ಯಾವುದೇ ಸಮುದಾಯದ ಜನ ಉಪಹಾರಕ್ಕೆ ಕರೆದರೂ ಹೋಗಲು ನಾನು ಸಿದ್ಧ : ಬಿ.ಎಸ್‌ ಯಡಿಯೂರಪ್ಪ

ಬೆಳಗಾವಿ: ದಲಿತರ ಮನೆಗಳಲ್ಲಿ ಉಪಹಾರ ಸ್ವೀಕರಿಸುತ್ತಿರುವುದು ರಾಜಕೀಯ ಉದ್ದೇಶಕ್ಕಲ್ಲ, ದಲಿತರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾತ್ರ, ಅಂತೆಯೇ ಯಾವ ಸಮುದಾಯದ ಜನ ನನ್ನ ಊಟ ಉಪಹಾರಕ್ಕೆ ಕರೆದರೂ ನಾನು ಹೋಗಲು ಸಿದ್ಧನಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಘೋಷಿಸಿದ್ದಾರೆ.  ಮಂಗಳವಾರ ಬೆಳಗಾವಿಯಲ್ಲಿ ಮಾತನಾಡಿದ ಅವರು,  ಕಳೆದ 13 ದಿನಗಳಿಂದ 13 ಜಿಲ್ಲೆ ಪ್ರವಾಸ ಮಾಡಿ ಬೆಳಗಾವಿಗೆ ಬಂದಿದ್ದೇನೆ.
ರಾಜ್ಯ ಸರ್ಕಾರದ ಸಚಿವ ಸಂಪುಟಕ್ಕೆ ಬರಗಾಲದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಬರಗಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಎಲ್ಲ 18 ಬಿಜೆಪಿ ಸಂಸದರು ಕಳಸಾಬಂಡುರಿ ಸಮಸ್ಯೆ ಬಗೆಹರಿಸಲು ಸದಾ ಸಿದ್ದರಾಗಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳನ್ನ ಚರ್ಚೆಗೆ ಒಪ್ಪಿಸುತ್ತೆನೆ. ಸಿಎಂ ಸಿದ್ದರಾಮಯ್ಯ ಸಿಎಂಗಳ ಜೊತೆ ಚರ್ಚೆಗೆ ಸಿದ್ದರಾಗಬೇಕು ಎಂದರು. ರೈತಸಾಲ ಮನ್ನಾ ಬಗ್ಗೆ ಮಾತನಾಡುತ್ತಾ,   ನಿನ್ನೆ ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ, ಉತ್ತರ ಪ್ರದೇಶಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ.  ಅದೇ ರೀತಿ ರಾಜ್ಯದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಬಿ.ಎಸ್‌.ವೈ ಎಚ್ಚರಿಕೆ ನೀಡಿದ್ದಾರೆ.

Comments are closed.