ಕೊನೆಗೂ ಅಂದರ್‌ ಆದ ಖಾಸನೀಸ್‌ ಸಹೋದರರು : ಕೋರ್ಟ್‌ಗೆ ಹಾಜರುಪಡಿಸಿದ ಸಿಐಡಿ..

ಧಾರವಾಡ: ಬಹುಕೋಟಿ ವಂಚನೆ ಆರೋಪಿಗಳಾದ ಮೂವರು ಖಾಸನೀಸ್ ಸಹೋದರರನ್ನ ಮೊಬೈಲ್ ಕರೆ ಆಧಾರದ ಮೇಲೆ ಮಂಗಳವಾರ ಸಿಐಡಿ ಪೊಲೀಸರು ಬಂಧಿಸಿದ್ದು,  ಧಾರವಾಡದ ಮೊದಲನೇಯ ಜೆಎಮ್ ಎಪ್ ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಿದ್ದಾರೆ. ‌ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಖಾಸನೀಸ್ ಸಹೋದರರನ್ನು ಜೂನ್ 7ರವರೆಗೆ ಸಿಐಡಿ ಪೊಲೀಸರು ವಶಕ್ಕೆ ನೀಡಿದೆ. ಅಲ್ಲದೇ  ಜೂನ್ 3ರ ಒಳಗಾಗಿ ಜಾಮೀನು  ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದೆ.
ಮಥುರಾ ಹಾಗೂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಸತ್ಯಭೋದ,ಸಂಜೀವ ಹಾಗೂ ಶ್ರೀಕಾಂತ ಎಂಬ ಖಾಸನೀಸ್ ಸಹೋದರರು, ಜನರಿಗೆ ಹಣ ದ್ವಿಗುಣಗೊಳಿಸುವುದಾಗಿ ಹೇಳಿ 600ಕೋಟಿಗೂ ಹೆಚ್ಚು ವಂಚನೆ ಮಾಡಿ ಪರಾರಿಯಾಗಿದ್ದರು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಸಹೋದರರು ಬಹುಕೋಟಿ ವಂಚನೆ ನಡೆಸಿದ್ದ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿದ್ದವು.
ಕಲಘಟಗಿ ಪಟ್ಟಣದಲ್ಲಿ ವಾಸವಿದ್ದ ಖಾಸನೀಸ್ ಸಹೋದರರು ಮಾಡಿದ ಈ ಹಣ ವಂಚನೆ ಇಡೀ ರಾಜ್ಯಾದ್ಯಂತ ಸುದ್ದಿಯಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ಕಳೆದ ಏಪ್ರಿಲ್‌ 8ರಂದು ಖಾಸನೀಸ್ ಸಹೋದರರು ನಾಪತ್ತೆಯಾಗಿದ್ದರು. ಪೊಲೀಸರಿಗೆ ತಲೆನೋವಾಗಿದ್ದ ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ವಹಿಸಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಸಿಐಡಿ ತಂಡಕ್ಕೂ ಆರಂಭದಲ್ಲೇ ಖಾಸನಿಸ್ ಸಹೋದರರನ್ನ ಪತ್ತೆ ಹಚ್ಚುವುದು ಸಾಕಷ್ಟು ಕಷ್ಟದ ಕೆಲಸವಾಗಿತ್ತು. ಆದರೆ ಅವರ ಮೊಬೈಲ್ ಕರೆಯ ಆಧಾರದ ಮೇಲೆ ಆರೋಪಿಗಳನ್ನ ಸಿಬಿಐ ಪೊಲೀಸರು ಪತ್ತೆ ಹಚ್ಚಿದ್ದಾರೆ.

Comments are closed.