ಯಡ್ಡಿ ಆರೋಪದಲ್ಲಿ ಹುರುಳಿಲ್ಲ : 75 ವಯಸ್ಸಿನ ಯಡಿಯೂರಪ್ಪ ಆರೋಗ್ಯದ ಕಾಳಜಿ ವಹಿಸಲಿ : ಎಂ.ಬಿ ಪಾಟೀಲ್‌

ಬೆಂಗಳೂರು:  400 ಕೋಟಿ ಯೋಜನೆಯನ್ನು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಮಹದಾಯಿ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾದ ಬಿಜೆಪಿ ನಾಯಕರು ಆ ಭಾಗದಲ್ಲಿ ಪಕ್ಷಕ್ಕೆ ಹೊಡೆತ ಬೀಳಲಿದೆ ಎಂಬ ಕಾರಣಕ್ಕೆ ಇಂಥ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪನವರ ಹೇಳಿಕೆಗೆ ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಅವರು, ಮಲಪ್ರಭ ನಾಲಾ ಆಧುನೀಕರಣ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದರೆ ಇನ್ನೂ ಹೊಡೆತ ಹೆಚ್ಚಾಗುವುದೆಂಬ ಭೀತಿಯಿಂದ ಯೋಜನೆಯನ್ನು ತಡೆಗಟ್ಟಲು ಇಂಥ ಆರೋಪಗಳನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದರು. ಮಲಪ್ರಭ ಜಲಾಶಯದ ನಾಲೆಗಳ ಆಧುನೀಕರಣ ಯೋಜನೆಯ  ಕಾಮಗಾರಿಗಳಿಗೆ ಇನ್ನೂ ಟೆಂಡರ್ ಕರೆದಿಲ್ಲ. ಟೆಂಡರ್‌ ಕೂಡ ಕರೆಯದ ಯೋಜನೆಯಲ್ಲಿ ಅಕ್ರಮ ನಡೆದಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮಲಪ್ರಭ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು ದುಸ್ಥಿತಿಯಲ್ಲಿರುವ ಕಾರಣ . ಅವುಗಳನ್ನು ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಆಧುನೀಕರಣ ಮಾಡಬೇಕೆಂಬ ಬಗ್ಗೆ ಸಮಗ್ರ ಯೋಜನೆ ಸಿದ್ದವಾಗಿದೆ ಆದರೆ ಅದಕ್ಕಿನ್ನೂ ಟೆಂಡರ್ ಕರೆದಿಲ್ಲ ಎಂದು ಸಚಿವ ಎಂಬಿ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. 2013-14 ರಲ್ಲಿ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೆ ಕಪ್ಪು ಮಣ್ಣು ಪರೀಕ್ಷೆ ಹಾಗೂ ಸರ್ವೆ ಮಾಡದಿದ್ದರೂ 964 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯನ್ನು ನಾಲೆಗಳ ಆಧುನೀಕರಣಕ್ಕಾಗಿ ತಯಾರಿಸಲಾಗಿತ್ತು. ಆದರೆ ನಮ್ಮ ಸರ್ಕಾರ,  ನೀರಾವರಿ ತಜ್ಞರಿಂದ ಎಲ್ಲ ರೀತಿಯ ಅಧ್ಯಯನ ನಡೆಸಿ ಅತ್ಯಂತ ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದಿರುವ ಪಾಟೀಲ್‌, ಈಗ ಸಿದ್ಧಗೊಂಡಿರುವ ಯೋಜನೆಗೆ 1120 ಕೋಟಿ ಅಂದಾಜು ಮಾಡಿದ್ದೇವೆ ಎಂದಿದ್ದಾರೆ.
ಯಡಿಯೂರಪ್ಪನವರು ನಮಗೆ ಹಿರಿಯರು. ಅವರ ಬಗ್ಗೆ ಅಪಾರ ಗೌರವವಿದೆ ಎಂದಿರುವ ಎಂ.ಬಿ ಪಾಟೀಲ್‌ 75 ವರ್ಷದ ಯಡಿಯೂರಪ್ಪ ತಮ್ಮ ಆರೋಗ್ಯವನ್ನ ಮೊದಲು ಕಾಪಾಡಿಕೊಳ್ಳಲಿ ಎಂದಿದ್ದಾರೆ.  ಯಾವುದೇ ದಾಖಲೆಗಳನ್ನು ಪರಿಶೀಲಿಸದೆ, ಮಾಹಿತಿ ಪಡೆಯದೆ ಇಂಥ ಆರೋಪಗಳನ್ನು ನೀಡಿರುವುದು ಮೂರ್ಖತನ ಎಂದು ಅಭಿಪ್ರಾಯ ಪಟ್ಟ ಸಚಿವ ಪಾಟೀಲ್‌, ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನ ನೀಡುವುದು ಯಡಿಯೂರಪ್ಪನವರ ವರ್ಚಸ್ಸಿಗೆ ಶೋಭೆ ತರುವುದಿಲ್ಲ ಎಂದರು.
ಆಲಮಟ್ಟಿ ಅಣೆಕಟ್ಟೆಯಿಂದ ಜಿಂದಾಲ್‌ಗೆ 7 ಟಿ.ಎಂ.ಸಿ. ನೀರು ಬಿಡುಗಡೆ ಮಾಡುವ ಮೂಲಕ ಅಕ್ರಮವೆಸಗಿದ್ದಾರೆ ಎಂದು ಯಡಿಯೂರಪ್ಪನವರು ಮಾಡಿರುವ ಆರೋಪವನ್ನೂ ತಳ್ಳಿ ಹಾಕಿರುವ ಎಂ.ಬಿ ಪಾಟೀಲ್‌,  90 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಜಿಂದಾಲ್ ಬೇಡಿಕೆ ಇಟ್ಟಿತ್ತು. ಆದರೆ ನಾವು ಪ್ರತಿನಿತ್ಯ 25 ಕ್ಯೂಸೆಕ್ಸ್ ನೀರು ಕೊಡುತ್ತಿದ್ದು, ತಿಂಗಳಿಗೆ 0.6 ಟಿ.ಎಂ.ಸಿ. ಆಗುತ್ತದೆ. ಟಿ.ಎಂ.ಸಿ. ಎಂದರೆ ಎಷ್ಟು ನೀರು ಎಂಬುದನ್ನ ಮಾಜಿ ನೀರಾವರಿ ಸಚಿವ ಬಸವರಾಜು ಬೊಮ್ಮಾಯಿಯವರನ್ನ ಕೇಳಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com