ಚಾಂಪಿಯನ್ಸ್ ಟ್ರೋಫಿ : ಬಾಂಗ್ಲಾ ವಿರುದ್ಧ 9 ವಿಕೆಟ್ ಗೆಲುವು, ಟೀಮ್ ಇಂಡಿಯಾ ಫೈನಲ್ ಗೆ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಬಾಂಗ್ಲಾ ವಿರುದ್ಧ 9 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿ ಫೈನಲ್ ತಲುಪಿದೆ.  ಟಾಸ್ ಗೆದ್ದ ಭಾರತ ಬಾಂಗ್ಲಾ ತಂಡವನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ನಿಗದಿತ 50 ಓವರುಗಳಲ್ಲಿ ಬಾಂಗ್ಲಾ ತಂಡ 264 ರನ್ ಕಲೆಹಾಕಿತು. ಬಾಂಗ್ಲಾ ಪರವಾಗಿ ತಮೀಮ್ ಇಕ್ಬಾಲ್ 70 , ಮುಷ್ಫಿಕುರ್ ರಹೀಮ್ 61 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ 2, ಜಸ್ಪ್ರೀತ್ ಬುಮ್ರಾಹ್ 2 ಹಾಗೂ ಕೇದಾರ್ ಜಾಧವ್ 2 ವಿಕೆಟ್ ಕಬಳಿಸಿದರು.

ಬಾಂಗ್ಲಾ ನೀಡಿದ ಗುರಿಯನ್ನು ಬೆನ್ನತ್ತಿದ ಭಾರತ 40.1 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ (123) 15 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ ಭರ್ಜರಿ ಶತಕ ಗಳಿಸಿದರು. ವಿರಾಟ್ ಕೊಹ್ಲಿ 15 ಬೌಂಡರಿಗಳನ್ನೊಳಗೊಂಡ 96 ರನ್ ಗಳಿಸಿದರು. ಈ ಪಂದ್ಯದಲ್ಲಿ ಕೊಹ್ಲಿ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ 8000 ರನ್ ಗಳಿಸಿದ ದಾಖಲೆ ಮಾಡಿದರು. ಮುಷ್ರಫೆ ಮೊರ್ತಜಾ ಬಾಂಗ್ಲಾ ಪರವಾಗಿ ಏಕೈಕ ವಿಕೆಟ್ ಪಡೆದರು. ಅಮೋಘ ಶತಕ ಗಳಿಸಿದ ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.  18 ರಂದು ಓವಲ್ ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ  ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನಗಳು ಎದುರಾಗಲಿವೆ. ಗ್ರೂಪ್ ಹಂತದಲ್ಲಿ ಭಾರತದ ವಿರುದ್ಧ ಸೋಲನುಭವಿಸಿರುವ ಪಾಕ್ ಫೈನಲ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ರೋಹಿತ್, ವಿರಾಟ್, ಶಿಖರ್ ಭರ್ಜರಿ ಪಾರ್ಮನಲ್ಲಿದ್ದು, ಭಾರತದ ಬೌಲಿಂಗ್ ವಿಭಾಗ ಕೂಡ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಪಾಕ್ ಕಠಿಣ ಸವಾಲನ್ನು ಎದುರಿಸಲಿದೆ. ಒಟ್ಟಿನಲ್ಲಿ ಭಾರತ ಹಾಗೂ ಪಾಕ್  ಕನಸಿನ ಫೈನಲ್ ಗೆ ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Comments are closed.

Social Media Auto Publish Powered By : XYZScripts.com