ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್‌, ಡೀಸೆಲ್‌..! : ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ..!

ಬೆಂಗಳೂರು: ಆನ್‌ಲೈನ್‌ನಲ್ಲಿ ಹಾಲು, ತರಕಾರಿ, ಬಟ್ಟೆ-ಬರೆ, ಬೇಳೆ ಕಾಳು ಹೀಗೆ ಏನೆಲ್ಲಾ ಖರೀದಿಸಿ ಮನೆ ಬಾಗಿಲಿಗೆ ತರಿಸಿಕೊಳ್ಳುವುದೀಗ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಆದರೆ, ಪೆಟ್ರೋಲ್‌, ಡೀಸೆಲ್‌ ಕೂಡ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಬೇಕಾದಲ್ಲಿ ಪಡೆದುಕೊಳ್ಳಬಹುದು ಎಂಬುದನ್ನ ಕೇಳಿದ್ದೀರಾ..? ಎಸ್‌. ಅದೂ ಈಗ ನಮ್ಮ ಬೆಂಗಳೂರಿನಲ್ಲಿ ಸಾಧ್ಯವಿದೆ. ಕಳೆದ ವಾರ ಅಂದರೆ ಜೂನ್‌ 15ರಂದು ‘ಮೈಪೆಟ್ರೋಲ್‌ಪಂಪ್‌’ ಎಂಬ ಹೆಸರಿನ ಹೊಸ ಕಂಪನಿ ಆರಂಭವಾಗಿದ್ದು, ಇದು ಆನ್‌ಲೈನ್‌ ಮೂಲಕ ಆರ್ಡರ್‌ ಪಡೆದುಕೊಂಡು ಪೆಟ್ರೋಲ್‌, ಡೀಸೆಲ್‌ ಖರೀದಿದಾರ ಬೇಡಿಕೆ ಇಟ್ಟ ಸ್ಥಳಕ್ಕೆ ಒದಗಿಸುವ ಕೆಲಸ ಆರಂಭಿಸಿದೆ. ಸಧ್ಯಕ್ಕೆ ಈ ಕಂಪನಿಯ ಬಳಿ ಕೇವಲ ಮೂರು ವಿತರಣಾ ವಾಹನಗಳಿದ್ದು, ಒಂದೊಂದು ವಾಹನದಲ್ಲಿ 950 ಲೀಟರ್‌ ಪೆಟ್ರೋಲಿಯಂ ಹಿಡಿಸಬಹುದು. ಆರಂಭವಾದ ಒಂದೇ ವಾರದಲ್ಲಿ ಇದುವರೆಗೆ 5 ಸಾವಿರಕ್ಕೂ ಹೆಚ್ಚು ಲೀಟರ್‌ ಪೆಟ್ರೋಲಿಯಂ ಮಾರಾಟ ಮಾಡಿದೆ ಈ ಹೊಸ ಕಂಪನಿ. ಪೆಟ್ರೋಲ್‌ ಮತ್ತು ಡೀಸೆಲ್‌ನ ಆವತ್ತಿನ ದರ ಮತ್ತು ಸ್ಥಿರ ವಿತರಣಾ ಶುಲ್ಕವನ್ನ ಆನ್‌ಲೈನ್‌ ಮೂಲಕವೇ ಪಡೆಯಲಾಗುತ್ತದೆ.
ಅಂದ್ಹಾಗೆ  Mypetrolpump ಕಂಪನಿಯ ನಿರ್ಮಾತೃ ಕೇವಲ 32 ವರ್ಷ ವಯಸ್ಸಿನ ಆಶಿಶ್‌ ಕುಮಾರ್‌ ಗುಪ್ತ ತಮ್ಮ ಕಂಪನಿಯ ಬಗ್ಗೆ ಮಾತನಾಡುತ್ತಾ,  ತಾವು ಪೆಟ್ರೋಲಿಯಂ ಮಿನಿಸ್ಟರ್‌ ಜೊತೆ ಕಳೆದ ಸೆಪ್ಟೆಂಬರ್‌ನಿಂದಲೂ ಸಂಪರ್ಕದಲ್ಲಿದ್ದು, ಅವರ ಒಪ್ಪಿಗೆಯ ಮೇರೆಗೆ ಕಂಪನಿಯನ್ನ ಪ್ರಾರಂಭಿಸಿದ್ದೇವೆ, ಸಚಿವ ದರ್ಮೇಂದ್ರ ಪ್ರಧಾನ್‌ ಕೂಡ ತಮ್ಮ ಪೆಟ್ರೋಲಿಯಂ ಮಾರಾಟದ ಹೊಸ ಮಾರ್ಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. ಪೆಟ್ರೋಲಿಯಂ ಸಾಗಾಟ ಮತ್ತು ವಿತರಣೆ ಸುಲಭದ ಕೆಲಸವಲ್ಲ, ಇದಕ್ಕಾಗಿ ಬೇಕಾದ ಎಲ್ಲ ಸುರಕ್ಷತೆಯನ್ನೂ ನಾವು ವಹಿಸಿದ್ದೇವೆ. ಮತ್ತು ಸರ್ಕಾರದ ಎಲ್ಲ ಅವಶ್ಯಕ ಅನುಮತಿಯನ್ನೂ ಪಡೆದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Comments are closed.