ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ವಿದಾಯ..!

ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಕುಂಬ್ಳೆಯವರು ಈ ನಿರ್ಧಾರ ಕೈಗೊಂಡಿದ್ದಾರೆ. ಜೂನ್ 23 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದ ಜೊತೆ ತೆರಳದಿರಲು ನಿರ್ಧರಿಸಿದ್ದಾರೆ. ವೆಸ್ಟ್ ಇಂಡೀಸ್ ನೊಂದಿಗೆ ಭಾರತ 5 ಏಕದಿನ ಹಾಗೂ 1 ಟಿ-20 ಪಂದ್ಯವನ್ನು ಆಡಲಿದೆ. ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರುಗಳಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ರೊಂದಿಗೆ ಮಾತನಾಡಿದ ಕೊಹ್ಲಿ, ಕುಂಬ್ಳೆ ಹಾಗೂ ತಮ್ಮ ಸಂಬಂಧ ಸೌಹಾರ್ದಯುತವಾಗಿ ಉಳಿದಿಲ್ಲವೆಂದು ತಿಳಿಸಿದ್ಧಾರೆ.

ಇಡೀ ಚಾಂಪಿಯನ್ಸ್ ಟ್ರೋಫಿ ಟೂರ್ನಿಯುದ್ದಕ್ಕೂ ನಾಯಕ ಕೊಹ್ಲಿ ಹಾಗೂ ಮುಖ್ಯ ಕೋಚ್ ಕುಂಬ್ಳೆ ನಡುವೆ ಪಂದ್ಯದ ಕುರಿತು ಯಾವುದೇ ಮಾತುಕತೆ, ಚರ್ಚೆಯಾದಂತೆ ಕಂಡುಬರಲಿಲ್ಲ. ಐಸಿಸಿ ಕ್ರಿಕೆಟ್ ಕಮೀಟಿಯ ಸದಸ್ಯರೂ ಆಗಿರುವ ಕುಂಬ್ಳೆ, ಬಿಸಿಸಿಐ ಸಿಇಓ ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಕುಂಬ್ಳೆ ಅವಧಿಯಲ್ಲಿ ಭಾರತ ತಾನು ಆಡಿದ 17 ಟೆಸ್ಟ್ ಗಳಲ್ಲಿ  12 ರಲ್ಲಿ ಜಯಗಳಿಸಿದ್ದು ಕೇವಲ 1 ಸೋಲನ್ನು ಅನುಭವಿಸಿತ್ತು. ಮುಂದಿನ ಕೋಚ್ ಆಯ್ಕೆ ಮಾಡುವ ಕೆಲಸವನ್ನು ಬಿಸಿಸಿಐ ಸೌರವ್, ಸಚಿನ್ ಹಾಗೂ ಲಕ್ಷ್ಮಣ್ ಅವರಿಗೆ ವಹಿಸಿದೆ.

Comments are closed.

Social Media Auto Publish Powered By : XYZScripts.com