ಚಾಂಪಿಯನ್ಸ್ ಚಾಲೆಂಜ್ : ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಡಿಯಾ – ಪಾಕ್ ಫ್ಲ್ಯಾಶ್ ಬಾಕ್

ಭಾರತ ಹಾಗೂ ಪಾಕಿಸ್ತಾನ ತಂಡಗಳು ರವಿವಾರ ಇಂಗ್ಲೆಂಡಿನ ಓವಲ್ ಮೈದಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಕಿರೀಟಕ್ಕಾಗಿ ಹೋರಾಟ ನಡೆಸಲಿವೆ. ಇದುವರೆಗೆ ಐಸಿಸಿ ಟೂರ್ನಮೆಂಟ್ ಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 15 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಭಾರತ 13 ರಲ್ಲಿ ಜಯಗಳಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ  ಉಭಯ ತಂಡಗಳು 4 ಬಾರಿ ಮುಖಾಮಖಿಯಾಗಿದ್ದು ತಲಾ ಎರಡು ಬಾರಿ ಗೆದ್ದಿವೆ. ಆ 4 ಪಂದ್ಯಗಳ  ಇಣುಕುನೋಟ ಇಲ್ಲಿದೆ.
2004 ಚಾಂಪಿಯನ್ಸ್ ಟ್ರೋಫಿ ( ಪಾಕಿಸ್ತಾನಕ್ಕೆ 3 ವಿಕೆಟ್ ಗೆಲುವು)
ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಭಾರತಕ್ಕೆ ಬ್ಯಾಟ್ ಮಾಡಲು ಆಹ್ವಾನಿಸಿತು. ಭಾರತ 49.5 ಓವರ್ ಗಳಲ್ಲಿ 200 ರನ್ ಗಳಿಸಿ ಆಲ್ ಔಟ್ ಆಯಿತು. ಚೇಸ್ ಮಾಡಲಿಳಿದ ಪಾಕ್, ಯುಸುಫ್ ಯೊಹಾನಾ 87* ರನ್ ಗಳ ನೆರವಿನಿಂದ 49.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಎದುರಾಳಿ ಆಟಗಾರರ ಪ್ರಚೋದನಕಾರಿ ಮಾತುಗಳಿಗೆ, ನಡವಳಿಕೆಗಳಿಗೆ ಪ್ರತಿಕ್ರಿಯೆ ತೋರದ ರಾಹುಲ್ ದ್ರಾವಿಡ್, ರನ್ ಓಡುವಾಗ ಅಡ್ಡಿಪಡಿಸಿದ ಶೋಯೇಬ್ ಅಖ್ತರ್ ರೊಂದಿಗೆ ವಾದಕ್ಕಿಳಿದಿದದ್ದು ಅಪರೂಪದ ದೃಶ್ಯವಾಗಿತ್ತು.
 
2009 ಚಾಂಪಿಯನ್ಸ್ ಟ್ರೋಫಿ ( ಪಾಕಿಸ್ತಾನಕ್ಕೆ 54 ರನ್ ಗೆಲುವು )
ಸೆಂಚುರಿಯನ್ ನಲ್ಲಿ ನಡೆದ ಈ ಮ್ಯಾಚ್ ನಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತು. ಶೋಯೇಬ್ ಮಲಿಕ್ (128) ಅಮೋಘ ಶತಕದ ನೆರವಿನಿಂದ 302 ರನ್ ಮೊತ್ತ ಪೇರಿಸಿತು. ಗುರಿಯನ್ನು ಬೆನ್ನತ್ತಿದ ಭಾರತ 44.5 ಓವರ್ ಗಳಲ್ಲಿ ಕೇವಲ 248 ರನ್ ಗಳಿಸಿ ಆಲ್ ಔಟ್ ಆಯಿತು. ಶೋಯೇಬ್ ಮಲಿಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.
2103 ಚಾಂಪಿಯನ್ಸ್ ಟ್ರೋಫಿ ( ಭಾರತಕ್ಕೆ 8 ವಿಕೆಟ್ ಗೆಲುವು )
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಳೆ ಬಂದ ಕಾರಣ ಪಂದ್ಯವನ್ನು 40 ಓವರ್ ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಲಿಳಿದ ಪಾಕಿಸ್ತಾನ 39.4 ಓವರ್ ಗಳಲ್ಲಿ 165 ರನ್ ಗಳಿಸಿ ಆಲ್ ಔಟ್ ಆಯಿತು. ಮಳೆ ಮತ್ತೆ ಅಡ್ಡಿಪಡಿಸಿದ ಕಾರಣ ಭಾರತಕ್ಕೆ 22 ಓವರ್ ಗಳಲ್ಲಿ 102 ರನ್ ಟಾರ್ಗೆಟ್ ನೀಡಲಾಯಿತು. ಭಾರತ 19.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿ, ಗೆಲುವು ಸಾಧಿಸಿತು.
2017 ಚಾಂಪಿಯನ್ಸ್ ಟ್ರೋಫಿ ( ಭಾರತಕ್ಕೆ 124 ರನ್ ಗೆಲುವು )
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದ ಕಾರಣ 2 ಓವರ್ ಕಡಿತಗೊಳಿಸಲಾಗಿತ್ತು. ರೋಹಿತ್ ಶರ್ಮಾ 91 ಹಾಗೂ ವಿರಾಟ್ ಕೊಹ್ಲಿ 81 ರನ್ ನೆರವಿನಿಂದ ಭಾರತ 48 ಓವರ್ ಗಳಲ್ಲಿ 319 ರನ್ ಮೊತ್ತ ಕಲೆಹಾಕಿತು. ಮತ್ತೆ ಮಳೆ ಅಡ್ಡಿಪಡಿಸಿದ ಕಾರಣದಿಂದ ಪಾಕಿಸ್ತಾನಕ್ಕೆ 41 ಓವರ್ ಗಳಲ್ಲಿ 289 ಟಾರ್ಗೆಟ್ ನೀಡಲಾಯಿತು. ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 33.4 ಓವರ್ ಗಳಲ್ಲಿ 164 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 124 ರನ್ ಗಳ ಸೋಲನುಭವಿಸಿತು.

Comments are closed.

Social Media Auto Publish Powered By : XYZScripts.com