ಸುಮ್ಮನೇ ಆರೋಪಿಸುವುದು ಶೋಭಾಗೆ ಶೋಭೆ ತರುವುದಿಲ್ಲ : ದಿನೇಶ್‌ ಗುಂಡೂರಾವ್‌..

ಬೆಂಗಳೂರು: ಸುಮ್ಮಸುಮ್ಮನೆ ಆರೋಪ ಮಾಡುವುದು ಶೋಭಾಗೆ ಶೋಭೆ ತರುವುದಿಲ್ಲ. ಶೋಭಾ ಕರಂದ್ಲಾಜೆ ಆಹಾರ ಇಲಾಖೆ ಸಚಿವರಾಗಿದ್ದ ವೇಳೆಯೇ ಸಾಕಷ್ಟು ಹಗರಣ ನಡೆದಿದೆ. ಆದರೆ ಈಗ ಅವರು ಇಲ್ಲ ಸಲ್ಲದ ಆರೋಪದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದ್ದಾರೆ.  ಅನುರಾಗ್ ತಿವಾರಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು,  ಇಂಥ ಆರೋಪಗಳನ್ನ ಮಾಡುತ್ತಾ ಪತ್ರಿಕೆ ಹಾಗು ಟಿವಿಯಲ್ಲಿ ಸುದ್ದಿಯಲ್ಲಿರಬೇಕು ಎಂಬುದು ಅಭ್ಯಾಸ. ಈ ಹಿಂದೆ ಸಚಿವ ರೋಷನ್ ಬೇಗ್ ಮೇಲೆ ಇದೇ ರೀತಿ ಕೊಲೆ ಪ್ರಕರಣದಲ್ಲಿ ಆರೋಪ ಮಾಡಿದ್ದರು, ಈಗ ಏನಾಗಿದೆ ಎಂದು ಗೊತ್ತಿದೆ. ನಾವು ಈಗಾಗಲೇ ಸಿಬಿಐ ತನಿಖೆಯನ್ನು ಸ್ವಾಗತ ಮಾಡಿದ್ದೇವೆ. ತನಿಖೆ ನಡೆದು ಸತ್ಯಾಂಶ ಹೊರ ಬರಲಿ ಎಂದರು. ಅಲ್ಲದೆ, ಶೋಭಾ ಅವರ ಆರೋಪವನ್ನ ಗಂಭೀರವಾಗಿ ತಗೆದುಕೊಳ್ಳೋ ಅವಶ್ಯಕತೆ ಇಲ್ಲ ಎಂದಿದ್ದಾರೆ. ೧೫೦ ಕೋಟಿ ಹಗರಣವನ್ನ ತಿವಾರಿ ಬಯಲು ಮಾಡಲು ಹೊರಟಿದ್ದರು ಎಂಬ ವಿಚಾರದ ಬಗ್ಗೆ ಹೆಚ್ಚು ಮಾತನಾಡದ ಗುಂಡೂರಾವ್‌ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದಾರೆ. ತನಿಖೆಯಾಗ್ಲಿ ಎಲ್ಲವೂ ಗೊತ್ತಾಗುತ್ತೆ ಎಂದಷ್ಟೇ ಹೇಳಿದ್ದಾರೆ.

ಕಳೆದ ವರ್ಷ ಕೊಲೆಯಾಗಿದ್ದ ಆರ್‌ಎಸ್ಎಸ್‌ ಕಾರ್ಯಕರ್ತ ರುದ್ರೇಶ್ ಹತ್ಯೆಯ ಹಿಂದೆ ಸಚಿವ ರೋಷನ್ ಬೇಗ್ ಅವರ ಕೈವಾಡವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದರು. ಆದರೆ, ರುದ್ರೇಶ್‌ ಹತ್ಯೆಗೂ ರೋಷನ್‌ ಬೇಗ್‌ ಅವರಿಗೂ ಸಂಬಂಧವಿಲ್ಲ ಎಂದು ದೃಢಪಟ್ಟಿದೆ. ಈಗ ಅನುರಾಗ್‌ ತಿವಾರಿ ಸಾವು ಕೂಡ ಕೊಲೆ ಎಂದು ಶಂಕಿಸಿರುವ ಶೋಭಾ ಕರಂದ್ಲಾಜೆ, ಇದರಲ್ಲಿ ರಾಜ್ಯ ಕಾಂಗ್ರೆಸ್‌ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

Comments are closed.

Social Media Auto Publish Powered By : XYZScripts.com