ಕಲ್ಲೂರ ತಬಲಾ ವಿದ್ಯಾಲಯ, ಶಫೀಕ್ ಖಾನ್ ರ ಹೇಮಂತ ನಾದ….

ವಾರಾಂತ್ಯದ ಶನಿವಾರದ ಒಂದು ಸುಂದರ ಸಂಜೆ,  ಜಯನಗರದ ಜೆ.ಎಸ್.ಎಸ್ ಸಭಾಂಗಣದಲ್ಲಿ ಸಂಗೀತಾಸಕ್ತರು ಸೇರಿದ್ದರು. ಒಳಗಡೆ ಸುಸಜ್ಜಿತ ಸಭಾಂಗಣ, ವೇದಿಕೆ. ನಿರೂಪಕರಿಂದ ಪರಿಚಯ ಭಾಷಣ ಮುಗಿದ ನಂತರ ಖ್ಯಾತ ಕಲಾವಿದರಾದ ಉಸ್ತಾದ್ ಶಫೀಕ್ ಖಾನ್ ಹಾಗೂ ಪಂಡಿತ್ ರಂಜನ್ ಕುಮಾರ್ ಅವರಿಂದ ಸಿತಾರ್ – ವೈಯೋಲಿನ್ ಜುಗಲಬಂದಿ ಶುರುವಾಯಿತು. ರಾತ್ರಿ ಎರಡನೇ ಪ್ರಹರದ ರಾಗವಾದ ಹೇಮಂತ್ ನ ಆಲಾಪ್ ದೊಂದಿಗೆ ಆರಂಭಿಸಿ, ಜೋಡ್ ಹಾಗೂ ಝಾಲಾಗಳನ್ನು ನುಡಿಸಿ ಇಬ್ಬರೂ ಕಲಾವಿದರು ಪ್ರೇಕ್ಷಕರನ್ನು ನಿಧಾನವಾಗಿ ಬೇರೇಯೇ ಲೋಕಕ್ಕೆ ಕರೆದೊಯ್ದರು. ನಂತರ ರೂಪಕ್ ತಾಲ್ ಹಾಗೂ ಧೃತ್ ತೀನ್ ತಾಲ್ ನಲ್ಲಿ ನುಡಿಸಿದ ಎರಡು ಸಂಯೋಜನೆಗಳು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದವು. ಸಂಸ್ಥೆಯ ವಿದ್ಯಾರ್ಥಿ ರೂಪಕ್ ಕಲ್ಲೂರಕರ್ ತಬಲಾ ಸಾಥ್ ನೀಡಿದರು. ಸಿತಾರ್ ಹಾಗೂ ವೈಯಲಿನ್ ಮೂಲಕ ಕಲಾವಿದರಿಬ್ಬರು ಪರಸ್ಪರ ನಡೆಸಿದ ಸಂಭಾಷಣೆಯಂತಿದ್ದ ಅವರ ನುಡಿಸುವಿಕೆ ಹಾಗೂ ರಾಗ ಹೇಮಂತ್ ನ ವಿಶಿಷ್ಟತೆಗಳನ್ನು, ಭಾವಗಳನ್ನು ಒಂದೊಂದಾಗಿ ಉಣಬಡಿಸಿದ ರೀತಿಗೆ ಸಂಗೀತಾಸಕ್ತರು ತಲೆದೂಗಿದರು. ನಡುನಡುವೆ ವಾಹ್, ಕ್ಯಾ ಬಾತ್ ಹೈ ಎಂಬ ಉದ್ಗಾರಗಳೂ ಚಪ್ಪಾಳೆಗಳೂ ಕೇಳಿಬರುತ್ತಿದ್ದವು.

ಕಲ್ಲೂರ ಮಹಾಲಕ್ಷ್ಮಿ ತಬಲಾ ವಿದ್ಯಾಲಯದ 32 ನೆಯ ವಾರ್ಷಿಕೋತ್ಸವದ ಅಂಗವಾಗಿ ನಿನ್ನೆ ಜಯನಗರದ ಜೆ.ಎಸ್.ಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು. ಪಂಡಿತ್ ರಾಜಗೋಪಾಲ್ ಕಲ್ಲೂರಕರ್ ಅಧ್ಯಕ್ಷರಾಗಿರುವ KMTV ಸಂಸ್ಥೆಯ ಪರವಾಗಿ ಖ್ಯಾತ ತಬಲಾ ಕಲಾವಿದ ಪಂಡಿತ್  ರಘುನಾಥ್ ನಾಕೋಡ ಅವರಿಗೆ ‘ ಲಯ ಶ್ರೀ ಕಮಲ ‘ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ‘ ತಬಲಾ ಕಲಾವಿದರಿಗೆ ಹೆಚ್ಚು ಪ್ರಶಸ್ತಿಗಳು ಸಿಗುವುದಿಲ್ಲ, ನಾವು ಗಾಯಕರಿಗೆ ಹಾಗೂ ಎಲ್ಲ ತರದ ವಾದ್ಯಗಳಿಗೆ ಸಾಥ್ ನೀಡಬೇಕಾಗುತ್ತದೆ. ತಬಲಾ ತುಂಬ ಕಠಿಣ ವಾದ್ಯ, ಚರ್ಮದಿಂದ ನಾದ ಹೊರಡಿಸುವುದು ಸುಲಭದ ಮಾತಲ್ಲ ‘ ಎಂದು ಹೇಳಿದರು.

1880 ರಲ್ಲಿ ನಾನು ತಬಲಾ ಕಲಾವಿದರಾಗಿ ಕಾರ್ಯಕ್ರಮ ನೀಡಲು ಶುರುಮಾಡಿದೆ, ಆಗ ಜನ ರೇಡಿಯೋದ ಮೂಲಕ ಸಂಗೀತ ಕೇಳುತ್ತಿದ್ದರು, ಈಗ ಯಾರ ಮನೆಯಲ್ಲಿಯೂ ರೇಡಿಯೋ ಕಂಡುಬರುವುದಿಲ್ಲ, ಇದ್ದರೂ ಹಲವಾರು FM ಚಾನೆಲ್ ಗಳು ಹುಟ್ಟಿಕೊಂಡಿವೆ, ಟಿವಿಯಲ್ಲಿಯೂ ಶಾಸ್ತ್ರೀಯ ಸಂಗೀತಕ್ಕಿಂತ ಬೇರೆ ಮನೋರಂಜಕ ಕಾರ್ಯಕ್ರಮಗಳಿಗೇ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತಿದೆ, ದಯವಿಟ್ಟು ಎಲ್ಲರೂ ರೇಡಿಯೋ ಖರೀದಿಸಿ, ಕೇಳಿ ‘ ಎಂದರು. ಪ್ರಶಸ್ತಿಯನ್ನು ಪ್ರದಾನ ಮಾಡಲು ಆಗಮಿಸಿದ್ದ ಖ್ಯಾತ ಮೃದಂಗ ಕಲಾವಿದರಾದ ವಿದ್ವಾನ್ ಎ.ವಿ.ಆನಂದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ

‘ ರಘುನಾಥ ನಾಕೋಡ ಅದ್ಭುತ ಕಲಾವಿದರು, ದೇವರು ಅವರಿಗೆ ಆಯುರಾರೋಗ್ಯ ಕೊಟ್ಟು, ಅವರ ಕಲಾಸೇವೆ ಮುಂದುವರೆಯಲಿ, ಅನೇಕ ಸಮರ್ಥ ಶಿಷ್ಯರನ್ನು ತಯಾರು ಮಾಡುವಂತಾಗಲಿ ‘ ಎಂದು ಹಾರೈಸಿದರು. ಇದಾದ ನಂತರ ರಘುನಾಥ್ ನಾಕೋಡ ಅವರು ತಬಲಾ ಸೋಲೋ ಕಾರ್ಯಕ್ರಮ ನೀಡಿದರು. ಸತೀಶ ಕೊಳ್ಳಿ ಲೆಹರಾದಲ್ಲಿ ಸಾಥ್ ನೀಡಿದರು.ನಿನ್ನೆಯ ಕಾರ್ಯಕ್ರಮದಲ್ಲಿ ‘ Waves of Avanadh ‘ ಎಂಬ ಆಡಿಯೋ ಸಿಡಿಯನ್ನು ಕೂಡ ಬಿಡುಗಡೆಗೊಳಿಸಲಾಯಿತು. ಹಿರಿಯ ಗಾಯಕ ಪಂಡಿತ್ ವಿನಾಯಕ ತೊರವಿ, ಸಾರಂಗಿ ಕಲಾವಿದ ಉಸ್ತಾದ್ ಫಯಾಜ್ ಖಾನ್ ಉಪಸ್ಥಿತರಿದ್ದರು.

 

One thought on “ಕಲ್ಲೂರ ತಬಲಾ ವಿದ್ಯಾಲಯ, ಶಫೀಕ್ ಖಾನ್ ರ ಹೇಮಂತ ನಾದ….

Comments are closed.

Social Media Auto Publish Powered By : XYZScripts.com