ದುಡಿಯುವ ಎತ್ತಿಗೆ ಹುಲ್ಲು ಹಾಕಿ, ಕಳ್ಳೆತ್ತಿಗೆ ಹುಲ್ಲು ಹಾಕಬೇಡಿ : ಸಿ.ಎಂ ಸಿದ್ದರಾಮಯ್ಯ

ಮೈಸೂರು: ದುಡಿಯುವ ಎತ್ತಿಗೆ ಹುಲ್ಲು ಹಾಕಿ, ಅದರ ಹೊರತು ಕಳ್ಳೆತ್ತಿಗೆ ಹುಲ್ಲು ಹಾಕಬೇಡಿ, ನಾವು ಒಳ್ಳೆಯ ಕೆಲಸ ಮಾಡಿದ್ದೇವೆ, ಇದಕ್ಕೆ ನೀವು ಕೂಲಿ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬುಧವಾರ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದ ಬಳಿ ಆಯೋಜಿಸಲಾಗಿದ್ದ ಸರ್ಕಾರಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿ.ಎಂ ಸಿದ್ದರಾಮಯ್ಯ,  ಉಪ್ಪು ಕೊಟ್ಟವರನ್ನು ಮುಪ್ಪಿನ ತನಕ ನೆನೆದುಕೊಳ್ಳಬೇಕು. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಈ ಮಾತನ್ನು ನೆನಪಿನಲ್ಲಿಟ್ಟುಕೊಂಡು 2018ರ ಚುನಾವಣೆಯಲ್ಲಿಯೂ ನಮ್ಮನ್ನ ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಇನ್ನು ಬಿಜೆಪಿ ಪಕ್ಷದ ಕುರಿತು ಮಾತನಾಡಿದ ಅವರು, ಬಿಜೆಪಿಯವರು ಈಗಾಗಲೇ  ಗೆದ್ದಾಯಿತು ಎಂದುಕೊಂಡಿದ್ದಾರೆ, ಆದರೆ ರಾಜ್ಯದ ಮತದಾರರು ಬುದ್ಧಿವಂತರು. ಒಳ್ಳೆಯ ಕಾರ್ಯ ಮಾಡುವವರನ್ನು ಎಂದೂ ಕೂಡ ಮರೆಯುವುದಿಲ್ಲ. ಹೀಗಾಗಿ 2018 ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ  ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪ ನರೇಂದ್ರಮೋದಿಯವರ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯದ ರೈತರು ಮಾಡಿರುವ ಸಾಲ ಮನ್ನಾ ಮಾಡಿಸಲಿ ಎಂದು ಆಗ್ರಹಿಸಿದ ಸಿದ್ದರಾಮಯ್ಯ, ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತೇನೆ, ಆ ಮೇಲೆ ನಾನು ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇನೆ ಎಂದು ಅತ್ಯಂತ ಮಾರ್ಮಿಕವಾಗಿ ನುಡಿದರು.
ವಿರೋಧ ಪಕ್ಷದ ವಾಗ್ದಾಳಿಗಳ ಕುರಿತಾಗಿ ಮಾತನಾಡಿದ ಸಿದ್ದರಾಮಯ್ಯ,  ಬಿಜೆಪಿ, ಜೆಡಿಎಸ್ ನವರು ಏನೇ ಹೇಳಿಕೊಂಡು ತಿರುಗಿದರೂ, ಎಚ್.ಡಿ ದೇವೇಗೌಡರು ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದೇ ತನ್ನ ಗುರಿಯೆಂದು ಘೋಷಣೆ ಮಾಡಿದರೂ,  ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಾವೇ ಎಂದರು.
ಪಿರಿಯಾಪಟ್ಟಣ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದ ಸಿದ್ದರಾಮಯ್ಯನವರಿಗೆ ಸಚಿವರಾದ ಎಚ್. ಆಂಜನೇಯ, ರಮೇಶ್ ಕುಮಾರ್,  ಎಂ.ಬಿ ಪಾಟೀಲ್,  ಡಾ. ಎಚ್.ಸಿ. ಮಹದೇವಪ್ಪ, ರೋಷನ್ ಬೇಗ್, ಸ್ಥಳೀಯ ಶಾಸಕ ವೆಂಕಟೇಶ್ ಮೊದಲಾದ ಪ್ರಮುಖರು ಸಾಥ್‌ ನೀಡಿದರು.

Comments are closed.