ಶಾಂತಿ ಕದಡಲು ಕೊಲೆ ಮಾಡಿದ್ರಂತೆ: ಹೆಚ್ಚಿನ ತನಿಖೆಗೆ ವಿಶೇಷ ದಳ ರೆಡಿ …

ಮಂಗಳೂರು: ಜೂನ್ 21ರಂದು ನಡೆದ ಎಸ್‍ಡಿಪಿಐ ಕಾರ್ಯಕರ್ತ ಅಶ್ರಫ್‍ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿಗಳು ಈ ಹಿಂದೆಯೂ ಶಾಂತಿ ಕದಡಲು ಕಾರಣರಾಗಿದ್ದರು ಎಂಬುದು ತಿಳಿದು ಬಂದಿದೆ.

ಆರೋಪಿಗಳು ಬಂಟ್ವಾಳ ಗ್ರಾಮದ ಸುತ್ತಮುತ್ತಲ ಪ್ರದೇಶದವರೇ ಆಗಿದ್ದಾರೆ. ಪುದು ಗ್ರಾಮದ ಕುಮ್ಡೇಲ್‍ನ ಪವನ್‍ಕುಮಾರ್‍ (24), ರಂಜಿತ್‍ (28). ತುಂಬೆ ಗ್ರಾಮದ ಸಂತೋಷ್‍ (23), ಶಿವಪ್ರಸಾದ್‍ (24) ಮತ್ತು ತೆಂಕಬೆಳ್ಳೂರಿನ ಅಭಿನ್‍ ರೈ (23) ಐದು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಪಶ್ಚಿಮ ವಲಯ ಐಜಿಪಿ ಹರಿಶೇಖರನ್‍ ಮಾತನಾಡಿ, ಬಂಧಿತ ಐದು ಆರೋಪಿಗಳು ಮೊದಲೇ ರೂಪಿಸಿದ್ದ ಸಂಚಿನಲ್ಲಿ ಭಾಗಿಯಾಗಿದ್ದರು. ಭರತ್‍ ಕುಮ್ಡೇಲ್‍ ಮತ್ತು ದಿವ್ಯರಾಜ್‍ ಶೆಟ್ಟಿ ಅಶ್ರಫ್‍ ಹತ್ಯೆಗೆ ಸಂಚು ರೂಪಿಸಿ, ಈ ಐವರನ್ನು ಬಳಸಿಕೊಂಡಿದ್ದರು ಎಂಬ ಮಾಹಿತಿ ನೀಡಿದ್ದಾರೆ. ಈ ಹಿಂದೆ ತುಂಬೆಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲೂ ಈ ತಂಡದ ಪಾತ್ರವಿಎ ಎಂದು ತಿಳಿದು ಬಂದಿದೆ. ಸಮಾಜದಲ್ಲಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಅಶ್ರಫ್‍ ಹತ್ಯೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಶಾಂತಿ ಸುವ್ಯವಸ್ಥೆ ಕದಡಿರುವ ಆರೋಪಿಗಳ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಬಂಟ್ವಾಳದ 20 ಜನರ ಮೇಲೆ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಲು ವಿಶೇಷ ತನಿಖಾ ತಂಡ ಮುಂದಾಗಿದೆ. ಘಟನೆ ಸಂಬಂಧ ಎಲ್ಲ ಮಾಹಿತಿಯನ್ನು ಎಸ್‍ಪಿ ಅವರು ಐಜಿ ಅವರಿಗೆ ಖುದ್ದಾಗಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

Comments are closed.