ಕೈ ಮುಖಂಡರಿಂದಲೇ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ : ಸಿ.ಎಂ ವಿರುದ್ಧ ದಿಕ್ಕಾರ ಕೂಗಿದ ಕಾಂಗ್ರೆಸ್‌ ನಾಯಕರು

ಕೊಪ್ಪಳ : ಕಾಂಗ್ರೆಸ್ ಮುಖಂಡರೇ ಬಾವುಟ ಹಿಡಿದು ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ಕೊಪ್ಪಳದಲ್ಲಿ ನಡೆದಿದೆ.  ಕೊಪ್ಪಳಕ್ಕೆ ಆಗಮಿಸಿದ ಕಾಂಗ್ರಸ್ ವೀಕ್ಷಕ ತಂಡದ ಮುಂದೆ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್, ಕರಿಯಣ್ಣ ಸಂಗಟಿ ಮತ್ತವರ ಬೆಂಬಲಿಗರು,  ಸಿಎಂ ಸಿದ್ದರಾಮಯ್ಯ ಹಠಾವ್, ಕಾಂಗ್ರೆಸ್ ಬಚಾವ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ, ಸಿಎಂ ಸಿದ್ದರಾಮಯ್ಯ ನಿಂದ ಕಾಂಗ್ರೆಸ್ ಸರ್ವನಾಶವಾಗುತ್ತಿದೆ,  ಮೂಲ ಕಾಂಗ್ರೆಸಿಗರನ್ನ ಕಡೆಗಣಿಸುತ್ತಿದ್ದಾರೆ, ಗಂಗಾವತಿಯಲ್ಲಿ ಕಾಂಗ್ರೆಸ್ ಕಾರ್ಯ ಸಂಪೂರ್ಣ ನೆಲಸಮ ವಾಗುತ್ತಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡ ಈ ನಾಯಕರು, ಎಐಸಿಸಿ ಕಾರ್ಯದರ್ಶಿ ಹಾಗೂ ಕಲಬುರ್ಗಿ ವಿಭಾಗದ ಕಾಂಗ್ರೆಸ್ ವೀಕ್ಷಕ ಶೈಲೇಶನಾಥ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಸಿಎಂ ಸಿದ್ದರಾಮಯ್ಯಗೆ ದಿಕ್ಕಾರ ಕೂಗಿದ ಇವರು  ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಖರ್ಗೆ, ಡಿಕೆಶಿ, ಪರಮೇಶ್ವರ್ ಗೆ ಜಯವಾಗಲಿ ಎಂದು ಕೂಗಿದರು.
ನಂತರ ಮಾತನಾಡಿದ ಮಾಜಿ ಎಂಎಲ್‌ಸಿ ಎಚ್ .ಆರ್.ಶ್ರೀನಾಥ್,  ಸಿದ್ದರಾಮಯ್ಯ ನಾಲಾಯಕ್ ಮುಖ್ಯಮಂತ್ರಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋದರೆ ಮೂಲ ಕಾಂಗ್ರೆಸ್ಸಿಗರು  ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಮೂಲ ಕಾಂಗ್ರೆಸ್ಸಿಗರು ಹೋರಾಟ ಆರಂಭಿಸಲಿದ್ದಾರೆ ಎಂದಿದ್ದಲ್ಲದೆ, ಕೂಡಲೇ ಸಿದ್ದರಾಮಯ್ಯ ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.  ದಲಿತರು ಅಥವಾ ಅದೇ ಸಮುದಾಯದ ಎಚ್.‌ವಿಶ್ವನಾಥ ಸೇರಿ ಯಾರನ್ನಾದರೂ ಸಿಎಂ ಮಾಡಲಿ, ಇಲ್ಲವಾದರೆ ರಾಜ್ಯದಲ್ಲಿ ಕಾಂಗ್ರೆಸ್ ನೆಲಸಮವಾಗಲಿದೆ, ರಾಜ್ಯದ 28 ಜಿಲ್ಲೆಯಲ್ಲಿ ಸಿದ್ದರಾಮಯ್ಯ ಬದಲಾವಣೆ ಕುರಿತು ಸಭೆ ನಡೆಸಲಾಗಿದೆ,   ಮುಂದಿನ ಹೋರಾಟದ ಬಗ್ಗೆ ಶೀಘ್ರ ತೀರ್ಮಾನಿಸಲಾಗುವುದು ಎಂದು ಆರ್‌.ಶ್ರೀನಾಥ್‌ ತಿಳಿಸಿದ್ದಾರೆ.

Comments are closed.