ವಾಗ್ಮಿ, ಪ್ರಬಂಧಕಾರ, ಲೇಖಕ- ಇಂಗ್ಲಿಷ್ ಪ್ರಾಧ್ಯಾಪಕ ವೀರೇಂದ್ರ ಸಿಂಪಿ ಇನ್ನಿಲ್ಲ…

ಬೀದರ್: ಪ್ರಸಿದ್ಧ ಪ್ರಬಂಧಕಾರ, ವಾಗ್ಮಿ, ಲೇಖಕ ವೀರೇಂದ್ರ ಸಿಂಪಿ (79) ಅವರು ಮಂಗಳವಾರ ಬೀದರಿನಲ್ಲಿ ನಿಧನರಾದರು. ಹಿರಿಯ ಜಾನಪದ ತಜ್ಞ, ಲೇಖಕ ಸಿಂಪಿ ಲಿಂಗಣ್ಣ ಅವರ ಪುತ್ರರಾಗಿದ್ದ ವೀರೇಂದ್ರ ಅವರು ಬೀದರಿನ ಬಿ.ವಿ.ಬಿ. ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.


ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ (14 ಅಕ್ಟೋಬರ್ 1938). ತಂದೆ ಪ್ರಸಿದ್ಧ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ (1962) ಪಡೆದರು.
ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಉದ್ಯೋಗ ಪ್ರಾರಂಭಿಸಿದ ಅವರು 1999ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಆಂಭಿಸಿದರು. ‘ಖೊಟ್ಟಿ ನಾಣ್ಯ’ ಎಂಬ ಕಥೆ ‘ಸಂಗಮ’ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಏಕಲವ್ಯ ಎಂಬ ಹಿಂದಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ‘ಅಸಂತೋಷವೇಕೆ?’ ಪ್ರಬಂಧ ಬರೆದು ಅಂತರ ಕಾಲೇಜು ಸ್ಪರ್ಧೆಯಲ್ಲಿ ಪಡೆದ ಬಹುಮಾನ ತಮ್ಮದಾಗಿಸಿಕೊಂಡರು.
ಇಂಗ್ಲಿಷ್ ಪ್ರಾಧ್ಯಾಪಕರಾದರೂ ಕನ್ನಡದಲ್ಲಿಯೇ ಬರವಣಿಗೆ ನಡೆಸಿದರು. ಪ್ರಬಂಧ ಬರಹಗಾರ ಹಾಗೂ ಅಂಕಣಕಾರರೆಂದೇ ಚಿರಪರಿಚಿತರು. ಕಾಗದದ ಚೂರು, ಭಾವ ಮೈದುನ, ಸ್ವಚ್ಛಂದ ಮನದ ಸುಳಿಗಾಳಿ, ಪರಸ್ಪರ ಸ್ಪಂದನ, ಲಲಿತ ಪ್ರಬಂಧಗಳು, ಆಯ್ದ ಲಲಿತ ಪ್ರಬಂಧಗಳು. ಚನ್ನಬಸವಣ್ಣನವರ ವಚನಗಳು, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಸಂಪಾದಿತ ಕೃತಿಗಳು. ಅಂಕಣ ಬರಹ/ವೈಚಾರಿಕ ಲೇಖನಗಳು- ಜೀವನವೆಂದರೇನು ? ಸುಖಸಾಧನ, ಬಣ್ಣಗಾರಿಕೆ, ಯೋಗಾರಂಭ, ಕನ್ನಡದಲ್ಲಿ ಲಲಿತ ಪ್ರಬಂಧಗಳು, ಗಾಯ್ ಡಿ ಮೊಪಾಸನ ಕಥೆಗಳು, ಸಿಂಪಿ ಲಿಂಗಣ್ಣನವರ ಸಾಹಿತ್ಯ, ಇಂಡಿ ತಾಲ್ಲೂಕ ದರ್ಶನ. ಜೀವನಚರಿತ್ರೆ-ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆಯ್ದಕ್ಕಿ ಮಾರಯ್ಯ, ಮಾದಾರ ಚೆನ್ನಯ್ಯ, ಚನ್ನಬಸವಣ್ಣ, ಆರ್.ವಿ. ಬಿಡಪ್, ಹತ್ತು ಪಾಶ್ಚಾತ್ಯ ಕಾದಂಬರಿಕಾರರು.

ರಾಜ್ಯೋತ್ಸವ ಪ್ರಶಸ್ತಿ ಹಾಗೂ ಭಾವಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಪಡೆದಿದ್ದ ಅವರ ಸ್ವಚ್ಛಂದ ಮನದ ಸುಳಿಗಾಳಿ ಪ್ರಬಂಧ ಸಂಕಲನವು ಕರ್ನಾಟಕ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಿ.ಎ. ಪಠ್ಯವಾಗಿತ್ತು. ಪರಿಸರ ಸ್ಪಂದನ ಕೃತಿಗೆ ಗುಲಬರ್ಗಾ ವಿ.ವಿ.ದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿದ್ದರು. ವಿಜಾಪುರ ಹಾಗೂ ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರದಾಗಿತ್ತು.

Comments are closed.

Social Media Auto Publish Powered By : XYZScripts.com