ಡಾಕ್ಟರ್ ಬಳಿ ಹೋಗುವಾಗ ಹುಷಾರಾಗಿರಿ : ಚಿಕಿತ್ಸೆ ನೀಡುವ ವೈದ್ಯರ ಬಳಿ ಲೈಸನ್ಸ್ ಇಲ್ಲದಿರಬಹುದು..

ಜೂನ್ 30ರ ನಂತರ ನೀವು ಯಾವುದೇ ವೈದ್ಯರ ಬಳಿ ಚಿಕಿತ್ಸೆಗೆ ಹೋದರೂ ಸ್ವಲ್ಪ ಹುಷಾರಾಗಿರಬೇಕು. ಯಾಕಂದ್ರೆ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ಪರವಾನಗಿಯೇ ಇಲ್ಲದಿರಬಹುದು.


ಪ್ರತೀ 5 ವರ್ಷಗಳಿಗೊಮ್ಮೆ ಕರ್ನಾಟಕ ರಾಜ್ಯದಲ್ಲಿ ವೃತ್ತಿ ನಡೆಸುತ್ತಿರುವ ವೈದ್ಯರೆಲ್ಲಾ ಪರವಾನಗಿಯನ್ನು ನವೀಕರಣಗೊಳಿಸಬೇಕು. ಆದ್ರೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಂಕಿ ಅಂಶದ ಪ್ರಕಾರ ರಾಜ್ಯದ ಸುಮಾರು 19000 ವೈದ್ಯರು ಇನ್ನೂ ತಮ್ಮ ಪರವಾನಗಿಯನ್ನು ನವೀಕೃತಗೊಳಿಸಿಯೇ ಇಲ್ಲ. 2011ರಲ್ಲಿ ಇವರೆಲ್ಲಾ ಪರವಾನಗಿ ಪಡೆದಿದ್ದರು. ಈಗ 5 ವರ್ಷಗಳ ತರುವಾಯ ಕಡ್ಡಾಯವಾಗಿ ನವೀಕರಣ ಮಾಡಿಸಬೇಕಾಗಿದೆ.
2011ರಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 93,600 ವೈದ್ಯರು ಪ್ರಾಕ್ಟೀಸ್ ಮಾಡಲು ಪರವಾನಗಿ ಪಡೆದಿದ್ದರು. ಅವರಲ್ಲಿ 54,000 ಜನ ಕರ್ನಾಟಕದಲ್ಲೇ ಪ್ರಾಕ್ಟೀಸ್ ಮಾಡ್ತಿದ್ದಾರೆ. ಇವರೆಲ್ಲರೂ 2016ರ ಡಿಸೆಂಬರ್ 31ರೊಳಗೆ ತಮ್ಮ ವೈದ್ಯಕೀಯ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳಬೇಕಿತ್ತು. ಆಗ ಸಾಧ್ಯವಾಗದವ್ರು 2017 ಜೂನ್ 30ರೊಳಗೆ ದಂಡಸಹಿತವಾಗಿ ನವೀಕರಣ ಮಾಡಿಕೊಳ್ಳಲು ಅವಕಾಶ ಇದೆ. ಆದ್ರೆ ಇಲ್ಲಿವರಗೆ 19ಸಾವಿರ ವೈದ್ಯರು ಇನ್ನೂ ತಮ್ಮ ಲೈಸೆನ್ಸ್ ರಿನೀವಲ್ ಮಾಡಿಕೊಂಡೇ ಇಲ್ಲ.


ಒಂದು ವೇಳೆ ಜೂನ್ 30ರೊಳಗೆ ವೈದ್ಯರು ತಮ್ಮ ಪರವಾನಗಿ ನವೀಕರಿಸದೇ ಇದ್ರೆ ಅವರ ಹೆಸರುಗಳನ್ನು ಕರ್ನಾಟಕ ವೈದ್ಯಕೀಯ ಪರಿಷತ್ತು ಮತ್ತು ಭಾರತೀಯ ವೈದ್ಯಕೀಯ ಸಂಘದ ಪಟ್ಟಿಯಿಂದ ಕೈಬಿಡಲಾಗುತ್ತೆ. ಅದರರ್ಥ ಅವರೆಲ್ಲಾ ಅಧಿಕೃತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ. ಒಂದು ವೇಳೆ ಅವರು ಚಿಕಿತ್ಸೆ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕಿಕೊಂಡರೆ ಆಗ ವೈದ್ಯಕೀಯ ಪರಿಷತ್ತು ಅವರಿಗೆ ಯಾವುದೇ ಬೆಂಬಲ ನೀಡೋದಿಲ್ಲ. ಈ ಎಲ್ಲಾ ನಿಯಮಗಳು ಗೊತ್ತಿದ್ರೂ 19 ಸಾವಿರ ಜನ ವೈದ್ಯರು ಪರವಾನಗಿ ನವೀಕರಣ ಮಾಡಿಸದೇ ಇರೋದು ಅಚ್ಚರಿ ಮೂಡಿಸಿದೆ. ಜೂನ್ 30ರೊಳಗೆ ಇವರೆಲ್ಲಾ ಎಚ್ಚೆತ್ತುಕೊಳ್ತಾರಾ ಅಥವಾ ಹೊಸ ಪರವಾನಗಿ ಇಲ್ಲದೆಯೇ ತಮ್ಮ ಪ್ರಾಕ್ಟೀಸ್ ಮುಂದುವರೆಸಿ ಸಮಸ್ಯೆಗಳನ್ನು ತಂದುಕೊಳ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

Comments are closed.

Social Media Auto Publish Powered By : XYZScripts.com