ತೂಬಿನೊಳಗೆ ಅವಿತಿದ್ದ ಚಿರತೆ: ಕೊನೆಗೂ ಸೆರೆಯಾಯ್ತು ಬೋನಿನಲ್ಲಿ…

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ಕಬಿನಿ ಬಲದಂಡೆ ನಾಲೆಯ ತೂಬಿನೊಳಗೆ ಇಂದು ಬೆಳಗ್ಗೆಯಿಂದ ಅವಿತು ಕುಳಿತಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಚಿರತೆ ಹಿಡಿಯಲು ಅರಣ್ಯ ಇಲಾಖೆ ಸತತ ಕಾರ್ಯಾಚರಣೆ ನಡೆಸಿತ್ತು. ಆದರೆ ಚಿರತೆ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಚಿರತೆಯನ್ನು ಬಂಧಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಅವಿತುಕೊಂಡಿದ್ದ ತೂಬಿನ ದ್ವಾರದ ಬಳಿ ಬೋನು ಇರಿಸಿ, ಮತ್ತೊಂದು ಬದಿಯಿಂದ ಪಟಾಕಿಗಳನ್ನು ಸಿಡಿಸಿದರು. ಇದಕ್ಕೂ ಬಗ್ಗದ ಚಿರತೆ ತೂಬಿನಿಂದ ಹೊರಬರದೇ ಸತಾಯಿಸುತ್ತಿತ್ತು. ಇಂದು ಸಂಜೆ ಸುಮಾರು 6;15ಕ್ಕೆ ತೂಬಿನಿಂದ ಹೊರಬಂದ ಚಿರತೆ ಸೀದಾ ಬೋನಿನೊಳಗೆ ಬಂಧಿಯಾಗಿದೆ.

ಚಿರತೆ ಬೋನಿನಲ್ಲಿ ಬಂಧಿಯಾಗುತ್ತಿದ್ದಂತೆ ಅದನ್ನು ನೋಡಲು ಜನರ ದಂಡೇ ನೆರೆದಿತ್ತು. ಚಿರತೆಯನ್ನು ನೋಡಲು ಮುಗಿ ಬೀಳುತ್ತಿದ್ದ ಜನರನ್ನು ಕಂಡು ಕೆಲ ಕಾಲ ಘರ್ಜಿಸಿ, ನಂತರ ಬೋನಿನೊಳಗೆ ತಣ್ಣಗೆ ಉಳಿಯಿತು. ಚಿರತೆಯನ್ನು ಬಂಧಿಸಿ ದಟ್ಟರಣ್ಯಕ್ಕೆ ಬಿಡಲು ಕೊಂಡೊಯ್ಯುತ್ತಿದ್ದಂತೆ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.