ಅಶ್ರಫ್ ಕಲಾಯಿ ಬರ್ಬರ ಹತ್ಯೆ: ಬಂಟ್ವಾಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಪಕ್ಷದ ಸಂಸ್ಥಾಪನಾ ದಿನದ ಪ್ರಯುಕ್ತ ನಡೆಸಲಾಗುತ್ತಿದ್ದ ಕಾರ್ಯಕ್ರಮದಲ್ಲಿ ಅಶ್ರಫ್‍ ಭಾಗವಹಿಸಿದ್ದ. ದಿನನತ್ಯದಂತೆ ಆಟೋ ಓಡಿಸಲು ಹೋದಾಗ ಬೀಡಿ ಕಾಂಟ್ರ್ಯಾಕ್ಟರ್‍ ಶಿವಪ್ಪ ಎಂಬುವರನ್ನು ಕಲಾಯಿಗೆ ಕರೆದೊಯ್ದಿದ್ದರು. ಈ ವೇಳೆ ಏಳು ಜನ ಮುಸುಕುಧಾರಿಗಳು ಅಶ್ರಫ್‍ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಪಕ್ಕದ ಮನೆಯೊಳಗೆ ಅಶ್ರಫ್‍ ನುಗ್ಗಿದ್ದಾನೆ. ಮನೆಯಲ್ಲಿದ್ದ ಯುವತಿ ಅಶ್ರಫ್‍ನನ್ನು ಬೆನ್ನಟ್ಟಿ ಬಂದ ದುಷ್ಕರ್ಮಿಗಳನ್ನು ನೋಡಿ ಕಿರುಚಿದ್ದಾಳೆ. ಈ ವೇಳೆ ಯುವತಿಯನ್ನು ಒಂದು ಕೋಣೆಯಲ್ಲಿ ಬಂಧಿಸಿ, ಅಶ್ರಫ್‍ನನ್ನು ಕೊಲೆಗೈದು ಮಿಂಚಿನಂತೆ ಮಾಯವಾಗಿದ್ದಾರೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಟ್ವಾಳ, ಕಲ್ಲಡ್ಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕಲಾಯಿ, ಕೈಕಂಬ, ಬಿ.ಸಿ.ರೋಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಘೋಷಿತ ಬಂದ್‍ಗೆ ಕರೆ ನೀಡಲಾಗಿದೆ.

ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್‍ ಪಡೆಗಳನ್ನು ನಿಯೋಜಿಸಲಾಗಿದೆ. ಬೆಂಜನಪದವು, ಕೈಕಂಬ, ಕಲ್ಲಡ್ಕ, ಬಿ.ಸಿ. ರೋಡ್‍ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ತನಿಖೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಬೆಂಜನಪದವಿನಲ್ಲಿ ಮೊಕ್ಕಾಂ ಹೂಡಿ ಬಂದೋಬಸ್ತ್ ನ ನೇತೃತ್ವ ವಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕಲ್ಲಡ್ಕದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ನಡೆದಿತ್ತು. ಇದಕ್ಕೂ ಮೊದಲು ಓರ್ವ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿತ್ತು. ಇಂದಿನ ಘಟನೆ ಮತ್ತಷ್ಟು ಕೋಮು ಗಲಭೆಗೆ ಕಾರಣವಾಗಿದೆ. ಬಂಟ್ವಾಳ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Comments are closed.

Social Media Auto Publish Powered By : XYZScripts.com