ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಕೆ.ಪಿ ನಂಜುಂಡಿ : ಸಿದ್ದರಾಮಯ್ಯ ವಿರುದ್ಧ ಆಕ್ರೋಷ : ಕೈ’ಗೆ ರಾಜಿನಾಮೆ

ಬೆಂಗಳೂರು : ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದು, ಮಂಗಳವಾರ ಬೆಂಗಳೂರಿನ ಡಾಲರ್ಸ್‌ ಕಾಲೋನಿಯ ಮನೆಯಲ್ಲಿ ಕೆ.ಪಿ.ನಂಜುಂಡಿ ಹಾಗೂ ವಿಶ್ವಕರ್ಮ ಸಮಾಜದ ಸ್ವಾಮೀಜಿಗಳ ಜಂಟಿ ಸುದ್ದಿಗೋಷ್ಡಿ ನಡೆಸಿ ಅಧಿಕೃತವಾಗಿ ತಾವು ಕಾಂಗ್ರೆಸ್‌ನಿಂದ ಹೊರಬರುವುದಾಗಿ ಘೋಷಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ಮೇಲೆ ಅಸಮಾಧಾನದ ಮಾತುಗಳನ್ನಾಡಿದ ಕೆ.ಪಿ.ನಂಜುಂಡಿ, ಕಳೆದ 16 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿಯೇ ಇದ್ದವನು ತಾನು. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನಾನು ರಾಜಕೀಯ ಸೇವೆ ಮಾಡಲು ಬಂದವನು. ನಾನು ವೃತ್ತಿ ಮಾಡಲ್ಲಿಕ್ಕೆಂದು ರಾಜಕೀಯಕ್ಕೆ ಬಂದಿಲ್ಲ. ಸಮಾಜ ಸೇವೆ ಮಾಡಲು ಬಂದವನು ನಾನು. ನನ್ನ ಜೊತೆ 16 ವರ್ಷಗಳಿಂದ ನಮ್ಮ ಸ್ವಾಮಿಗಳು ಹಾಗೂ ನಮ್ಮ ಸಮಾಜವಿದೆ.  ನನಗೆ ಕಾಂಗ್ರೆಸ್ ಬಗ್ಗೆ ಬೇಸರ ಇಲ್ಲ. ಅಲ್ಲಿರುವ ಜನರ ಬಗ್ಗೆ ಬೇಸರ ಇದೆ ಎಂದರು.
ಸಿದ್ಧರಾಮಯ್ಯ ವಿರುದ್ಧ ತಮ್ಮ ಆಕ್ರೋಷ ವ್ಯಕ್ತಪಡಿಸುತ್ತಾ, ಸಿದ್ಧರಾಮಯ್ಯ ಸಿಎಂ ಆದಾಗ ಎಲ್ಲರಿಗೂ ಒಂದು ಆಸೆಯಿತ್ತು. ಮತ್ತೊಮ್ಮೆ ದೇವರಾಜ ಅರಸು ಅವರನ್ನು ನೋಡಬಹುದು ಎಂಬ ಆಸೆಯಿತ್ತು. ಆದರೆ ಆ ಆಸೆ ಈಡೇರಲಿಲ್ಲ, ಶೋಷಿತ ಸಮಾಜಗಳನ್ನು ಮೇಲೆತ್ತಿದರೆ ಆಗ ಅವರು ದೇವರಾಜ ಅರಸು ಆಗುತ್ತಿದ್ದರು.  ಸಿದ್ಧರಾಮಯ್ಯ ಕಾಂಗ್ರೆಸ್ ಗೆ ಬರುವ ಮುನ್ನವೇ ನಾನು ಕಾಂಗ್ರೆಸ್ ಗೆ ಬಂದಿದ್ದೇನೆ. ಅವರು ಬಂದು ಎಂಟು-ಒಂಭತ್ತು ವರ್ಷವಾಯ್ತು ಆದರೆ ನಾನು 16 ವರ್ಷದಿಂದ ಕಾಂಗ್ರೆಸ್ ಗಾಗಿ ದುಡಿದ್ದೇನೆ.  ನಾವು ಕಾಂಗ್ರೆಸ್ ಋಣದಲ್ಲಿಲ್ಲ. ಕಾಂಗ್ರೆಸ್ ನವರು ನಮ್ಮ ಸಮಾಜದ ಋಣದಲ್ಲಿದ್ದಾರೆ ಎಂದರು. ನಾನು ಯಾವುದರಲ್ಲಿ ಕಡಿಮೆಯಿದ್ದೇನೆ. ವಿದ್ಯಾ ಇಲ್ವಾ? ಬುದ್ಧಿ ಇಲ್ವಾ? ಮಾತು ಬರೋಲ್ವಾ? ಎಂದು ಪ್ರಶ್ನಿಸುತ್ತಾ, ಆರು ತಿಂಗಳ ಹಿಂದೆ ನನ್ನ ಹೆಸರು ಎಂ.ಎಲ್.ಸಿ ಲಿಸ್ಟ್ ನಲ್ಲಿತ್ತು. ಆದ್ರೆ ಇಂದು ನನ್ನ ಹೆಸರು ಇಲ್ಲ ಎಂದರು.  ತಮ್ಮ ಸ್ಬಾಮಿಗಳಿಗೂ ಕಾಂಗ್ರೆಸ್‌ನ ಈ ಕಣ್ಣುಮುಚ್ಚಾಲೆ ಸಾಕಾಗಿದೆ. ನನಗೆ ಎಂ ಎಲ್.ಸಿ.ಕೊಡುವುದರಿಂದ ಸರ್ಕಾರ ಬಿದ್ದು ಹೋಗುತ್ತಿರಲಿಲ್ಲ. ಇಷ್ಟರ ನಂತರವೂ ಕಾಂಗ್ರೆಸ್‌ನಲ್ಲಿ ಇರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದರು.
ತಾವು ರಾಜಿನಾಮೆ ನೀಡುವ ದಿನಾಂಕವನ್ನ ಇನ್ನೂ ಅಧಿಕೃತಗೊಳಿಸದ ನಂಜುಂಡಿ, ನಾನು ರಾಜ್ಯ ನಾಯಕರ ಯಾರ ಬಳಿಯೂ ರಾಜೀನಾಮೆ ಕೊಡಲ್ಲ. ಸಿದ್ದರಾಮಯ್ಯನವರಿಗಿಂತ ಸೋನಿಯಾಗಾಂಧಿ ನನಗೆ ಚನ್ನಾಗಿ ಗೊತ್ತಿದೆ, ಅವರ ಬಳಿಯೇ ರಾಜಿನಾಮೆ ಕೊಟ್ಟು ಬರುತ್ತೇನೆ ಎಂದರು. ದೆಹಲಿಗೆ ತೆರಳುವ ದಿನಾಂಕ ಶೀಘ್ರದಲ್ಲೇ ತಿಳಿಸುತ್ತೇನೆ ಎಂದಿದ್ದಾರೆ.  ಅಲ್ಲದೆ, ತಮ್ಮ ಸ್ವಾಮೀಜಿಗಳು ಈಗ ಎರಡು ಪಕ್ಷಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ, ಯಡಿಯೂರಪ್ಪನವರ ಜತೆಯಲ್ಲಿಯೂ ಸ್ವಾಮಿಗಳು ಸಂಪರ್ಕದಲ್ಲಿದ್ದಾರೆ, ನಮ್ಮ ಸಮಾಜಕ್ಕೆ ಯಾರು ಗೌರವ ಕೊಡುತ್ತಾರೋ ಆ ಪಕ್ಷಕ್ಕೆ ನಾನು ಸೇರುತ್ತೇನೆ ಎಂದು ನಂಜುಂಡಿ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ  ಕೆ.ಪಿ.ನಂಜುಂಡಿಯವರಿಗೆ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಭರವಸೆಯನ್ನ ನೀಡಲಾಗಿತ್ತು. ಆದರೆ ಇಂದಿಗೂ ಆ ಭರವಸೆಯನ್ನ ಕಾಂಗ್ರೆಸ್‌ ಮುಖಂಡರು ಈಡೇರಿಸದೇ ತಮಗೆ ಕಾಂಗ್ರೆಸ್ ಪಕ್ಷ ಆನ್ಯಾಯ ಮಾಡಿದೆ ಎಂದು ಅವರು ದೂರಿದ್ದಾರೆ.

Comments are closed.