ಪಾರ್ವತಮ್ಮ ಎಂಬ ವರನಟ ರಾಜಕುಮಾರನ ವಜ್ರಕವಚ ‘ವಜ್ರೇಶ್ವರಿ’ …

ಕನ್ನಡ ಚಿತ್ರರಂಗದ ಸ್ಟಾರ್‌ ಮೇಕರ್‌,  ಗಂಡನ ಯಶಸ್ಸಿಗೆ ಆಧಾರವಾಗಿ ನಿಂತು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಚೈತನ್ಯಮಯಿ.., ಕನ್ನಡ ಚಿತ್ರರಂಗಕ್ಕೊಂದು ಹೊಸ ಭಾಷ್ಯ ಬರೆಸಿದ ಚಾಣಾಕ್ಯೆ, ಚಿತ್ರರಸಿಕರ ಬೇಡಿಕೆಯನ್ನರಿತು ಚಿತ್ರ ನಿರ್ಮಿಸಿ ಕನ್ನಡಿಗರ ಮನಗೆದ್ದ ಯಶಸ್ವಿ ನಿರ್ಮಾಪಕಿಯೇ ಪಾರ್ವತಮ್ಮ ರಾಜ್‌ಕುಮಾರ್‌.  ಕನ್ನಡದ ಕಣ್ಮಣಿ, ನಟ ಸಾರ್ವಭೌಮ, ವರನಟ, ಮೇರು ನಟ ಎಂಬ ಹಲವಾರು ಬಿರುದು ಪಡೆದು ಕನ್ನಡದ ಜೀವನಾಡಿಯಾಗಿದ್ದ ಡಾ. ರಾಜ್‌ಕುಮಾರ್‌ ಅವರ ಯಶಸ್ಸಿಗೆ ಬೆನ್ನುಕೊಟ್ಟು, ಗಂಡನ ಉನ್ನತಿಯನ್ನ ಜಾಗೂರಕತೆಯಿಂದ ಕಾಯ್ದುಕೊಂಡು, ಅವರನ್ನ ಸದಾ ಎತ್ತರದಲ್ಲಿರುವಂತೆ ನೋಡಿಕೊಂಡ ಜವಾಬ್ಧಾರಿಯುತ ಹೆಣ್ಣು ಆಕೆ.  ತಮ್ಮ ಪತಿ, ಮಕ್ಕಳ ಅಭ್ಯುದಯಕ್ಕಾಗಿ ಸದಾ ಶ್ರಮಿಸಿರುವ ಚಾಣಾಕ್ಷ ಗ್ರಹಿಣಿ.
ಸಿನಿಮಾ ನಟನನ್ನ ಮದುವೆಯಾಗಿ, ಸಿನಿಮಾ ಜಗತ್ತನ್ನ ಸೂಕ್ಷ್ಮವಾಗಿ ಅರಿತಿದ್ದ ಪಾರ್ವತಮ್ಮ, ಓದಿದ್ದು ಹೈಸ್ಕೂಲ್‌ ಅಭ್ಯಾಸವಷ್ಟೆ. ಆದರೆ ಅವರ ಬುದ್ದಿವಂತಿಕೆ ಮತ್ತು ವ್ಯವಹಾರ ಜ್ಞಾನ ಯಾವ ಪದವಿಗೂ ಸರಿ ಸಮಾನವಲ್ಲ ಎಂಬುದು ಅವರನ್ನ ಅತಿ ಹತ್ತಿರದಿಂದ ಬಲ್ಲವರ ಮಾತು.   ಇಂಥ ಬುದ್ದಿವಂತ ಹೆಣ್ಣು ಹುಟ್ಟಿದ್ದು,  1939ರ ಡಿಸೆಂಬರ್ 6 ರಂದು, ಮೈಸೂರಿನ ಕೆಆರ್ ನಗರದ ಸಾಲಿಗ್ರಾಮದಲ್ಲಿ. ಅಪ್ಪಾಜಿ ಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಮಗಳು ಪಾರ್ವತಮ್ಮ,  1953ರ ಜೂನ್‌ 25 ರಂದು ರಾಜ್ ಕುಮಾರ್ ಅವರನ್ನ ಮದುವೆಯಾದರು. ಕೇವಲ 13 ವರ್ಷ ವಯಸ್ಸಿನಲ್ಲಿಯೇ ರಾಜ್‌ ಹೆಂಡತಿಯಾದ ಪಾರ್ವತಮ್ಮ, ತಮ್ಮ ಗಂಡನ ವೃತ್ತಿ ಜೀವನದ ಏಳು ಬೀಳುಗಳನ್ನ ಕಣ್ಣಾರೆ ಕಂಡು, ನಟನಾ ಜಗತ್ತಿನಲ್ಲಿ ಅವರು ಪಟ್ಟ ಕಷ್ಟಕ್ಕೆ ಸಾಕ್ಷಿಯಾಗಿದ್ದರು.
70ರ ದಶಕದಲ್ಲಿ ಡಾ.ರಾಜ್‌ ಅವರ ಜನಪ್ರಿಯತೆ ಉತ್ತುಂಗದ ಸ್ಥಿತಿಯಲ್ಲಿದ್ದರೂ ನಿರ್ಮಾಪಕರು ಕಡಿಮೆ ಸಂಭಾವನೆ ನೀಡುತ್ತಾರೆ ಎಂಬ ಕಾರಣಕ್ಕೆ ಸ್ವತಃ ತಾವೇ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಧೈರ್ಯವಂತೆ ಈಕೆ. ಹಿಂದೆ ಮುಂದೆ ಅದೆಷ್ಟೇ ಧೈರ್ಯಗುಂದಿಸುವ ಮಾತುಗಳು ಕೇಳಿಬಂದರೂ ಕೂಡ ತಮ್ಮ ಛಲ ಬಿಟ್ಟುಕೊಡದ ಪಾರ್ವತಮ್ಮ, 1975ರಲ್ಲಿ ಕಷ್ಟಪಟ್ಟು ಹಣಹೊಂದಿಸಿ, ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಾದ ವಜ್ರೇಶ್ವರಿ ಕಂಬೈನ್ಸ್‌ (ಪೂರ್ಣಿಮಾ ಎಂಟರ್‌ಪ್ರೈಸಸ್‌)ನ್ನ ಹುಟ್ಟುಹಾಕಿದ್ದಲ್ಲದೆ, ಅದೇ ವರ್ಷವೇ ತ್ರಿಮೂರ್ತಿ ಚಿತ್ರವನ್ನ ನಿರ್ಮಾಣ ಮಾಡಿದರು. ಡಾ.ರಾಜ್‌ಕುಮಾರ್‌ ಅವರ ನಾಯಕತ್ವದಲ್ಲಿ ಮೂಡಿಬಂದಿದ್ದ ತ್ರಿಮೂರ್ತಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ಆ ಯಶಸ್ಸು ಪಾರ್ವತಮ್ಮನವರಿಗೆ ಇನ್ನಷ್ಟು ಧೈರ್ಯ ಕೊಟ್ಟಿತ್ತು. ಅಲ್ಲಿಂದ ಪಾರ್ವತಮ್ಮನವರ ಸಂಸ್ಥೆ ವಜ್ರೇಶ್ವರಿ ಹಿಂದಿರುಗಿ ನೋಡಿದ್ದೇ ಇಲ್ಲ. ಅಲ್ಲಿಂದ ಇಲ್ಲಿಯವರೆಗೆ ಸರಿಸುಮಾರು 87 ಚಿತ್ರಗಳನ್ನ ವಜ್ರೇಶ್ವರಿ ಕಂಬೈನ್ಸ್‌ ಕನ್ನಡ ಚಿತ್ರರಂಗಕ್ಕೆ ನೀಡಿದೆ. ಅವರು ನಿರ್ಮಾಣ ಮಾಡಿದ ಜನುಮದ ಜೋಡಿ, ಜೀವನಚೈತ್ರ, ಶಂಕರ್‌ಗುರು ,ನಂಜುಂಡಿ ಕಲ್ಯಾಣದಂಥ ಚಿತ್ರಗಳು ಒಂದು ವರ್ಷ ಪ್ರದರ್ಶನ ಕಂಡಿದ್ದರೆ,  16 ಚಿತ್ರಗಳು 25 ವಾರಗಳ ಪ್ರದರ್ಶನ ಕಂಡಿವೆ.  35 ಚಿತ್ರಗಳು ಶತದಿನೋತ್ಸವವನ್ನು ಆಚರಿಸಿವೆ.
ಪಾರ್ವತಮ್ಮ ತಮ್ಮ ಚಿತ್ರಗಳ ಕಥೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಕಥೆಯನ್ನ ಕುಟುಂಬದ ಇನ್ನೂ ಕೆಲವರೊಂದಿಗೆ ಕುಳಿತು ಕೇಳಿ, ಇದು ಜನರಿಗೆ ಇಷ್ಟವಾಗಬಹುದಾ ಎಂದು ಪರಾಮರ್ಶಿಸಿಯೇ ನಿರ್ಮಾಣಕ್ಕೆ ಕೈ ಹಾಕುತ್ತಿದ್ದರು. ಇನ್ನು ತಮ್ಮ ಚಿತ್ರದಲ್ಲಿ ನಟಿಸುವ ಹೀರೋಯಿನ್‌ಗಳನ್ನ ಜಾಗೂರಕತೆಯಿಂದ ಆಯ್ದುಕೊಳ್ಳುತ್ತಿದ್ದರು. ಪಾರ್ವತಮ್ಮ ಆರಿಸಿಕೊಟ್ಟ ಹಲವು ನಟಿಯರು ನಂತರ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗವನ್ನ ನೋಡಿದ್ದಾರೆ. ಅವರಲ್ಲಿ ಪ್ರಮುಖರು, ಸುಧಾರಾಣಿ, ಮಾಲಾಶ್ರಿ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್,  ರಕ್ಷಿತಾ ಮತ್ತು ರಮ್ಯಾ. ಇನ್ನು ಹಲವಾರು ಪರಭಾಷಾ ನಟಿಯರನ್ನೂ ಕೂಡ ಕನ್ನಡಿಗರಿಗೆ ಪಾರ್ವತಮ್ಮ ಪರಿಚಯಿಸಿದ್ದರು. ತಮ್ಮ ಪುತ್ರರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರ ಮೊದಲ ಚಿತ್ರಗಳನ್ನ ತಾವೇ ನಿರ್ಮಿಸಿ, ಅವರ ಭವಿಷ್ಯವನ್ನ ರೂಪಿಸಿಕೊಟ್ಟಿರುವ ಪಾರ್ವತಮ್ಮ, ತಮ್ಮ ಮೊಮ್ಮಗ ವಿನಯ್‌ ರಾಜ್‌ಕುಮಾರ್‌ ಅವರಿಗೂ ಮೊದಲ ಚಿತ್ರಗಳನ್ನ ನಿರ್ಮಾಣ ಮಾಡಿಕೊಟ್ಟು, ಭವಿಷ್ಯದ ದಾರಿ ತೋರಿಸಿದ್ದಾರೆ.
ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹಂಚಿಕೆದಾರರಾಗಿಯೂ ಅಷ್ಟೇ ಚಾಣಾಕ್ಷತೆಯಿಂದ ಕೆಲಸ ಮಾಡಿದ್ದ ಪಾರ್ವತಮ್ಮ, ಅಲ್ಲಿಯೂ ಯಶಸ್ಸು ಕಂಡಿದ್ದಾರೆ.  ಕನ್ನಡ ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಲ್ಲದೆ, ಈ ನಮ್ಮ ಕನ್ನಡದ ವಜ್ರೇಶ್ವರಿಗೆ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಲಭಿಸಿದ್ದವು.
ಯಶಸ್ವಿ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗದ ಹಲವರಿಗೆ ಭವಿಷ್ಯ ರೂಪಿಸಿಕೊಟ್ಟು, ತಮ್ಮ ಜೊತೆ ಜೊತೆಗೆ ಪ್ರತಿಭಾವಂತರನ್ನೂ ಬೆಳೆಸಿದ ಪಾರ್ವತಮ್ಮ ಈಗ ಇತಿಹಾಸದ ಪುಟ ಸೇರಿದ್ದಾರೆ. ಕನ್ನಡದ ಮೊದಲ ಮಹಿಳಾ ಚಿತ್ರ ನಿರ್ಮಾಪಕಿಯಾಗಿದ್ದ ಪಾರ್ವತಮ್ಮ ಇನ್ನು ನೆನಪು ಮಾತ್ರ. ಸ್ವತಃ ಅವರೇ ಹುಟ್ಟುಹಾಕಿ, ಬೆಳೆಸಿಕೊಟ್ಟ ವಜ್ರೇಶ್ವರಿ ಕಂಬೈನ್ಸ್‌ ಎಂದೆಂದಿಗೂ ಕನ್ನಡ ಚಿತ್ರರಂಗದಲ್ಲಿ ವಿರಾಜಮಾನವಾಗಿರಲಿ, ಆ ಮೂಲಕ ಕನ್ನಡದ ವಜ್ರೇಶ್ವರಿ ಪಾರ್ವತಮ್ಮ ಸದಾ ನಮ್ಮ ಜೊತೆಗಿರಲಿ.

Comments are closed.

Social Media Auto Publish Powered By : XYZScripts.com