ನಾನು ನಿರಪರಾಧಿ ಎಂದು ಸಾಬೀತಾಗಿದ್ದಕ್ಕೆ ಸಂತೋಷವಾಗಿದೆ : ಮಾಜಿ ಸಚಿವ ಹೆಚ್‌.ವೈ ಮೇಟಿ

ಬಾಗಲಕೋಟೆ: ನಾನು ನಿರಪರಾಧಿ ಎಂದು ಸಾಬೀತಾಗಿದ್ದಕ್ಕೆ ಸಂತೋಷವಾಗಿದೆ, ನನ್ನ ಮೇಲಿನ ಆರೋಪಕ್ಕೆ ಕ್ಲೀನ್‌ಚಿಟ್‌ ಸಿಕ್ಕಿದೆ ಎಂಬ ಸುದ್ದಿ ಮಾಧ್ಯಮಗಳಿಂದ ತಿಳಿಯಿತು ಎಂದು ಮಾಜಿ ಸಚಿವ ಹೆಚ್‌.ವೈ ಮೇಟಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಗಲಕೋಟೆಯ ತಮ್ಮ ಮನೆಯಿಂದಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,  ಮೊದಲಿನಿಂದಲೂ ನಾನು ನಿರಪರಾಧಿ ಎಂಬುದು ಗೊತ್ತಿತ್ತು. ಆದರೂ ಅಂತಿಮ ವರದಿ ಬರುವವರೆಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ.
ಒಂದೆಡೆ ಮನಸ್ಸಿಗೆ ನೋವಾಗುತ್ತಿತ್ತು. ನಿರಪರಾಧಿಯಾಗಿದ್ದರೂ ಮಾನಸಿಕ ವ್ಯಥೆ ಅನುಭವಿಸಿದ್ದೇನೆ. ಅಂತಿಮ ವರದಿಯಿಂದ ಮನಸಿಗೆ ನೆಮ್ಮದಿ ಸಿಕ್ಕಿದೆ ಎಂದಿದ್ದಾರೆ. ನಾನು ತಪ್ಪು ಮಾಡಿಲ್ಲ. ಆದರೂ ನನಗೆ ಏಕೆ ಹೀಗೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ  ಹೈಕಮಾಂಡ್ ಟಿಕೆಟ್ ನೀಡಿದಲ್ಲಿ ಮತ್ತೆ ಬಾಗಲಕೋಟೆಯಿಂದಲೇ ಸ್ಪರ್ಧೆ ಮಾಡುತ್ತೆನೆ ಎಂದಿರುವ ಮೇಟಿ,  ಮತ್ತೆ ಸಚಿವ ಸ್ಥಾನ ಕೊಡುವುದು ಸಿಎಂ ಅವರಿಗೆ ಬಿಟ್ಟಿದ್ದು, ಸಚಿವ ಸ್ಥಾನ ನೀಡಿದಲ್ಲಿ ನಿಭಾಯಿಸುತ್ತೇನೆ ಎಂದಿದ್ದಾರೆ. ಮೇಟಿ ಸಿಡಿ ಪ್ರಕರಣಕ್ಕೆ ಕ್ಲೀನಚಿಟ್ ಸುದ್ದಿ ಹರಡುತ್ತಿದ್ದಂತೆ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ನವನಗರದಲ್ಲಿರೋ ಮಾಜಿಸಚಿವ ಮೇಟಿ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಮಹಿಳೆಯೊಬ್ಬರ ಜತೆ ಕಾಮಕೇಳಿ ನಡೆಸಿದ್ದಾರೆ ಎನ್ನಲಾದ ದೃಶ್ಯಾವಳಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಅಬಕಾರಿ ಸಚಿವ  ಎಚ್.ವೈ. ಮೇಟಿ 2016ರ ಡಿಸೆಂಬರ್‌ 14ರಂದು ರಾಜೀನಾಮೆ ನೀಡಿದ್ದರು. ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದಿದ್ದ  ಕಾಮಕೇಳಿ ಪ್ರಕರಣದ ದೃಶ್ಯಾವಳಿಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಟಿ ಅವರನ್ನು ತಮ್ಮ ಗೃಹ ಕಚೇರಿ ಕೃಷ್ಣಾಗೆ ಕರೆಸಿಕೊಂಡು ರಾಜೀನಾಮೆ ಪಡೆದಿದ್ದರು.  ಅನಂತರ ಅಬಕಾರಿ ಸಚಿವರ ರಾಜೀನಾಮೆ ಪತ್ರವನ್ನು   ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮುಖ್ಯಮಂತ್ರಿ ರವಾನಿಸಿದ್ದರು. ರಾಜ್ಯಪಾಲರು ಅಂದೇ ರಾಜೀನಾಮೆ ಅಂಗೀಕರಿಸಿದ್ದರು.

Comments are closed.

Social Media Auto Publish Powered By : XYZScripts.com