ಸಖೀಗೀತ-14 : ಇದು ಸಹಚಿಂತನೆಯ ‘ಸಹಯಾನ’ …! ಡಾ. ಗೀತಾ ವಸಂತ ಅಂಕಣ…

ಇದು ಅನುಮಾನಗಳ ಕಾಲ, ಅಸಹನೆಯ ಕಾಲ, ಮಾತುಗಳು ರಾಜಕೀಯ ಅಜೆಂಡಾಗಳ ಭಾಗವಾಗಿ ಹೃದಯ ಮುಟ್ಟುವುದನ್ನೇ ಮರೆತ ಕಾಲ… ಎಂದೆಲ್ಲ ಮರುಗುತ್ತೇವೆ. ಒಳಗೊಳಗೇ ಕೊರಗುತ್ತಿದ್ದೇವೆ. ಹೇಳಬೇಕಾದ್ದನ್ನು ಹೇಳಲಾಗದೇ ಸೊರಗುತ್ತಿದ್ದೇವೆ ಕೂಡ! ಮಾತು – ಬರಹಗಳು ಅಂತರಂಗವನ್ನು ತೆರೆದಿಡುವ, ಬೌದ್ಧಿಕ ಕ್ರಿಯಾಶೀಲತೆಯನ್ನು ಪುಟಗೊಳಿಸುವ ಕಾಲವೊಂದಿತ್ತು. ಅನುಮಾನ, ಅಪನಂಬಿಕೆ, ಅಪಾರ್ಥಗಳನ್ನು ಸರಿಪಡಿಸಿ ಸಾಮರಸ್ಯ, ಸಹಬಾಳ್ವೆಗೆ ಕೊಂಡಿಯೊಂದನ್ನು ರೂಪಿಸುವ ಕೆಲಸವನ್ನು ನಮ್ಮ ಸಾಹಿತ್ಯಿಕ ಸಂವಾದಗಳು ಮಾಡುತ್ತಿದ್ದವು. ಸದಾ ಅನ್ಯಾಯವನ್ನು ಪ್ರತಿರೋಧಿಸುವ, ನ್ಯಾಯಕ್ಕಾಗಿ ಹಂಬಲಿಸುವ ಒಳಗಿನ ಕಾವನ್ನು ಕಾಪಿಡುವ ಒಲೆಯಂತೆ ಸಾಹಿತ್ಯ ಹಾಗೂ ಅದರ ಅಂಗವಾದ ಆಂದೋಲನಗಳು ಚಳುವಳಿಗಳು ಕೆಲಸ ಮಾಡುತ್ತಿದ್ದವು. ಆದರೆ, ನೋಡುನೋಡುತ್ತ ಬೆಂಕಿ ಹೊತ್ತಿಕೊಂಡಿತು. ಮಾತು-ಬರಹಗಳು ಅದಕ್ಕೆ ಗಾಳಿಯೂದುತ್ತಾ ಬೆಂಕಿ ಹಬ್ಬುತ್ತಲೇ ಹೋಯಿತು. ಸಂಶಯದ ಹೊಗೆ ತುಂಬಿ ಉಸಿರು ಕಟ್ಟತೊಡಗಿತು. ಕಣ್ಣೀರು ಮಾತ್ರ ನಮ್ಮಂಥವರ ಪಾಲಿಗೆ ಉಳಿಯಿತು.

ಸಾಹಿತ್ಯದ ಚಳುವಳಿಗಳ ಗುಂಪುಗಾರಿಕೆಯಲ್ಲಿ ಒಬ್ಬರ ಮುಖ ಒಬ್ಬರು ನೋಡಲಾಗದಂಥ ವಾತಾವರಣ,. ಅವರದೇ ಅಜೆಂಡಾಗಳು, ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಬಾಲಬಡುಕರ ಹಿಂಡು. ಎದೆಯ ದನಿಗಳು ಸತ್ತೇ ಹೋಗಿವೆಯೇನೋ ಎಂಬಂಥ ಸ್ತಬ್ಧತೆ. ಬೆಂಕಿ ಬಿದ್ದಾಗ ಬೀಡಿ ಹಚ್ಚಿಕೊಳ್ಳುವವರ ದೊಂಬರಾಟ. ಒಂಥರಾ ನಿರಾಶೆಯ ಮಬ್ಬಗತ್ತಲು. ಏನೋ ಬೇಕಿತ್ತು, ಮತ್ತೆ ಪ್ರಜ್ವಲಿಸಲು, ಮತ್ತೆ ಕಾವುಗಳ್ಳಲು, ಒಬ್ಬರನ್ನೊಬ್ಬರು ಕಾಣಲು, ಜೊತೆಜೊತೆಯಾಗಿ ಚಿಂತಿಸಲು ಮತ್ತು ಜೊತೆಜೊತೆಯಾಗಿ ದಾರಿಕ್ರಮಿಸಲು. ಅಂಥದೊಂದು ಸಣ್ಣ ನಿರೀಕ್ಷೆ ಕೆಂಡವಾಗಿ ಉಳಿದದ್ದು ಸುಳ್ಳಲ್ಲ.

ಮೇಲಿನ ಎಲ್ಲ ತಳಮಳಗಳಿಗೆ, ಆತಂಕಗಳಿಗೆ ಮೆಲ್ಲನೆ ಉತ್ತರ ಕೊಡುತ್ತ, ಭರವಸೆಗಳನ್ನು ಬಿತ್ತುತ್ತಾ ಸಾಗಿದೆ ಸಹಯಾನ. ಸಹಯಾನವು ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಿಕ ಆಸ್ಥೆಯಿಂದ ಉತ್ತರ ಕನ್ನಡ ಜಿಲ್ಲೆಯ ಕೆರೆಕೋಣವೆಂಬ ಪುಟ್ಟ ಗ್ರಾಮದಲ್ಲಿ ಮೈತಾಳಿದ ಸಂಸ್ಥೆ. ಹೆಸರೇ ಸೂಚಿಸುವಂತೆ ಇದು ಒಟ್ಟಾಗಿ ಸಾಗುವ ಯಾನ. ಹಾಗೆ ಒಟ್ಟಿಗೆ ಹೆಜ್ಜೆಯಿಡುತ್ತಲೇ ಸಾಮಾಜಿಕ ಅನಿಷ್ಟಗಳನ್ನು, ಬೌದ್ಧಿಕ ಮಿತಿಗಳನ್ನು ದಾಟುವ ಮಹತ್ತರ ಪ್ರಕ್ರಿಯೆಗೆ ಸಹಯಾನವು ನಾಂದಿ ಹಾಡಿದೆ. ಸಾಹಿತ್ಯ, ಸಂಘಟನೆ, ಚಳುವಳಿ, ವಿಚಾರ ಸಂಕಿರಣ, ಯಕ್ಷಗಾನ, ನಾಟಕ, ಕಲಾಪ್ರದರ್ಶನಗಳು, ಆಧ್ಯಯನ-ಸಂಶೋಧನೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಹರಿವನ್ನು ದಾಖಲಿಸುತ್ತಿರುವ ಸಹಯಾನ ಇಂದಿನ ಸಂದರ್ಭದ ತುರ್ತನ್ನು ಅರಿತು ಸೂಕ್ಷ್ಮವಾಗಿ ನಿಭಾಯಿಸುತ್ತಿರುವ ರೀತಿ ಮೆಚ್ಚುವಂತಹುದು. ಕರ್ನಾಟಕದ ಸಾಂಸ್ಕøತಿಕ, ಸಾಮಾಜಿಕ, ಚಳುವಳಿಯಲ್ಲಿ ತಮ್ಮನ್ನು ತೀವೃವಾಗಿ ತೊಡಗಿಸಿಕೊಂಡಿದ್ದ ಡಾ. ಆರ್. ವಿ. ಭಂಡಾರಿಯವರ ನೆನಪಿನಲ್ಲಿ ನಡೆಯುತ್ತಿರುವ ಈ ಎಲ್ಲ ಚಟುವಟಿಕೆಗಳು ಸಾಮುದಾಯಿಕ ಕ್ರಿಯಾಶೀಲತೆ ಹಾಗೂ ಬದ್ಧತೆಗೆ ಒಂದು ಮಾದರಿಯೆನಿಸುವಂತಿವೆ.

ಪ್ರಬಲ ಜನತಾ ಸಂಸ್ಕøತಿಯ ಚಹರೆಗಳನ್ನು ಉಳಿಸಿಕೊಳ್ಳುತ್ತಾ ಸಾಂಸ್ಕøತಿಕ ಚಳುವಳಿಯನ್ನು ಕಟ್ಟುವುದು ಸಹಯಾನದ ಗುರಿಯಾಗಿದೆಯೆಂದು ಅದನ್ನು ಸಂಗಟಿಸುತ್ತಿರುವ ಸಹೃದಯೀ ಮನಸುಗಳು ಹೇಳಿಕೊಂಡಿವೆ. ” ಪ್ರಜಾಪ್ರಭುತ್ವ, ಜ್ಯಾತ್ಯಾತೀತತೆ, ವೈಜ್ಞಾನಿಕ ಸಮಾಜವಾದದ ಆದರ್ಶಗಳನ್ನು ಜನತೆಯಲ್ಲಿ ಹರಡುವುದು ಮತ್ತು ಅಸ್ಪ್ರಶ್ಯತೆ, ಜಾತಿವಾದ, ಕೋಮುವಾದದ ಅಪಾಯಗಳನ್ನು ಸಂಘಟನಾತ್ಮಕವಾಗಿ ಎದುರಿಸುವುದು, ಮೌಢ್ಯತೆ, ಲಿಂಗ ಅಸಮಾನತೆ, ಸಾಮಾಜಿಕ-ಆರ್ಥಿಕ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವುದು, ಯುವ ಲೇಖಕರಿಗೆ, ಶಿಕಕರಿಗೆ, ವಿದ್ಯಾರ್ಥಿಗಳಿಗೆ ಓದು ಮತ್ತು ಬರವಣಿಗೆಗಳನ್ನೊಳಗೊಂಡಂತೆ ಸಂವಿಧಾನದ ಆಶಯ ಮತ್ತು ಜಾರಿಯ ಅಗತ್ಯದ ಕುರಿತು ತರಬೇತಿ ನೀಡುವುದು…” ಹೀಗೆ ಪ್ರಗತಿಪರ ಆಶಯಗಳನ್ನು ಸೃಜನಾತ್ಮಕವಾಗಿ ಸಂಘಟಿಸುವ ತಮ್ಮ ನಿಲುವನ್ನು ಸಹಯಾನದ ಸಮಾನ ಮನಸ್ಸುಗಳು ಬಲಪಡಿಸುತ್ತವೆ. ಈ ಎಲ್ಲ ಕೆಲಸಗಳ ಹಿಂದೆ ಪ್ರೇರಣೆಯಾಗಿರುವವರು ಡಾ. ಆರ್.ವಿ. ಭಂಡಾರಿಯವರು. ಚಳುವಳಿ ಅವರ ಬದುಕಿನ ಭಾಗವಾಗಿತ್ತು. ಬರಹ ಅದರ ಅಭಿವ್ಯಕ್ತಿಯಾಗಿತ್ತು. ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೆರೆಕೊಣ ಎಂಬ ಪುಟ್ಟ ಹಳ್ಳಿಯಿಂದ ಮೂಡಿದ ಅವರು ಶಾಲಾ ಶಿಕ್ಷಕರಾಗಿದ್ದುಕೊಂಡು ಸಮಾಜದ ಅರಿವನ್ನು ವಿಸ್ತರಿಸುವ ಕಾಯಕವನ್ನು ಮಾಡಿದ ಪರಿ ನಿಜಕ್ಕೂ ಅಚ್ಚರಿ. ಸದಾ ಚಳುವಳಿಯ ಮನಸ್ಥಿತಿ ಹೊಂದಿದ್ದ ಆರ್.ವಿ. ಭಂಡಾರಿಯವರು, ನ್ಯಾಯ ನಿಷ್ಠುರಿಯಾಗಿದ್ದಂತೆ ಒಳಗೊಂಡು ಮಗುವಿನಂತ ಮನಸ್ಸನ್ನು ಕಾಪಿಟ್ಟುಕೊಂಡವರಾಗಿದ್ದಾರು. ಹೋರಾಟ ಬೀದಿ ನಾಟಕ, ಜಾಥಾಗಳ ಜೊತೆಜೊತೆಗೇ ಮಕ್ಕಳ ಮನೋಲೋಕವನ್ನು ಕಟ್ಟಿಕೊಟ್ಟರು. ವೈಚಾರಿಕ ಸಾಹಿತ್ಯದ ಜೊತೆಗೆ ಮಕ್ಕಳಿಗಾಗಿ ಅವರು ಬರೆದ ಸೃಜನಾತ್ಮಕ ಬರಹಗಳ ಪಾಲೂ ಮ,ಹತ್ವದ್ದು. ಸದಾ ಮಕ್ಕಳನ್ನು, ಯುವಕರನ್ನು ಒಟ್ಟಾರೆ ಹೊಸತಲೆಯವರನ್ನು ಎಚ್ಚರದ ಹಾದಿಯಲ್ಲಿ ನಡೆಸುವ ಸಂಕಲ್ಪ ಅವರದಾಗಿತ್ತು. ಆ ದಿಶೆಯಲ್ಲಿ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದರು. ಅಂಚಿನಲ್ಲಿದ್ದ ಸಮುದಾಯಗಳನ್ನು ಈ ಜನಚಳುವಳಿಯಲ್ಲಿ ಒಳಗುಮಾಡಿದರು. ಇಂದು ಅಂತಹ ಜಾಗೃತ ಯುವತಲೆಮಾರು ಅವರ ಕನಸಿನ ನಾವೆಯನ್ನು ಮುನ್ನಡೆಸುತ್ತಿದೆ.

ಸಹಯಾನ ಸಾಹಿತ್ಯೋತ್ಸವ : 2009 ರಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡ ‘ಸಹಯಾನ’ ವು 2010ರಲ್ಲಿ ಕೆರೆಕೋನದ ಅಂಗಳದಲ್ಲಿ ಸಾಹಿತ್ಯೋತ್ಸವವನ್ನು ಆರಂಭಿಸಿತು,. ಆತ್ಮೀಯ ಪರಿಸರದಲ್ಲಿ ಮುಕ್ತವಾಗಿ ಚರ್ಚಿಸುವ ವಾತಾವರಣವನ್ನು ಈ ಸಾಹಿತ್ಯೋತ್ಸವವು ನಿರ್ಮಿಸಿತು. ಸಹಯಾನಕ್ಕೆ ಸಂವಾದ, ಒಳಗೊಳ್ಳುವಿಕೆಗಳು ಮುಖ್ಯವೇ ಹೊರತು ಉಪದೇಶವಲ್ಲ ಆದ್ದರಿಂದಲೇ ಇದು ಭಾಷಣಗಳ ಭರಾಟಯಿಂದ ದೂರ. ನಿಜವಾದ ಸಾಹಿತ್ಯ-ಸಂಸ್ಕ್ರತಿ ಒಲವಿನಿಂದ ಆಗಮಿಸುವ ಆಸಕ್ತರೇ ಇದರ ಪ್ರತಿನಿದಿಗಳು. ಇಂಥ ಆಸಕ್ತರ ವಲಯ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಇರುವುದು ಇಲ್ಲಿನ ಚರ್ಚೆಗಳ ಜೀವಂತಿಕೆಗೆ ಸಾಕ್ಷಿ.

ಜಾತಿ, ಗುಂಪು, ಐಡಿಯಾಲಜಿಗಳ ಮೇಲಾಟಕ್ಕಿಂತ ಸಮಾನತೆ-ಸಹಬಾಳ್ವೆಯ ಎಚ್ಚರದ ನಡೆಯ ಹೊಸತಲೆಮಾರಿನ ಸಾಂಗತ್ಯ ಇಲ್ಲಿ ಮುಖ್ಯವೆನಿಸಿದೆ. ಹೊಸತಲೆಮಾರು ಈ ಸಾಹಿತ್ಯೋತ್ಸವದ ಕೇಂದ್ರಕಾಳಜಿ. ಪ್ರತೀವರ್ಷವೂ ಚರ್ಚೆಯ ವಿಷಯಗಳು ಮಾತ್ರ ಭಿನ್ನವಾಗಿರುತ್ತವೆ. ವಿಶಿಷ್ಟ ವಿಷಯವೊಂದನ್ನು ಕುರಿತು ನಿರ್ದಿಷ್ಟವಾಗಿ ಕಟ್ಟಿಕೊಳ್ಳುತ್ತ ಹೋಗುವ ವಿಚಾರ ಸರಣಿಯ ಸಮುದಾಯದ ಹಿತ ಹಾಗೂ ಜವಾಬ್ದಾರಿಗಳನ್ನು ಬೆನ್ನೆಲುಬಾಗಿಸಿಕೊಂಡಿರುವುದು ಅರ್ಥಪೂರ್ಣ.

 

ಮೊದಲನೆಯ ಸಾಹಿತ್ಯೋತ್ಸವದ ಪರಿಕಲ್ಪನೆ – ಸಾಹಿತ್ಯ ಸ್ಪಂದನ : ಹೊಸತಲೆಮಾರು ಎಂಬದಾಗಿದ್ದರೆ, ನಂತರ ಕ್ರಮವಾಗಿ ಮಹಿಳೆ: ಹೊಸತಲೆಮಾರು, ಮಾಧ್ಯಮ : ಹೊಸತಲೆಮಾರು, ಜಾನಪದ : ಹೊಸತಲೆಮಾರು, ಡಾ. ಅಂಬೇಡ್ಕರ್ ಚಿಂತನೆಗಳು: ಹೊಸತಲೆಮಾರು, ನಾಡು ನುಡಿ ಚಿಂತನೆ: ಹೊಸತಲೆಮಾರು ಎಂಬ ಆಶಯಗಳನ್ನಿರಿಸಿಕೊಂಡು ಎಂಟು ಸಾಹಿತ್ಯೋತ್ಸವಗಳು ಇದುವರೆಗೂ ಆಯೋಜಿಸಲ್ಪಟ್ಟಿವೆ. ಪ್ರತಿವರ್ಷ ಮೇ ತಿಂಗಳಲ್ಲಿ ನಡೆಯುವ ಈ ಸಾಹಿತ್ಯೋತ್ಸವ ಚಿಂತಕರನ್ನು, ಬರಹಗಾರರನ್ನು, ರಂಗಕರ್ಮಿಗಳನ್ನು, ಚಳುವಳಿಯಲ್ಲಿ ನಿರತ ಯುವಜನರನ್ನು ಒಳಗೊಳ್ಳುತ್ತ ತನ್ನ ಸಹಯಾನವನ್ನು ಮುಂದುವರೆಸಿದೆ.

ಅಕಾಡೆಮಿಕ ವಲಯ ಹಾಗೂ ಜನಪರ ಚಳುವಳಿಗಳು ಮುಖಾಮುಖಿಯಾಗಬೇಕು ಅಷ್ಟೇ ಅಲ್ಲ ಕೈ ಜೋಡಿಸಬೇಕೆಂಬ ಕಾಳಜಿಯಿಂದ ಸಹಯಾನವು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಇವೆರಡರ ಮಂಥನ ಸೃಜನಶೀಲ ಕ್ಷೇತ್ರಕ್ಕೂ ಹೊಸ ಆಲೋಚನೆಗಳು ಬರಬೇಕೆಂಬ ಹಂಬಲ ಇಲ್ಲಿ ನಿಜಗೊಳ್ಳುತ್ತಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನೊಬ್ಬರನ್ನು ಮಾಡುವ ರೂಢಿಯಿದೆಯಾದರೂ ಅವರು ಅಲಂಕಾರದ ಅಧ್ಯಕ್ಷರಾಗಿರುವುದಿಲ್ಲ. ಸಾಕ್ಷಿಪ್ರಜ್ಞೆಯಂತೆ ಇಡೀ ಕಾರ್ಕ್ರಮದಲ್ಲಿ ಉಪಸ್ಥಿತರಿದ್ದು ಚರ್ಚೆಗಳನ್ನು ಸೂತ್ರಬದ್ಧವಾಗಿ ಸುಸಂಬದ್ಧವಾಗಿ ಕಟ್ಟುವ ಹೊಣೆ ನಿಭಾಯಿಸುತ್ತಾರೆ. ಅವರೂ ಚರ್ಚೆಗಳ ಭಾಗವಾಗಿರುತ್ತಾರೆ. ಈಗಾಗಲೇ ಜಯಂತ ಕಾಯ್ಕಿಣಿ, ಡಾ. ಎಂ.ವಿ. ವಸು, ಬಿ. ಸುರೇಶ, ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರೊ. ಎಚ್. ಎಸ್. ರಾಘವೇಂದ್ರ ರಾವ್, ಡಾ. ಕೃಷ್ಣಮೂರ್ತಿ ಹನೂರು, ಪ್ರೊ. ರಾಜೇಂದ್ರ ಚೆನ್ನಿ, ಪ್ರೊ. ಶಿವರಾಮ ಪಡಿಕ್ಕಲ್ ಇವರುಗಳು ಸರ್ವಾಧ್ಯಕ್ಷರಾಗಿದ್ದುಕೊಂಡು ಚರ್ಚೆಗಳನ್ನು ಸಂಘಟಿಸಲಿದ್ದಾರೆ. ಹೊಸ ಆಲೋಚನೆಗಳನ್ನು ರೂಪಿಸಿದ್ದಾರೆ. ಡಾ. ರಹಮತ್ ತರೀಕೆರೆ, ಡಾ. ಬಂಜಗೆರೆ ಜಯಪ್ರಕಾಶ, ಡಾ. ಸಬೀಹಾ ಭೂಮಿಗೌಡ, ಕೆ. ಶರೀಫಾ, ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ, ಡಾ. ಕೇಶವ ಶರ್ಮಾ, ಪಿಚ್ಚಳ್ಳಿ ಶ್ರೀನಿವಾಸ, ಡಾ. ಚಂದ್ರ ಪೂಜಾರಿ, ಲಕ್ಷ್ಮಣ ಗಾಯಕ್ವಾಡ, ಡಾ. ಎಚ್. ಎಸ್ ಅನುಪಮಾ, ಡಾ. ಎಚ್. ಎಲ್. ಪುಷ್ಪಾ, ಡಾ. ಎಂ. ಜಿ. ಹೆಗಡೆ, ಜೆ.ಪಿ. ಬಸವರಾಜು, ಆರ್. ಕೆ. ಹುಡಗಿ, ಕೆ. ಎಸ್. ವಿಮಲಾ, ರವಿಕೃಷ್ಣಾ ರೆಡ್ಡಿ, ಎನ್. ಎಮ್. ಎಸ್. ಇಸ್ಮಾಯಿಲ್, ಡಾ. ವಿನಯಾ, ಸುನಂದಾ ಕಡಮೆ… ಹೀಗೆ ಹೆಸರಿಸುತ್ತ ಹೋದರೆ ಪಟ್ಟಿ ದೀರ್ಘವಾಗುತ್ತದೆ. ಇವರೆಲ್ಲರ ಸಾತತ್ಯ ಸಹಚಿಂತನೆಗಳು ಸಹಯಾನದ ಆಕೃತಿಯನ್ನು ನಿರ್ಮಿಸುವಲ್ಲಿ ಶ್ರಮಿಸಿವೆ. ಹೊಸತಲೆಮಾರಿನ ಅನೇಕ ವಿದ್ವಾಂಸರು, ಚಿಂತಕರು, ಕವಿಗಳು, ಕತೆಗಾರರು, ವಿಮರ್ಶಕರು, ಚಳುವಳಿಯಲ್ಲಿ ತೊಡಗಿಕೊಂಡ ಕ್ರಿಯಾಶೀಲ ಮನಸ್ಸುಗಳು, ಹಾಡುಗಾರರು, ನಿರ್ದೇಶಕರು, ರಂಗಕರ್ಮಿಗಳು, ಆಸಕ್ತ ಓದುಗರು ಹೀಗೆ ಸಹಯಾನದ ಚಿಂತನ ಬಳಗ ದೊಡ್ಡದಾಗುತ್ತಿದೆ. ವಿವಿಧ ಹಿನ್ನೆಲೆಗಳಿಂದ, ಅಭಿವ್ಯಕ್ತಿ ಪ್ರಕಾರಗಳಿಂದ, ವಿವಿಧ ಚಿಂತನಾವಲಯಗಳಿಂದ ಬರುವ ಜನ ಇಲ್ಲಿ ಸೇರುವುದೇ ಚೆಂದ. ಇಂಥ ಕೊಡಕೊಳುವಿಕೆಯೇ ಇಂದು ನಡೆಯಬೇಕಾಗಿದೆ. ಅದನ್ನು ಸಹಯಾನ ನಡೆಸುತ್ತಿದೆಯೆಂಬುದು ಆಶಾದಾಯಕ ಬೆಳವಣಿಗೆ.

 

ನಾಟಕದ ಅಂಗಳ

ತೆರೆದಷ್ಟು ಬಾಗಿಲು, ನಡೆದಷ್ಟು ದಾರಿ ಎಂಬ ಮಾತಿಗೆ ಈ ಸಹಯಾನವು ಇಂಬು ಕೊಡುವಂತಿದೆ. ಇದರ ಕಾರ್ಯಚಟುವಟಿಕೆಗಳ ಹರಹು ಅಚ್ಚರಿ ಮೂಡಿಸುವಂತಿದೆ. ಅದರಲ್ಲಿ ಕೆಲವನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಸಹಯಾನ ನಾಟಕೋತ್ಸವವು ನಾಟಕ ಕ್ಷೇತ್ರದಲ್ಲಿ ಗಮನಾರ್ಹ ಪ್ರಯೋಗಗಳನ್ನು ಮಾಡುತ್ತಿದೆ. ಚಿಂತನ ರಂಗ ಅಧ್ಯಯನ ಕೇಂದ್ರವು ಹಮ್ಮಿಕೊಂಢಿರುವ ಎಲ್ಲಾ ನಾಟಕಗಳ ತರಬೇತಿ ಮತ್ತು ಪ್ರಯೋಗಗಳು ಇಲ್ಲಿ ನಡೆಯುತ್ತಿವೆ. ಹೊಸ ತಲೆಮಾರಿನ ಪ್ರತಿಭಾವಂತ ನಿರ್ದೇಶಕರಾದ ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ ಅತ್ಯುತ್ತಮ ನಾಟಕಗಳು ಪ್ರದರ್ಶನಗೊಂಡು ರಾಜ್ಯಾದ್ಯಂತ ಗಮನ ಸೆಳೆದಿವೆ. ಅವರ ನಿರ್ದೇಶನದ ಮಿಸ್ಟೇಕ್, ಕಂಸಾಯಣ, ಮಕ್ಕಳ ರವೀಂದ್ರ, ಊರ್ಮಿಳಾ, ಚಿತ್ರಾ, ಕಾವ್ಯರಂಗ, ಉರಿಯ ಉಯ್ಯಾಲೆ ನಾಟಕಗಳು ಈ ಅಂಗಳದಿಂದ ಮೂಡಿಬಂದಿವೆ. ದು. ಸರಸ್ವತಿಯವರ ಸಣ್ಣತಮ್ಮ ರಾಮಾಯಣ, ಗಣಪತಿ ಗೌಡ ಅವರ ಯಾನ, ತೋಂಬ ಅವರ ಹಸಿದ ಕಲ್ಲುಗಳು ಮೊದಲಾದವು ವಿಶಿಷ್ಟ ಅನುಭವ ನೀಡಿವೆ.

ಒಳಮನೆಯಲ್ಲಿ

ಸ್ಥಳೀಯವಾದುದನ್ನು ವಿಶ್ವಾತ್ಮಕಗೊಳಿಸಬೇಕೆಂಬ ತತ್ವಕ್ಕೆ ನಿದರ್ಶನವೆಂಬಂತೆ ಸಹಯಾನದ ಹೆಜ್ಜೆ ಗುರುತುಗಳಿವೆ. ಕೇಂದ್ರೆದೆಡೆ ಚಲಿಸುವುದಕ್ಕಿಂತ ವಿಕೇಂದ್ರೀಕರಣಗೊಳ್ಳುವ ಚಿಂತನೆಯಿದು. ಬೆಂಗಳೂರು ಕೇಂದ್ರಿತ ಬೌದ್ಧಿಕ ಚಟುವಟಿಕೆಗಳಿಂದ ಹೊರಗೆ ನಿಂತು ಸ್ಥಳೀಯತೆಯ ಸತ್ವದೊಂಧಿಗೆ ವಿಶ್ವಾತ್ಮಕ ಅರಿವಿಗೆ ಸ್ಪಂದಿಸುವ, ಆ ಅರಿವಿಗೆ ತನ್ನ ಕಸುವನ್ನೂ ಸೇರಿಸುವ ಕೆಲಸವಿದು. ಇಂದು ಸಹಯಾನಕ್ಕೆ ರಾಜ್ಯದ ಹಾಗೂ ಹೊರರಾಜ್ಯದಲ್ಲಿರುವ ಪ್ರಮುಖ ಚಿಂತಕರು ಬಂದು ಹೋಗಿದ್ದಾರೆ. ಬಹುಮಹತ್ವದ ಚರ್ಚೆ ಸಂವಾದಗಳು ಕೆರೆಕೋಣದ ಅಂಗಳದಲ್ಲಿ ನಡೆದಿವೆ. ಹೊಸತಲೆಮಾರು ಸ್ಫೂರ್ತಿ ಪಡೆದಿದೆ. ಇವೆಲ್ಲದರ ಹಿಂದೆ ದುಡಿಯುತ್ತಿರುವ ವ್ಯಕ್ತಿಗಳ ಕುರಿತು ಹೇಳದಿದ್ದರೆ ಈ ಯಾನ ಅಪೂರ್ಣ. ಸಹಯಾನವನ್ನು ಕಟ್ಟಿ ಬೆಳೆಸುತ್ತಿರುವವರು ಆರ್.ವಿ.ಭಂಡಾರಿ, ಮಗಳು ಮಾಧವಿ ಭಂಡಾರಿ, ಸೊಸೆ ಯಮುನಾ ಗಾಂವ್ಕರ್, ಅವರ ಅಕ್ಕ ತಂಗಿಯರು, ಬಂಧುಗಳು ಹೀಗೆ ಇಡೀ ಕುಟುಂಬವೇ ಬೆನ್ನೆಲುಬಾಗಿ ನಿಂತುಬಿಟ್ಟಿದೆ. ಹಿರಿಯರಾದ ವಿಷ್ಣುನಾಯ್ಕ, ಎನ್.ಆರ್.ನಾಯಕ್, ಶಾಂತಿ ನಾಯಕ ಇನ್ನೂ ಅನೇಕರು ಹಿನ್ನೆಲೆಗಿದ್ದಾರೆ. ರಾಜ್ಯದ ಅನೇಕ ಹಿರಿಕಿರಿಯ ಸಮಾನಮನಸ್ಕರು ಈ ಸಹಯಾನದ ಸಾಂಗತ್ಯದಲ್ಲಿದ್ದಾರೆ.

ಮಾಧವಿ ಭಂಡಾರಿ ಕನ್ನಡದಲ್ಲಿ ಒಳ್ಳೆಯ ಕವಿತೆಗಳನ್ನು ಬರೆಯುತ್ತಿರುವ ಸೂಕ್ಷ್ಮಮನದ ಕವಯತ್ರಿಯಾದರೆ, ವಿಠ್ಠಲ ಭಂಡಾರಿ ಕನ್ನಡ ಪ್ರಾಧ್ಯಾಪಕರು. ಸಂಘಟನೆ, ಹೋರಾಟಗಳ ಜೊತೆಗೆ ತಮ್ಮದೇ ಭಿನ್ನ ಆಲೋಚನಾ ಶೈಲಿಯನ್ನು ರೂಪಿಸಿಕೊಂಡು ಹೊಸತಲೆಮಾರನ್ನು ಪ್ರಭಾವಿಸುತ್ತಿರುವವರು. ಅವರ ಸಂಗಾತಿ ಯಮುನಾ ಗಾಂವ್ಕರ್ ಹೋರಾಟದ ಗಟ್ಟಿದನಿಯಾಗಿ ಗುರುತಿಸಿಕೊಂಡವರು. ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ರಾಜ್ಯಾದ್ಯಂತ ಸಂಘಟನೆ ಹೋರಾಟಗಳಲ್ಲಿ ಶೃದ್ಧೇಯಿಂದ ತೊಡಗಿಸಿಕೊಂಡವರು. ಹೀಗೆ ಇಡೀ ಕುಟುಂಬ ಪ್ರಗತಿಪರ ಆಶಯ, ಹೋರಾಟ ಹಾಗೂ ಸೃಜನಶೀಲತೆಗಳನ್ನು ಮೇಳೈಸಿಕೊಂಡು ತಮ್ಮ ಜೊತೆ ಹೊಸ ತಲೆಮಾರನ್ನು ಮುನ್ನಡೆಸುವ ಕೆಲಸವನ್ನು ಮಾಡುತ್ತಿದೆ. ಆ ಮೂಲಕ ಇವರೆಲ್ಲ ಡಾ. ಆರ್.ವಿ.ಭಂಡಾರಿಯವರನ್ನು ಬರಿಯ ನೆನಪಾಗಿಸದೆ ಜನಮಾನಸದಲ್ಲಿ ಜೀವಂತವಾಗಿರಿಸಿದ್ದಾರೆ. ಈ ಅರಿವಿನ ಸಹಯಾನವು ಹೊತ್ತಿಸಿದ ಪುಟ್ಟ ಹಣತೆಯನ್ನು ಮುಂದಿರಿಸಿಕೊಂಡರೆ ನಮ್ಮ ಮುಖ ನೀವು, ನಿಮ್ಮ ಮುಖ ನಾವು ಕಾಣುತ್ತ ಸಹಯಾನಕ್ಕೆ ಸಿದ್ಧರಾಗಬಹುದು.

Comments are closed.

Social Media Auto Publish Powered By : XYZScripts.com