ರೈತರ ಸಾಲ ಮನ್ನಾ ಮಾಡಿ, ಜಾನುವಾರುಗಳಿಗೆ ಮೇವು ನೀರು ಕೊಡಿ : ಬೀದಿಗಿಳಿದ ಜನತೆ..

ಬಳ್ಳಾರಿ: ಸಾಲ ಮನ್ನಾ ಮಾಡಿ ಮತ್ತು ಜಾನುವಾರುಗಳಿಗೆ ನೀರು ಮೇವು ಕೊಡಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಬಳ್ಳಾರಿಯ ಹಗರಿ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಿಂದುಳಿದ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ತಾಲೂಕು ಕಚೇರಿಗೆ ಕುರಿ ದನಕರುಗಳೊಂದಿಗೆ ಮುತ್ತಿಗೆ ಹಾಕುವ ಮೂಲಕ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನ ವ್ಯಕ್ತಪಡಿಸಿದರು.
ಹಗರಿಬೊಮ್ಮನಹಳ್ಳಿಯ ಈಶ್ವರ ದೇವಸ್ಥಾನದ ಬಳಿ ದನ ಕರು. ಕುರಿ. ನಾಯಿಗಳೊಂದಿಗೆ ಸೇರಿದ್ದ ಗ್ರಾಮಸ್ಥರು,  ಅಲ್ಲಿಂದ ಬಿಜೆಪಿ ಹಿಂದುಳಿದ ಘಟಕದ ಜಿಲ್ಲಾ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ನೇತೃತ್ವದಲ್ಲಿ,  ಖಾಲಿ ಕೊಡಗಳನ್ನು ಹಿಡಿದು ದನಕರುಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಶಿಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದರು.  ಜನತೆಗೂ ಮತ್ತು ಈ ದನಕರುಗಳಿಗೆ ನೀರು ಮೇವಿಲ್ಲ ಎಂದು ಜಿಲ್ಲಾಡಳಿತಕ್ಕೆ ಅರ್ಥಮಾಡಿಸುವ ಉದ್ದೇಶದಿಂದ ಇಂಥ ಪ್ರತಿಭಟನೆ ಮಾಡಲಾಗಿದೆ ಎಂದು ಕೊಟ್ರೇಶ್‌ ಹೇಳಿದ್ದಾರೆ.
ತಾಲೂಕಿನಲ್ಲಿ ಈವರೆಗೆ ಗೋಶಾಲೆ ತೆರೆದಿಲ್ಲ. ಅಗತ್ಯ ಮೇವು ದೊರೆತಿಲ್ಲ ಮತ್ತು  ಜಿಲ್ಲಾಡಳಿತ ಕುರಿಗಾಹಿ, ರೈತರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು  ಆರೋಪಿಸಿದ್ದಾರೆ. ಈ ಕೂಡಲೇ ಅಗತ್ಯ ನೀರು ಮತ್ತು ಗೋಶಾಲೆ ವ್ಯವಸ್ಥೆ ಮಾಡಬೇಕು ಮತ್ತು ರೈತರ ಸಾಲ‌ಮನ್ನಾ ಮಾಡಬೇಕೆಂದು ಕೊಟ್ರೇಶ್ ಆಗ್ರಹಿಸಿದ್ದಾರೆ.

Comments are closed.

Social Media Auto Publish Powered By : XYZScripts.com