‘ನಾನು ಕನ್ನಂಬಾಡಿ ಕಟ್ಟೆ’ ಪುಸ್ತಕ CM ರಿಂದ ಬಿಡುಗಡೆ : ನಿಷೇಧಿಸುವಂತೆ ವಿಶ್ವೇಶ್ವರಯ್ಯ ಸೇನಾಪಡೆಯ ಆಗ್ರಹ

ಮೈಸೂರು: ಪ್ರೊ. ಪಿ.ವಿ ನಂಜರಾಜ ಅರಸ್ ಎಂಬುವವರು ಬರೆದಿರುವ ‘ನಾನು ಕನ್ನಂಬಾಡಿ ಕಟ್ಟೆ’ ಎಂಬ ಆತ್ಮಕತೆ ಪುಸ್ತಕದಲ್ಲಿ ಸರ್.ಎಂ ವಿಶ್ವೇಶ್ವರಯ್ಯನವರ ತೇಜೋವಧೆ ಮಾಡಲಾಗಿದೆ ಎಂದು ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಸೇನಾಪಡೆ ಸಂಘಟನೆ ಆರೋಪಿಸಿದೆ.
ಈ ಸಂಬಂಧ ಭಾನುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನವನದಲ್ಲಿ ಸಭೆ ನಡೆಸಿ ಮಾತನಾಡಿದ ಸಂಘಟನೆಯ ಸಂಚಾಲಕ ಪ್ರೇಮಕುಮಾರ್,  ಈ ಕೃತಿಯ ಕರ್ತೃ ಪ್ರೊ. ನಂಜರಾಜ ಅರಸ್ ಇತಿಹಾಸವನ್ನು ತಿರುಚಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು,  ‘ನಾನು ಕನ್ನಂಬಾಡಿ ಕಟ್ಟೆ’ ಕೃತಿ ಭಾನುವಾರವೇ ಬಿಡುಗಡೆಗೊಂಡಿದ್ದು, ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೃತಿಯ ಕರ್ತೃ ಪಿ.ವಿ ನಂಜರಾಜ ಅರಸ್‌, ಈ ಆತ್ಮಕತೆ ಪುಸ್ತಕದ ಬಗ್ಗೆ ಕೆಲವರು ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ.  ಭಿನ್ನಾಭಿಪ್ರಾಯ ಹೊಂದಿರುವವರು ಖುದ್ದು ತನ್ನೊಡನೆ ಚರ್ಚೆಗೆ ಬರಲಿ. ಹಲವಾರು ವರ್ಷಗಳಿಂದ ವಿವರವಾದ ದಾಖಲೆಗಳನ್ನು ಸಂಗ್ರಹಿಸಿ ಈ ಪುಸ್ತಕ ಬರೆದಿದ್ದೇನೆ ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com