ಸಖೀಗೀತ-15 : ಭಾವ ಕೋಶವ ಬೆಚ್ಚಗೆ ಕಾಪಿಟ್ಟ ಮಳೆ, ನಿಲ್ಲದಿರಲಿ ಮಳೆ …

ಧೋ..ಧೋ.. ಎಂದು ಮಳೆ ಹೊಯ್ಯುವಾಗಲೆಲ್ಲ ಇದು ಯಾರದೋ ಹತ್ತಿಕ್ಕಿದ ಉನ್ಮಾದವಿರಬೇಕು ಎನಿಸುತ್ತದೆ. ಗುಡುಗು ಸಿಡಿಲಿನ ಚಂಡೆಮದ್ದಳೆಗೆ ಸರ್ವಾಂಗವೂ ಜಾಗೃತವಾಗಿ, ಮಿಂಚಿನ ಬಳ್ಳಿಗಳು ಛಕ್ಕೆಂದು ಎದೆಯೊಳಗೇ ಹೊಕ್ಕುಹೊರ ಬಂದಂತಾಗಿ ಒಂಥರಾ ಹಿತವಾದ ಅಘಾತ. ಮಣ್ಣಗಂಧದ ನವಿರು ಮೂಗಿಗಡರಿ ಸ್ಮøತಿಗಳ ಸುರುಳಿ ಬಿಚ್ಚುತ್ತದೆ. ಮೈಯೆಲ ಝುಂ ಗುಟ್ಟುವಂತೆ ಸುಳಿವ ಕುಳಿರ್ಗಾಳಿ ಚರ್ಮದೊಳಗೂ ಇಳಿದಂತಾಗಿ ಜೀವ ತಂಪಾಗುತ್ತದೆ. ನಿಧನಿಧಾನಕ್ಕೆ ಮಂದ್ರಲಯದ ಆಲಾಪದಂತೆ ಆರಂಭವಾದ ಮಳೆ ತೀವ್ರಗೊಳ್ಳುತ್ತ ಕಾಲಭೈರವನ ನರ್ತನದಂತೆ ಹುಚ್ಚೆದ್ದು ಕುಣಿಯಲಾರಂಭಿಸುತ್ತದೆ.

 

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತವನಧಾತ್ರಿ.

ಮಲೆನಾಡಿನ ಮಳೆಗಾಲದ ಲಯಭೀಷಣ ರೌದ್ರನರ್ತನವನ್ನು ಕುವೆಂಪು ಕಣ್ಣಿಗೆ ಕಟ್ಟುವ ಪರಿಯಿದು. ಈ ಸಾಲುಗಳು ಮನಸ್ಸನ್ನು ಬಾಲ್ಯದ ಕಗ್ಗಾಡೊಳಗೆ ಕರೆದೊಯ್ಯುತ್ತವೆ.

ಮಲೆನಾಡಿನ ಒಂಟಿಮನೆಯ ಕಿಟಕಿಯಿಂದ ಕಾಣುವ ಮಳೆಗಾಲದ ಸುಂದರ ಜಲವರ್ಣದಂಥ ದೃಶ್ಯ ಜಗತ್ತು. ಸುತ್ತಲೂ ಕವುಚಿಕೊಂಡ ಕಾಡು. ದೂರದಲ್ಲಿ ಅಂಕುಡೊಂಕಾದ ಗೆರೆಗಳಂತೆ ತೋರುವ ಬೆಟ್ಟಸಾಲುಗಳು. ಮಧ್ಯೆ ಕಣಿವೆಯಲ್ಲಿ ಗದ್ದೆ ತೋಟಗಳು ಅವುಗಳ ತಲೆಯಲ್ಲಿ ನಾಡಹಂಚಿನ ಮನೆ. ಮಳೆಯಿಂದ ಕೆಸರುಗದ್ದೆಯಂತಾದ ಕೊರಕಲು ದಾರಿ… ಪಾಚಿಗಟ್ಟಿದ ಪಾಗಾರ. ಬೇಸಿಗೆಯಲ್ಲಿ ದನ ಮೇಯ್ದುಕೊಂಡಿದ್ದ, ಬೆಳ್ಳಕ್ಕಿಗಳು ಓಡಾಡಿಕೊಂಡಿದ್ದ ಖಾಲಿ ಗದ್ದೆ ಬಯಲಿಗೆ ಮಳೆಗಾಲ ಬಂತೆಂದರೆ ಜೀವಕಳೆ. ಕೆಸರು ಗದ್ದೆಗಳಲ್ಲಿ ಹೂಟಿ ನಾಟಿಗಳ ಕೋಲಾಹಲ. ಬಿಳಿ ಎತ್ತುಗಳ ಹಿಂದೆ ಕರಿಗಂಬಳಿ ಹೊದ್ದು ಉಳುಮೆ ಮಾಡುವವರ ಉದಯರಾಗ. ನಾಟಿಮಾಡುವ ಹೆಂಗಸರ ಸಾಲು ಸಾಲು ಕಂಬಳಿ ಕೊಪ್ಪೆಗಳು. ಏಡಿ ಹಿಡಿಯಲು ಪೈಪೋಟಿಗಿಳಿದ ಅವರ ಮಕ್ಕಳ ಕೇಕೆ.

ಯಾವಾಗ ನಭ ಕಪ್ಪಡರಿ ಮಳೆ ಹನಿಯತೊಡಗುವದೋ ಆಗ ದೃಶ್ಯ ಜಗತ್ತಿನ ಬಣ್ಣ ಕದಡುವದು. ಜಲಬಿಂದುಗಳು ದಪ್ಪವಾಗುತ್ತ, ಬಿರುಸಾಗುತ್ತ ಕೊನೆಗೆ ಮಳೆಯೊಂದೇ ಸತ್ಯವಾಗಿ ಎಲ್ಲ ದೃಶ್ಯಗಳು ಅಳಿಸಿ ಕಲಸಿ ಹೋಗುತ್ತವೆ. ಹೊರಜಗತ್ತಿನ ಕೊಂಡಿ ಕಳಚಿಬೀಳುತ್ತದೆ. ಯಾರೂ ಕಾಣರು ಏನೂ ಕೇಳದು. ಕಾಡನಡುವಿನ ಪುಟ್ಟ ಮನೆ ದ್ವೀಪವಾಗಿ ಕಿಟಕಿಯಲ್ಲಿ ಕುಳಿತ ನಾನೂ ಮಳೆಯಲ್ಲಿ ಕರಗಿ ಇಲ್ಲವಾಗುವಾಗ ಧ್ಯಾನದ ಏಕತಾರಿಯೊಂದು ಸುಮ್ಮನೇ ಮೀಟಿದಂತಾಗುವುದು.
ಇವೆಲ್ಲ ಚಿತ್ತದ ಯಾವುದೋ ನಿಗೂಢ ಮೂಲೆಗಳ ಮಾತಾಯಿತು. ಮಳೆಯಲ್ಲಿ ಚಿತ್ರ, ಕಾವ್ಯ, ಸಂಗೀತ, ನರ್ತನ, ಧ್ಯಾನ, ಉನ್ಮಾದ… ಹೀಗೆ ಏನು ಬೇಕಾದರೂ ಕಲ್ಪಿಸುವುದು-ಕಾಣುವುದು ಮನಸ್ಸಿನ ಸಾಧ್ಯತೆ. ಆದರೆ ಎಚ್ಚರದ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳೇ ಸಂಪೂರ್ಣ ಭಿನ್ನ ಮಳೆಗಾಲ ಬಂತೆಂದರೆ ಮಲೆನಾಡಿನ ಮನುಷ್ಯ ಲೋಕದ ಚಟುವಟಿಕೆಗಳು ವೇಗ ಪಡೆಯುತ್ತವೆ. ಮನೆಯ ಮಾಡು ಹೊದೆಸುವದು, ಒಡೆದ ಹೆಂಚು ಹುಡುಕಿ ತೆಗೆದು ಹೊಸದು ಹಾಕುವುದು, ನೀರು ಹರಿಯಲು ಹರಣಿ ಹಾಕುವುದು. ಬೈನೆ ಮರದಿಂದ ಹರಣಿ ತಯಾರಿಸುವ ಪರಿಣತರನ್ನು ಹುಡುಕುವದು, ಅಡ್ಡ ಮಳೆಯ ಹೊಡೆತ ತಪ್ಪಿಸಲು ತಡಿಕೆ ಕಟ್ಟುವುದು ಹೀಗೆ ಅಸಂಖ್ಯಾ ಕೆಲಸಗಳು ಒಂದಕ್ಕೊಂದು ಹೆಣೆದುಕೊಳ್ಳುತ್ತ ಹೋಗುವುದು. ಮನುಷ್ಯ ಜಗತ್ತನ್ನು ಬಂದೋವಸ್ತು ಮಾಡುವುದರ ಜೊತೆಗೆ ದನಕರುಗಳ ಬಗೆಗೂ ಯೋಚಿಸಬೇಕು. ಕೊಟ್ಟಿಗೆ ಮನೆಯ ಮಾಡುಹೊದೆಸಿ ಅಟ್ಟದಲ್ಲಿ ಬೈಹುಲ್ಲಿನ ಪಿಂಡಿ ಕಟ್ಟಿಡಬೇಕು. ಜೋರು ಮಳೆ ಸುರಿಯುವಾಗ ಮೇಯಲು ಹೋಗದೇ ಅವು ಬಾಯಾಡುತ್ತಿರಲು. ಇನ್ನು ಕಟ್ಟಿಗೆ ಮನೆ ಎಂಬ ವಿಶೇಷ ಸ್ಥಳವೊಂದು ಉಂಟು. ಮಲೆನಾಡಿನ ಮನೆಗಳಲ್ಲಿ ಮಳೆ ಹೊಯ್ಯುವಾಗ ಬಚ್ಚಲಲ್ಲಿ ಹಂಡೆ ತುಂಬ ಬಿಸಿನೀರು ಕುದಿಯುತ್ತಿರಬೇಕು ಅದಕ್ಕಾಗಿ ಬೇಸಿಗೆಯ ಗಡಿಯಲ್ಲಿ ಕಟ್ಟಿಗೆ , ಕುಂಟೆ (ದೊಡ್ಡ ತುಂಡು) ಅಡಿಕೆ ಹಾಳೆ, ತೆಂಗಿನ ಹೆಡೆ, ಕಾಯಿಸಿಪ್ಪೆ ಎಲ್ಲ ಸಂಗ್ರಹಿಸಿ ಇಡಲಾಗುತ್ತದೆ. ಮನೆಸುತ್ತ ಇರುವ ಈ ಎಲ್ಲ ಪುಟ್ಟ ಪುಟ್ಟ ಮನೆಗಳ ಮಾಡಿಗೆ ಅಡಿಕೆ ಸೋಗೆ ಹೊಡೆಸುವ ಕೆಲಸಕ್ಕೆ “ಮನೆಕಂಬಳ” ಅಂತಲೇ ಹೆಸರು. ತೋಟಗಳ ಕಾಲುವೆಸರಿಪಡಿಸಿ ಸಸಿನೆಡುವ ಸಿದ್ಧತೆ, ಬಿತ್ತನೆ ಬೀಜಗಳನ್ನು ಪಣತಗಳಿಂದ ತೆಗೆದಿರಸುವುದು ಹೀಗೆ ಕೊನೆಯಿಲ್ಲದ ಕೆಲಸಗಳು.


ಮಳೆಗಾಲದ ಅಡಿಗೆ ಮನೆ ಜಗತ್ತನ್ನುಇಣುಕಿದರೆ ಅದೊಂದು ರಸಯಾತ್ರೆಯೇ ಸೈ. ನಾಲಿಗೆಯಲ್ಲಿ ನೀರೂರುವಂತೆ ಹುಳ್ಳಕಟ್ಟಗೆ ಮಾವಿನಕಾಯಿ ಭೂತಗೊಜ್ಜು, ಸಾಂಬಾರ ಅಪ್ಪೆಹುಳಿ, ಸೊಳೆಹುಳಿ, ಕೆಸುವಿನ ಕರಕಲಿ, ಕನ್ನೆಕುಡಿ ಕಟ್ನೆ… ಇಂಥ ಪದಾರ್ಥಗಳ. ಮಿಡಿ ಮಾವಿನಕಾಯಿ ಉಪ್ಪಿನಕಾಯಿ. ಇದಕ್ಕೆಲ್ಲ ಬೇಸಿಗೆಯಲ್ಲೇ ಅಡಿ ಆರಂಭ ಹೂಡಿಡುವ ಅಜ್ಜಿ-ಅಮ್ಮಂದಿರು. ಉಪ್ಪುನೀರನ್ನು ಕುದಿಸಿ ಚೆನ್ನಾಗಿ ಬತ್ತಿಸಿ ಅದನ್ನು ಮಣ್ಣಬಾನಿಗಳಲ್ಲಿಟ್ಟು ಅದರೊಳಗೆ ಕೊಸುಮಾವಿನಕಾಯಿ, ಹಲಸಿನಕಾಯಿಯ ತೊಳೆ, ಮಾವಿನ ಮಿಡಿಗಳನ್ನು ಕೆಡದಂತೆ ಸಂಗ್ರಹಿಸುವುದು ಹೆಂಗಸರ ಕೆಲಸ ಜೊತೆಗೆ ಹಲಸಿನ ಹಪ್ಪಳ, ಸಂಡಿಗೆ ಮೊದಲಾದ ಕುರಿಕಲು ತಿಂಡಿಗಳು. ಇವನ್ನೆಲ್ಲಾ ಮಳೆಗಾಲದಲ್ಲಿ ಹುಳುವಾಗದಂತೆ ಕಾಡಿಡುವ ವಿಧಿವಿಧಾನಗಳಂತೂ ಯವುದೋ ನಿಗೂಢ ಜ್ಞಾನದಂತೆ, ದೊಡ್ಡಕಾರ್ಯಾಚರಣೆಯಂತೆ ತೋರುವುದು ಆಗ. ಹೀಗೆ ಸಂಗ್ರಹಿಸಿದ ವಸ್ತುಗಳೆಲ್ಲ ಮಳೆಗಾಲದಲ್ಲಿ ನಾಲಗೆಯ ಮೇಲೆ ತಮ್ಮ ಜಾದೂ ತೋರುವುದು.


ಹಲಸಿನಹಣ್ಣಿನ ಕಡುಬಿನ ಸಿಹಿಘಮಲಂತೂ ಮೂಗಿನ ಹೊಳ್ಳೆಗಳಿಗೆ ಅಮರಿಕೊಂಡು ಕೊಡುವ ಆಹ್ಲಾದ ವರ್ಣನಾತೀತ. ಬಿಸಿಬಿಸಿ ಕಡುಬಿಗೆ ತುಪ್ಪ ಸುರಿದುಕೊಂಡು ತಿಂದರೆ… ಆಹಾ! ಬಾಳೆಲೆಯನ್ನು ನಾಜೂಕಾಗಿ ಕಟ್ಟಿ ಬಾಳೆನಾರಿನಿಂದ ಬಿಗಿದ ಕೊಟ್ಟೆಯಲ್ಲಿ ಘಮ ಘಮಿಸುವ ಕಡುಬು ಎಲ್ಲರ ಹಸಿವು ಕೆರಳಿಸುತ್ತದೆ. ಹಲಸಿನ ಹಣ್ಣಿನ ಶ್ರಾಯ ಮುಗಿಯುವವರೆಗೂ ಅಡಿಗೆ ಮನೆಯ ಕೆಂಡದೊಲೆಗಳ ಮೇಲೆ ಸದಾ ಕಡುಬು ಕರೆಯುತ್ತಲೆ ಇರುತ್ತದೆ ಗದ್ದೆ-ತೋಟಗಳಲ್ಲಿ ಒಜ್ಜೆ ಕೆಲಸಗಳನ್ನು ಪೂರೈಸಿ ಹಸಿದು ಬಂದವರಿಗೆ ಕಡಬು ಸ್ವಫ್ ಆಹಾರ. ಕಡುಬು ತಿಂದು, ಭೂತಗೊಜ್ಜು ಉಂಡು, ಜೊರಜೊರ ಮಳೆಯಲ್ಲಿ ನಿದ್ದೆ ಹೋದರಂತೂ ಹದಿನಾಲ್ಕು ಲೋಕಗಳನ್ನು ಮರೆಸುವ ಮಾಯಕ ನಿದ್ದೆ.
ಮಳೆಗಾಲದಲ್ಲಿ ಮನೆಯೊಳಗೇ ಉರಿಯುವ ಅಗ್ಗಿಷ್ಟಿಕೆಯ ಬಗ್ಗೆ ಹೇಳದಿದ್ದರೆ ಮಳೆ ಅನುಭವವೇ ಅಪೂರ್ಣ ಮನೆಯ ಮಾಡಿನಂಥ ಭಾಗದಲ್ಲಿ ಹೂಡುವ ಈ “ಹೊಡತಲು” ಮಳೆಗಾಲದ ಭಾವಕೇಂದ್ರವೂ ಹೌದು, ಜೀವಕೇಂದ್ರವೂ ಹೌದು. ನೆಲದಲ್ಲಿ ಸದಾನಿಗಿನಿಗಿ. ಬೆಂಕೆ ಮೇಲೆ ಅಡಿಕೆದಬ್ಬೆಗಳಿಂದ ಕಟ್ಟಿದ ತೂಗಾಡುವ ಅಟ್ಟಲು. ಮನೆಯ ಮುದುಕರು ಮಕ್ಕಳು, ಬಾಣಂತಿಯರು ಎಲ್ಲರೂ ಕಾಲುಚಾಚಿ, ಕೈನೀವಿ ಮುಖ, ಮೈಗಳನ್ನೊಡ್ಡಿ ಕೂತರೆ ಮೈನಡುಗಿಸುವ ಚಳಿನೀಗಿ ಹೊಸ ಹುರುಪು ಪಡೆಯುವರು. ಗದ್ದೆಯಿಂದ ದುಡಿದು ಬಂದವರು ಕಾಲಿಗೆ ಹಂಡೆಯ ಬಿಸಿನೀರು ಹುಯ್ದುಕೊಂಡು ಹೊದೆದ ಕಂಬಳಿ ಝೂಡಿಸಿ ಹೊಡತಲಿನ ಅಟ್ಟಿಲಿನ ಮೇಲೆ ಒಣ ಹಾಕುವರು. ಮಕ್ಕಳು ಮುದುಕರ ನಡುವೆ ತಾವೂ ತೂರಿ ಕೂತು ಹಲಸಿನ ಬೀಜ, ಗೇರು ಬೀಜಗಳನ್ನು ಸುಟ್ಟು ಸಿಪ್ಪೆಸುಲಿದು ಮೆಲ್ಲುವರು. ಹೊಡತಲಿನ ಮೇಲೆ ಪುಟ್ಟ ಮಕ್ಕಳ ಕುಂಚಿಗೆ, ಕಸೆಯಂಗಿ ಕೆಲವೊಮ್ಮೆ ಸೀರೆ, ಪಂಚೆಗಳೂ ಮೈಒಣಗಿಸಿಕೊಳ್ಳುವವು. ಹಸಿ ಬಿಸಿ ಹೊಗೆ ವಾಸನೆಯ ಬಟ್ಟೆಗಳು ವಿಚಿತ್ರ ಉನ್ಮಾದ ಹುಟ್ಟಿಸುವವು.


ಹಲವು ಕತೆಗಳು ಹುಟ್ಟಿಕೊಳ್ಳುವುದೇ ಈ ಹೊಡತಲಿನ ಮುಂದೆ. ಅಜ್ಜ ಅಜ್ಜಿಯರ ಕತೆಗಳು ಕಾವುಗೊಂಡು ಇಲ್ಲಿ ಮಾತು ಪಡೆಯುವದು. ಕೇಳುಗರು ಬಿಸಿಯಾಗಿ ಕತೆಯ ಪಾತ್ರಗಳೊಂದಿಗೆ ಜ್ಪಲಿಸುವರು. ಸುತ್ತಲೂಕತ್ತಲು ಮಳೆಮಾಯೆಯಲ್ಲಿ ಜಗದ ಕೊಂಡಿ ಕಳಚಿಕೊಂಡ ಮನೆ. ಅಲ್ಲಿ ನಿಗಿನಿಗಿ ಉರಿವ ಬೆಂಕಿ. ಅದರ ಜ್ವಾಲೆಗಳ ಅಟ.. ಅಲ್ಲಿ ಮೂಡುವ ರಾಮ, ರಾವಣ, ಹನುಮಂತ, ಶಬರಿ, ಭೀಮ, ಅರ್ಜುನ, ದುರ್ಯೋಧನ, ಕರ್ಣ, ಶಕುನಿ ಯಾವ್ಯಾವುದೋ ಮಾಂತ್ರಿಕರು, ಭೂತ, ಚೌಡಿ, ಜಟಕ.. ಕತೆಯಲ್ಲಿ ನಿಜ, ನಿಜದಲ್ಲಿ ಕತೆ ಬೆರೆಯುತ್ತಹೋಗುವ ಕೌತುಕ. ಕಾಲದಿಂದ ಕಿತ್ತಿಟ್ಟಂತೆ ಪುರಾಣ, ಭ್ರಮೆ-ವಾಸ್ತವಗಳ ಜೀಕಾಟದಲ್ಲಿ ಝುಮ್ಮೆನ್ನುವ ಜೀವಕೇಂದ್ರ. ಹೊಡತಲ ಬೆಂಕಿ ಕತೆಯ ಭೀಕರ ಯುದ್ಧಗಳಿಗೆ, ಕಪಿಚೇಷ್ಟೆಗಳಿಗೆ, ರಾಜಕೀಯ ಹುನ್ನಾರಗಳಿಗೆ, ದೇವರ ಲೀಲೆಗಳಿಗೆ, ಸೀತೆ- ದ್ರೌಪದಿಯರ ಕಣ್ಣೀರು, ಅನುಮಾನ, ಕ್ರೋಧಗಳಿಗೆ ಸಾಕ್ಷಿಯಾಗುತ್ತ ಸಾಕ್ಷಿಪ್ರಜ್ಞೆಯಂತೆ ಜ್ಪಲಿಸುತ್ತದೆ. ಹೊಟ್ಟೆ ಚುರುಗುಡುತ್ತಿದ್ದರೂ, ಊಟಕ್ಕೆ ಕೆರೆಮೊಳಗುತ್ತಿದ್ದರೂ ಮಕ್ಕಳಾಗಿದ್ದ ನಮಗ್ಯಾರಿಗೂ ಏಳಲೇ ಮನಸಾಗದು.
ಕರೆಂಟು ಬಂದ ಮೇಲೆ ಮಲೆನಾಡ ಮನೆಗಳಿಗೆ ಚೂರುಚೂರೇ ಆಧುನಿಕ ಯಂತ್ರ ಜಗತ್ತು ಕಾಲಿಡುವುದನ್ನು ನೋಡಿಕೊಂಡೇ ಬೆಳೆದೆವು. ಈಗ ಹಿಂದಿರುಗಿ ನೋಡಿದರೆ ಎಲ್ಲ ಬೆರಗು. ಸಂಜೆಯಾಯಿತೆಂದರೆ ಚಿಮಣಿ ಬುಡ್ಡಗಳಿಗೆ ಎಣ್ಣೆಹಾಕಿ, ಲಾಟೀನಿನ ಗಾಜು ಒರೆಸಿ ದೀಪ ಹೊತ್ತಿಸುತ್ತಿದ್ದ ಕಾಲ ಮುಗಿದು ಬಲ್ಬುಗಳು ತಂತಾನೇ ಸ್ಪಿಚ್ ಹಾಕಿದರೆ ಉರಿಯ ತೊಡಗಿದವು. ಆದರೂ ಮಳೆಗಾಲದಲ್ಲಿ ಭಾರಿ ಮರಗಳು ಕರೆಂಟ್ ಲೈನಿನಿನ ಮೇಲೆ ಉರುಳಿಬೀಳುತ್ತ ವಾರವಾದರೂ ರಿಪೇರಿಯಾಗದೇ ಉಳಿಯುವವು. ಹೀಗೆ ಅರ್ಧಮಳೆಗಾಲ ಇದೇ ಗೋಳು. ಅಗೆಲ್ಲ ಮತ್ತೆ ಹಳೆಯ ದಿನಗಳಿಗೆ ಜಿಗಿಯುವುದು. ನಿಧಾನಕ್ಕೆ ಹೊಡತಲಿನ ಜಾಗವನ್ನು ಟಿ.ವಿ ಅಕ್ರಮಿಸಿ, ಕತೆಗಳ ಸ್ವರೂಪವೂ ಬದಲಾಗುತ್ತ ಹೋಯಿತು. ಮಧ್ಯಾಹ್ನದಿಂದ ರಾತ್ರಿಯವರೆಗೆ ದೋಸೆಹಿಟ್ಟು ರುಬ್ಬುತ್ತ ಮೈಮರೆಯುವ ಅಯಿ, ಬೆಳಗ್ಗೆ ಏಳುವಾಗ ಸಿದ್ದವಿರುತ್ತಿದ್ದ ಅವಳ ದೋಸೆ ಪರ್ವತ ಎಲ್ಲವೂ ಎಲ್ಲರೂ ಬದಲಾವಣೆಗಳಿಗೆ ಚೂರುಚೂರೇ ತೆರೆದುಕೊಳ್ಳುತ್ತ ಹೋದರು.


ಮಳೆ ಸ್ವಲ್ಪ ಹೊಳವು ಕೊಟ್ಟು, ಮುಸಲಧಾರೆಯಂತ ಮಳೆ ನಿಂತ ಮೇಲೆ ಮನೆಯ ಹೊರಗೆ ಕಾಲಿಟ್ಟು ನಡೆಯಲು ಸಾದ್ಯ ಮನೆಗಳ ಮೇಲೆ ಹಾರಾಡುವ ಹೊಗೆಯನ್ನು ಹೀರಿಕೊಂಡು ಕಪ್ಪಗಾದ ಹೆಂಚು, ಹೆಂಚಿನ ಮೇಲೆ ಸುಳಿಯುತ್ತಾ ಆಕಾಶ ಸೇರುವ ಹೊಗೆ ಗಂಧರ್ವ ಲೋಕವನ್ನು ರಚಿಸುವುದು. ಹೆಂಗಸರ ನೆಟ್ಟ ಡೇರೆ, ಜೀನಿಯಾ, ನಿತ್ಯಪುಪ್ಪ, ನಾಗದಾಳಿ ಹೂಗಳೆಲ್ಲಾ ಮನೆ ಮುಂದೆ ಹೆಡೆಬಿಚ್ಚಿ ತೂಗಾಡುತ್ತ ಅಂಗಳವನ್ನು ಬಣ್ಣದ ಸಂತೆಯಾಗಿಸುವವು. ಅಸಂಖ್ಯ ಚಿಟ್ಟೆಗಳು ಹಾರುತ್ತಾ, ದುಂಬಿಗಳ ಗುಂಜಾರವ ಕಿವಿತಟ್ಟುವದು ಹಾಗೇ ಹಬ್ಬ ಸಾಲುಗಳು ಕದತಟ್ಟುವವು. ಕೊಡೆಮಸೆ ಕೊಡೆಮಸೆ ಉದ್ದಿನದೋಸೆ ಎಂದು ರಾಗವಾಗಿ ಹಾಡುತ್ತ, ನಾಗರಪಂಚಮಿಯಲ್ಲಿ ಕೊಡೆಹಿಡಿದು ನಾಗಬನಗಳಲ್ಲಿ ಸಂಚರಿಸುತ್ತ, ಅ ಅರಿಶಿನ ಕುಂಕುಮ, ಅರತಿಯ ಬೆಳಕಲ್ಲಿ ಏಳುಹೆಡೆಗಳ ನಾಗಲೋಕಕ್ಕೆ ಇಳಿಯುತ್ತ, ಚೌಡಿಹಬ್ಬ ಜಟಕನಹಬ್ಬ, ಕೋಳಿಅಂಕ-ಕೋಳಿ ಹಬ್ಬ ಅನ್ನುತ್ತ ಸಕಲರೂ ಕಂಬಳಿ-ಕೊಡೆ ಹಿಡಿದು ಹೊರಬೀಳುವರು. ಶಾಲೆ ಮಕ್ಕಳಂತೂ ದೊಡ್ಡ ನೆಗಸು ಬಂದು ಶಾಲೆಗೆ ಎರಡು ದಿನ ರಜೆ ಬೀಳಲಿ ಎಂದು ಕೈಮುಗಿಯುವರು. ಅಳುಗಳು ಒಂದುವಾರ ಆಡಿಕೆ (ರಜೆ) ಮಾಡಿಕೊಂಡು ನೆಂಟರಮನೆಗಳಲ್ಲಿ ಕೋಳಿಗೆ ಮಸಾಲೆ ಅರೆಯುವರು.
ಮೋಡಬಿತ್ತನೆಯ ಈ ಕಾಳದಲ್ಲಿ ನಿಂತು ಮಲೆನಾಡಿನ ತಿಟ್ಹತ್ತಿ ತಿರುಗಿನೋಡಿದರೆ ಬದಲಾವಣೆ ಜಗದ ನಿಯಮ ಎಂಬ ಸತ್ಯದರ್ಶನವಾಗುವುದು. ಮಲೆನಾಡಲ್ಲೂ ಈಗ ಅಂಥ ಮುಸಲಧಾರೆಯಂತ ಮಳೆಯಿಲ್ಲ. ಜೂನ್ ಜುಲೈ ತಿಂಗಳಲ್ಲೂ ಬಿಸಿಲು-ಸೆಖೆ. ಗದ್ದೆಗೆ ನೀರಾಗಿಲ್ಲ ಎಂದು ಹಾಳುಬಿಟ್ಟ ಗದ್ದೆಗಳು. ಎಲ್ಲ ಪಟ್ಟಣ ಸೇರಿ ಮುದುಕ ಮುದುಕಿಯರಿಂದ ಕೂಡಿದ ಮನೆಗಳು ಕತೆಕೇಳುವ ಮಕ್ಕಳೆಲ್ಲಾ ಕಾನ್ವೆಂಟುಗಳಲ್ಲಿ ರೇನ್ ರೇನ್ ಗೋ ಅವೇ… ಎಂದು ಹಾಡುವುದರಲ್ಲಿ ತಲ್ಲಿನ. ಮಳೆಬಂದರೆ ಪಿರಿಪಿರಿ ಗಿಜಿಗಿಜಿ ಕೆಸರಲ್ಲಿ ಇಳಿಯುವುದೇ ರೇಜಿಗೆ ಎಂಬಂತಿರುವ ಹೊಸತಲೆಮಾರು. ಯಾರನ್ನು ಯಾರುದೂರುವುದು? ಎಲ್ಲರೂ ಬದಲಾವಣೆಯ ಹೊಳೆಯಲ್ಲಿ ತರಗೆಲೆಗಳು.
ನೆಲೆಮುಗಿಲು ಏಕವಾಗಿ ಏಕತಾರಿಯ ನಾದವನ್ನು ಬಿತ್ತಿದ ಮಳೆ, ಕತೆಗಳ ಹೊಡತಲು ಹೊತ್ತಿಸಿ ಭಾವ ಕೋಶವ ಬೆಚ್ಚಗೆ ಕಾಪಿಟ್ಟ ಮಳೆ, ಮೋಹಿಸುವುದ ಕಲಿಸಿದ ಮಳೆ, ಉನ್ಮಾದವನ್ನು ಕೆರಳಿಸಿದ ಮಳೆ, ಕಣ್ಣೀರು ಕಾಣದಂತೆ ಅಡಗಿಸಿಟ್ಟ ಮಳೆ, ಭೋರ್ಗರೆಯುವುದನ್ನೂ ಹೇಳಿ ಕೊಟ್ಟ ಮಳೆ, ಪ್ರೀತಿ ಹಂಚಿಕೊಳ್ಳುವುದ ಕಲಿಸಿದ ಮಳೆ, ಘಮಘಮಿಸುವ ಅನ್ನದ ಹಿಂದಿದ್ದು ಜಗದ ಹಸಿವು ನೀಗಿಸುವ ಮಳೆ, ಇಳೆಯ ತೊಳೆದು ಶುದ್ಧಗೊಳಿಸಿ ಹೊಸಹೊಸದಾಗಿ ಚಿಗುರುವ, ಅರಳುವ ಅದಮ್ಯ ಸಾಧ್ಯತೆಯನ್ನು ಕಾಣಿಸಿದ ಮಳೆ… ಈ ಇಂಥ ಮಳೆ ಎಂದಿಗೂ ನಿಲ್ಲದಿರಲಿ.

 

Comments are closed.

Social Media Auto Publish Powered By : XYZScripts.com