ರೈತರು ಅವರ ಕೆಲಕ್ಕೆ ಸಂಬಳ ಪಡೆಯಲ್ಲ, ಹೀಗಾಗಿ ಕೃಷಿಗೆ ಟ್ಯಾಕ್ಸ್‌ ಹಾಕುವ ಚಿಂತನೆ ತಪ್ಪು: ಸಿ.ಎಂ ಸಿದ್ದರಾಮಯ್ಯ

ಮೈಸೂರು: ಯಾವ ಕಾಲದಲ್ಲೂ ಕೃಷಿಗೆ ಟ್ಯಾಕ್ಸ್ ಹಾಕಿಲ್ಲ,  ರೈತರು ಅವರ ಕೆಲಸಕ್ಕೆ ಕೂಲಿ ಪಡೆಯೋದಿಲ್ಲ. ಹೀಗಾಗಿ ಕೃಷಿಗೆ ಟ್ಯಾಕ್ಸ್ ಹಾಕುವ ಚಿಂತನೆ ತಪ್ಪು ಎಂದು ಕೇಂದ್ರ ರೈತರಿಗೆ ಆದಾಯ ತೆರಿಗೆ ವಿಧಿಸುವ ವಿಚಾರದ ಕುರಿತು ಸಿ.ಎಂ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನ ಸ್ಪಷ್ಟಪಡಿಸಿದ್ದಾರೆ. ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕೇಂದ್ರ ಸರ್ಕಾರ 3 ವರ್ಷದಲ್ಲಿ ರೈತರಿಗೆ ಹೇಳಿಕೊಳ್ಳುವ ಯಾವ ಕೆಲಸವನ್ನೂ ಮಾಡಿಲ್ಲ. ಬಿಜೆಪಿ ನಾಯಕರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮೇಲೆ ವಾಗ್ದಾಳಿ ಮುಂದುವರೆಸಿದ ಸಿದ್ದರಾಮಯ್ಯ, ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿಯವರದ್ದು ದ್ವಂದ್ವ ನಿಲುವು, ಯಡಿಯೂರಪ್ಪ ಸಾಲ ಮನ್ನಾ ಮಾಡಲು ಈಗ ಒತ್ತಾಯಿಸುತ್ತಾರೆ,  ಆರ್.ಬಿ.ಐ ಸಾಲ ಮನ್ನಾ ಮಾಡಬಾರದು ಅಂತ ಹೇಳಿದೆ,  ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಲ ಮನ್ನಾ ಒತ್ತಾಯ ಮಾಡಿದಕ್ಕೆ ನನ್ನ ಬಳಿ ನೋಟು ಪ್ರಿಂಟಿಂಗ್ ಯಂತ್ರವಿಲ್ಲ ಎಂಬ ಉತ್ತರ ನೀಡಿದ್ದರು ಎಂದಿದ್ದಾರೆ. ಇನ್ನು ಬಿಎಸ್‌ವೈ ರಾಜ್ಯ ಪ್ರವಾಸದ ವೇಳೆ ದಲಿತರ ಮನೆಯಲ್ಲಿ ಊಟಮಾಡುತ್ತಾರೆ ಎಂಬ ವಿಚಾರದ ಕುರಿತು ಮಾತನಾಡಿ, ಯಡಿಯೂರಪ್ಪನವರಿಗೆ ದಲಿತರ ಬಗ್ಗೆ ಗೌರವ ಇಲ್ಲ. ದಲಿತರ ಬಗ್ಗೆ ಕಾಳಜಿಯಿಲ್ಲ. ಈಗ ಓಟಿಗಾಗಿ ತೋರಿಕೆಯ ಕಾಳಜಿ ತೋರಿಸುತ್ತಿದ್ದಾರೆ , ಇವರ ನಾಟಕ ಜನರಿಗೆ ಗೊತ್ತಿದೆ ಎಂದರು.
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ತನಿಖೆಗೆ ನಮ್ಮ ವಿರೋಧವಿಲ್ಲ.  ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ.
ಈ ಸಂಬಂಧ ನಾನು ಉತ್ತರಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದರು. ರಾಜ್ಯದಲ್ಲಿ ಅಮಿತ್ ಷಾ ನಡೆಸಲಿರುವ ಸಮೀಕ್ಷೆ ವಿಚಾರವಾಗಿ ಮಾತನಾಡಿ, ನಾನು ಸಹ ರಾಜ್ಯದಲ್ಲಿ ಸಮೀಕ್ಷೆ ಮಾಡಿಸುತ್ತಿದ್ದೇನೆ.ಖಾಸಗಿ ಸಂಸ್ಥೆಯಿಂದ ಕ್ಷೇತ್ರದ ಶಾಸಕರು ಮಾಜಿ ಶಾಸಕರು ಬಗ್ಗೆ ಸಮೀಕ್ಷೆ ನಡೆಯುತ್ತಿದೆ ಎಂಬ ವಿಚಾರವನ್ನ ತಿಳಿಸಿದ್ದಾರೆ.

Comments are closed.