ಬಹುನಿರೀಕ್ಷಿತ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ : ಪ್ರತೀಕ್ ಎಸ್ ನಾಯಕ್‌ಗೆ ಪ್ರಥಮ ರ‍್ಯಾಂಕ್‌

ಬೆಂಗಳೂರು : ದ್ವಿತೀಯ ಪಿ.ಯೂ.ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಇಟಿ ಬೋರ್ಡ್ ನಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಫಲಿತಾಂಶವನ್ನ ಪ್ರಕಟಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಈಗಾಗಲೇ ಫಲಿತಾಂಶ ಲಭ್ಯವಾಗುತ್ತಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಎಕ್ಸಫರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ಎಸ್ ನಾಯಕ್ ಪ್ರಥಮ ರ‍್ಯಾಂಕ್‌ ಪಡೆದುಕೊಂಡಿದ್ದು, ಬೆಂಗಳೂರು ವಿವಿಎಸ್ ಸರ್ದಾರ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಮಂತ್ ಆರ್ ಹೆಗಡೆ ದ್ವಿತೀಯ ರ‍್ಯಾಂಕ್‌ ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರಿನ ಜಯನಗರದ ಆರ್‌.ವಿ ಪಿ.ಯೂ ಕಾಲೇಜಿನ ಅನಿರುಧ್ ಎಸ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಹೋಮಿಯೋಪತಿ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ರಕ್ಷಿತಾ ರಮೇಶ್, ಬೆಂಗಳೂರಿನ ಮಹಾವೀರ್‌ ಜೈನ್‌ ಕಾಲೇಜು ವಿದ್ಯಾರ್ಥಿನಿಯಾಗಿದ್ದು,  ಶೇ. 98 ಅಂಕ ಪಡೆದಿದ್ದಾರೆ.  ಇನ್ನು ಎರಡನೇ ರ್ಯಾಂಕ್ ಪಡೆದ ವಿಕ್ಟರ್ ಥಾಮಸ್, ದಾವಣಗೆರೆಯ ವೈಷ್ಣವಿ ಚೇತನ ಪಿಯು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಬೀದರ್‌ನ  ಇಂಡಿಪೆಂಡೆಂಟ್ ಕಾಲೇಜು ವಿದ್ಯಾರ್ಥಿ ಶಹೀನ್ ನಾಸೀರ್ ಹುಸೇನ್ ಮೂರನೇ ರ್ಯಾಂಕ್ ಪಡೆದಿದ್ದಾರೆ.
ಬಿಎಸ್ ಸಿ ಅಗ್ರಿಕಲ್ಚರ್ ವಿಭಾಗದಲ್ಲಿಯೂ ಮಹಾವೀರ್ ಜೈನ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ರಮೇಶ್ ಗೆ ಮೊದಲ ರ‍್ಯಾಂಕ್‌ ದಕ್ಕಿದ್ದು,  ದ್ವಿತೀಯ ರ‍್ಯಾಂಕ್‌ನ್ನ ದೆಹಲಿ ಪಬ್ಲಿಕ್‌ ಸ್ಕೂಲ್‌ನ ಸಂಕೀರ್ತ ಸದಾನಂದ ಪಡೆದುಕೊಂಡಿದ್ದಾರೆ. ವಿವಿಪುರಂನಲ್ಲಿರುವ ಮಹಾವೀರ್ ಜೈನ್ ಪಿಯು ಕಾಲೇಜು ವಿದ್ಯಾರ್ಥಿನಿ ಬಿ.ಸಿ ಅನನ್ಯ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ.
ಬಿ.ಫಾರ್ಮ ವಿಭಾಗದಲ್ಲಿ  ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ಪ್ರತೀಕ್ ಎಸ್ ನಾಯಕ್  ಮೊದಲ ರ‍್ಯಾಂಕ್‌ ಪಡೆದುಕೊಂಡರೆ, ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ವಿದ್ಯಾರ್ಥಿ ಸುಮಂತ್ ಹೆಗಡೆ ಎರಡನೇ ಟಾಪರ್‌ ಆಗಿದ್ದಾರೆ. ಮತ್ತು ಈ ವಿಭಾಗದ ಮೂರನೇ ಟಾಪರ್  ಬೆಂಗಳೂರಿನ  ಕನಕಪುರ ರಸ್ತೆಯಲ್ಲಿರುವ ದೃವ ಶ್ರೀರಾಮ್ ದೀಕ್ಷಾ ಸಿ ಎಫ್ ಎಲ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.
ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ’ ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದೆ

Comments are closed.