ಗೋವನ್ನ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ : ಕೇಂದ್ರ ಸರ್ಕಾರಕ್ಕೆ ರಾಜಸ್ತಾನ್‌ ಹೈಕೋರ್ಟ್‌ ಸಲಹೆ

ಜೈಪುರ: ಗೋವನ್ನ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ ಎಂದು ರಾಜಸ್ಥಾನ್‌ ಹೈಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಅಲ್ಲದೆ, ರಾಜಸ್ತಾನ್‌ ಬೊವೈನ್‌ ಆಕ್ಟ್‌ 1995ರ ಪ್ರಕಾರ ಗೋ ಹತ್ಯೆ ಮಾಡಿದವರಿಗೆ 10 ವರ್ಷ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಹೆಚ್ಚಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ರಾಜಸ್ತಾನ್‌ ಹೈಕೋರ್ಟ್‌ ಶಿಫಾರಸ್ಸು ಮಾಡಿದೆ. ಜೈಪುರದ  ಹಿಂಗೊನಿಯಾ ಗೋಶಾಲೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರದ ಕುರಿತು ಜಾಗೋ ಜನತಾ ಸೊಸೈಟಿ ಎಂಬ ಎನ್‌ಜಿಒ ದಾಖಲಿಸಿದ ದೂರಿನ ವಿಚಾರಣೆಯಲ್ಲಿ ಜೈಪುರ್‌ ಹೈಕೋರ್ಟ್‌‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮಹೇಶ್‌ಚಂದ್ರ ಶರ್ಮಾ ಈ ತೀರ್ಪು ನೀಡಿದ್ದಾರೆ. ನ್ಯಾಯಮೂರ್ತಿ ಮಹೇಶ್‌ಚಂದ್ರ ಶರ್ಮಾ ಬುಧವಾರವೇ ನಿವೃತ್ತಿ ಪಡೆಯಲಿದ್ದು, ಅವರ ವೃತ್ತಿ ಜೀವನದ ಅಂತಿಮ ತೀರ್ಪು ಇದಾಗಿದೆ.
ಸಂವಿಧಾನದ ಸೆಕ್ಷನ್‌ 48 ಮತ್ತು 51-A (g) ಪ್ರಕಾರ, ಸರ್ಕಾರ ಗೋವನ್ನ ರಕ್ಷಿಸಲೇಬೇಕು, ಏಕೆಂದರೆ,  ಗೋವು ಕೇವಲ ಹಿಂದೂ ಧರ್ಮಕ್ಕೊಂದೇ ಸಂಬಂಧಪಟ್ಟಿಲ್ಲ, ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಕೃಷಿ ಮತ್ತು ಹೈನೋದ್ಯಮಕ್ಕೆ ಅತೀ ಅವಶ್ಯವಾಗಿರುವ ಗೋವನ್ನ ರಕ್ಷಿಸಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

Comments are closed.

Social Media Auto Publish Powered By : XYZScripts.com