ಎಂ.ಬಿ ಪಾಟೀಲ್‌ ಜಲಾಶಯ ಬರಿದು ಮಾಡಿ ಜಿಂದಾಲ್‌ಗೆ ನೀರು ಹರಿಸಿದ್ದಾರೆ : ಬಿ.ಎಸ್‌.ಯಡಿಯೂರಪ್ಪ

ಹಾವೇರಿ: ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌ ಆಲಮಟ್ಟಿ ಅಣೆಕಟ್ಟೆಯಿಂದ ಜಿಂದಾಲ್‌ಗೆ ಪ್ರತಿನಿತ್ಯ 7ಟಿ.ಎಂ.ಸಿ ನೀರು ಹರಿಸಿದ್ದಾರೆ, ಈ ಹಗರಣದಲ್ಲಿ ಸಿಎಂ ಪಾಲೆಷ್ಟು ಮತ್ತು ಸಚಿವರ ಪಾಲೆಷ್ಟು ಎಂಬುದನ್ನ ನಾವು ಬಯಲಿಗೆಳೆಯಲಿದ್ದೇವೆ ಎಂದು ಬಿಎಸ್‌ ಯಡಿಯೂರಪ್ಪ ಘೋಷಿಸಿದ್ದಾರೆ. ಬುಧವಾರ ಹಾವೇರಿಯ ಶಿಗ್ಗಾವಿಯಲ್ಲಿ ಮಾತನಾಡಿದ ಅವರು, ನಾನೂರು ಕೋಟಿ ರೂಪಾಯಿಗಳ ಯೋಜನೆಯಾಗಿದ್ದ  ಮಲಪ್ರಭ ಜಲಾಶಯದ ನಾಲೆಗಳ ಆಧುನೀಕರಣ ಯೋಜನೆಯನ್ನ ಸಾವಿರ ಕೋಟಿಗೆ ಏರಿಸಿದ್ದಾರೆ ಎಂದು ಎಂ.ಬಿ ಪಾಟೀಲ್‌ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು, ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ ಸಾವು ಪ್ರಕರಣದ ಕುರಿತು ಮಾತನಾಡಿದ ಬಿ.ಎಸ್‌.ವೈ,  ಐಎಎಸ್ ಅಧಿಕಾರಿಗೆ ಕಿರುಕುಳ ಕೊಟ್ಟು,  ಬ್ರಷ್ಟಾಚಾರದ ಹಗರಣಗಳು ಬಯಲಾಗುತ್ತದೆ ಎಂಬ ಭಯದಲ್ಲಿ ಸರ್ಕಾರ ತಿವಾರಿ ಸಾವಿಗೆ ಕಾರಣವಾಗಿದೆಯಾ ಎಂಬ ಬಗ್ಗೆ ಮತ್ತು ಅವರು ಉತ್ತರ ಪ್ರದೇಶಕ್ಕೆ ಹೋದಾಗ ಸಾವು ಆಗಿದ್ದು ಏಕೆ? ಎಂಬ ಎಲ್ಲ ವಿಷಯಗಳ ಬಗ್ಗೆ ತನಿಖೆ ಅಗಬೇಕು ಎಂದಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಾಗಿದೆ. ಬ್ರಷ್ಟ ಆಧಿಕಾರಿಗಳಿಗೆ ರಾಜ್ಯದಲ್ಲಿ ರಕ್ಷಣೆ ಇದೆ. ಹೀಗಾಗಿ ಸರಕಾರಕ್ಕೆ ಪಾಠ ಕಲಿಸಬೇಕಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಮ್ಮ ರಾಜ್ಯ ಪ್ರವಾಸದ ಬಗ್ಗೆ ಸಮರ್ಥನೆ ನೀಡುತ್ತಾ, ದಲಿತಕೇರಿಗೆ ಕೇವಲ ತಿಂಡಿ ತಿನ್ನಲು ಬರ್ತಿಲ್ಲ. ಅಲ್ಲಿನ ಸಮಸ್ಯೆಗಳನ್ನ ಅರಿತು, ಪರಿಹಾರ ಕಂಡುಕೊಳ್ಳೋ ನಿಟ್ಟಿನಲ್ಲಿ ಭೇಟಿ ನೀಡುತ್ತಿದ್ದೇವೆ ಎಂದರು. ಕೇಂದ್ರ ಸರಕಾರ ಕೊಟ್ಟ ಹಣವನ್ನ ಬಿಡುಗಡೆ ಮಾಡೋ ಯೋಗ್ಯತೆ ಇಲ್ಲದಿರೋ ಸರಕಾರ ಎಂದು ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ತೋರ್ಪಡಿಸಿದ ಯಡಿಯೂರಪ್ಪ ರೈತರ ಜೊತೆ ಸರಕಾರ ಚೆಲ್ಲಾಟ ಮಾಡುತ್ತಿದೆ,  ರೈತರ ಸಾಲಮನ್ನಾಕ್ಕೆ ಆಗದೇ ಇದ್ದರೆ ಎರಡು ತಿಂಗಳಲ್ಲಿ ನಾಲ್ಕೈದು ಲಕ್ಷ ಜನ ರೈತರನ್ನ ಸೇರಿಸಿ ಸರಕಾರದ ಮೂಗು ಹಿಂಡಿ ಸಾಲಮನ್ನಾ ಮಡಿಸುತ್ತೇವೆ ಎಂದು ಘೋಷಿಸಿದ್ದಾರೆ.
ಬುಧವಾರ ಬಿ.ಎಸ್‌ ಯಡಿಯೂರಪ್ಪ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣಕ್ಕೆ ಭೇಟಿ ನೀಡಿದ್ದು, ಅಲ್ಲಿಯ ದಲಿತಕೇರಿಯ ಹನುಮಂತಪ್ಪ ಶಿಗ್ಗಾಂವಿ ಎಂಬುವವರ ಮನೆಯಲ್ಲಿ ಉಪಹಾರ ಸೇವನೆ ಮಾಡಿದರು.  ಸಂಸದೆ ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿ, ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಎಂ.ಉದಾಸಿ ಮತ್ತು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಯಡಿಯೂರಪ್ಪನವರಿಗೆ ಸಾಥ್‌ ನೀಡಿದರು.

Comments are closed.

Social Media Auto Publish Powered By : XYZScripts.com